Advertisement

ಕಂಬಳ ವಿರುದ್ಧದ ಪೆಟಾ ಅರ್ಜಿ ವಜಾ

06:15 AM Mar 13, 2018 | |

ಮಂಗಳೂರು: ರಾಜ್ಯದಲ್ಲಿ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಪೆಟಾ (ಪೀಪಲ್‌ ಫಾರ್‌ ದ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್‌) ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಇದರೊಂದಿಗೆ ಕಂಬಳ ಆಯೋಜಿಸುವುದಕ್ಕೆ ಎದುರಾಗಿದ್ದ ಕಾನೂನು ಸಂಘರ್ಷ ಸದ್ಯಕ್ಕೆ ತೆರೆ ಕಂಡಿದೆ.

Advertisement

ಈ ಹಿಂದೆ ಪೆಟಾ ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆಯನ್ನು ಸೋಮವಾರ ನಡೆಸಿದ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠವು ಪೆಟಾ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿತು. ರಾಜ್ಯದಲ್ಲಿ ಕಂಬಳಕ್ಕೆ ಅವಕಾಶ ನೀಡಿ ಹೊರಡಿಸಿರುವ ಅಧ್ಯಾದೇಶ ಜಾರಿ ಮಾಡಿರುವ ರೀತಿ ಸರಿಯಲ್ಲ, ಅದು ಕಾನೂನಿಗೆ ವಿರುದ್ಧವಾಗಿದೆ. ಆದುದರಿಂದ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಪೆಟಾದವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಕಂಬಳ ಮಸೂದೆ ಈಗಾಗಲೇ ರಾಜ್ಯ ಸರಕಾರ ದಿಂದ ಅನುಮೋದನೆಗೊಂಡು ರಾಷ್ಟ್ರಪತಿಗಳ ಅಂಕಿತ ದೊಂದಿಗೆ ಕಾನೂನು ಆಗಿ ಜಾರಿಗೆ ಬಂದಿದೆ. ಹೀಗಾಗಿ ಪೆಟಾದವರು ಅರ್ಜಿಯಲ್ಲಿ ಉಲ್ಲೇಖೀ ಸಿರುವ ವಿಚಾರ ಸಿಂಧುವಾಗುವುದಿಲ್ಲ ಎಂದು ನ್ಯಾಯಾ ಲಯದಲ್ಲಿ ಕರ್ನಾಟಕ ಸರಕಾರದ ಪರ ವಕೀಲರು ವಾದ ಮಂಡಿಸಿದ್ದರು. ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾ| ದೀಪಕ್‌ ಮಿಶ್ರಾ, ನ್ಯಾ| ಎ.ಎಂ. ಕಾನ್ವಿಲ್ಕರ್‌ ಹಾಗೂ ನ್ಯಾ| ಡಿ.ವೈ. ಚಂದ್ರಚೂಡ್‌ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠವು ಅರ್ಜಿಯನ್ನು ಸೋಮವಾರ ವಜಾಗೊಳಿಸಿದೆ. 

ಇದಕ್ಕೂ ಮೊದಲು ಕರ್ನಾಟಕ ಸರಕಾರ ರೂಪಿ ಸಿರುವ ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಪರಿಷ್ಕೃತ ಮಸೂದೆಯಲ್ಲಿಯೂ ಲೋಪ ದೋಷ ಗಳಿವೆ ಎಂಬುದಾಗಿ ಪೆಟಾ ಸಂಘಟನೆ ಪರ ವಕೀಲರು ಮಂಡಿಸಿದ ವಾದವನ್ನು ಆಲಿಸಿದ ನ್ಯಾಯ ಪೀಠವು, ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬಹುದು ಎಂದು ಅಭಿಪ್ರಾಯಪಟ್ಟಿತು.

ರಾಜ್ಯ ಸರಕಾರ ಈಗಾಗಲೇ ರೂಪಿಸಿರುವ ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಪರಿಷ್ಕೃತ ಮಸೂದೆಗೆ ಫೆ. 10ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅಂಕಿತ ಹಾಕಿದ್ದು, ಕಾನೂನು ಆಗಿ ಜಾರಿಗೆ ಬಂದಿದೆ. ಈ ಮೂಲಕ ಕಂಬಳಕ್ಕೆ ಎದುರಾಗಿದ್ದ ಕಾನೂನಾತ್ಮಕ ಅಡಚಣೆ ದೂರವಾಗಿತ್ತು. ಪೆಟಾದವರು ಸಲ್ಲಿಸಿದ್ದ ಅರ್ಜಿ ಕೂಡ ಸೋಮವಾರ ವಜಾಗೊಂಡಿರುವುದರಿಂದ ಕಂಬಳ ಆಯೋಜನೆಗೆ ಸದ್ಯಕ್ಕೆ ಯಾವುದೇ ರೀತಿಯ ಕಾನೂನು ತೊಡಕು ಇಲ್ಲ.

Advertisement

ಕಂಬಳ ಕಾನೂನು ಹೋರಾಟ
ಕರ್ನಾಟಕ ಸರಕಾರ ಕಳೆದ ಆ.20ರಂದು ಅಧ್ಯಾದೇಶವನ್ನು ಹೊರಡಿಸಿ ಕಂಬಳ ಆಯೋಜನೆಗೆ ಅನುವು ಮಾಡಿಕೊಟ್ಟಿದ್ದು, ಅದು ಜ.20ರ ವರೆಗೆ ಊರ್ಜಿತದಲ್ಲಿತ್ತು. ಈ ನಡುವೆ ಕಂಬಳ ವಿರುದ್ಧ ಮತ್ತೆ ಪೆಟಾ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಕಂಬಳಕ್ಕೆ ಅವಕಾಶ ನೀಡಿ ಹೊರಡಿಸಿರುವ ಅಧ್ಯಾದೇಶ ಜಾರಿ ಮಾಡಿರುವ ರೀತಿ ಸರಿಯಿಲ್ಲ, ಅದು ಕಾನೂನಿಗೆ ವಿರುದ್ಧವಾಗಿದೆ ಎಂದು ವಾದಿಸಿ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿತ್ತು. ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ನ್ಯಾ| ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ 2017ರ ನ. 6ರಂದು ಆರಂಭಿಸಿತ್ತು. ನ. 13, ನ. 17, ನ. 24; ಡಿ. 12 ಮತ್ತು ಫೆ. 12ರಂದು ವಿಚಾರಣೆ ನಡೆಸಿದ ನ್ಯಾಯಪೀಠವು ವಿಚಾರಣೆಯನ್ನು ಮಾ. 12ಕ್ಕೆ ಮುಂದೂಡಿತ್ತು. ಕಂಬಳಕ್ಕೆ ತಡೆಯಾಜ್ಞೆ ನೀಡ ಬೇಕು ಎಂದು ವಿಚಾರಣೆ ಸಂದರ್ಭಗಳಲ್ಲಿ ಪೆಟಾ ದವರು ಮಾಡಿದ್ದ ಮನವಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದಾಗಿ ಈ ಋತುವಿನಲ್ಲಿ ಕಂಬಳ ನಿರಾತಂಕವಾಗಿ ನಡೆಯಲು ಸಾಧ್ಯವಾಗಿದೆ.

ತೀರ್ಪಿಗೆ ಸ್ವಾಗತ
ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಾಕೂìರು ಶಾಂತಾರಾಮ ಶೆಟ್ಟಿ, ಕಂಬಳ ಅಕಾಡೆಮಿಯ ಸಂಚಾಲಕ ಕೆ. ಗುಣಪಾಲ ಕಡಂಬ, ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಕಂಬಳದ ಬಗ್ಗೆ ಕಾನೂನು ಸಮರ ನಡೆಸುತ್ತಿರುವ ಅಶೋಕ್‌ ರೈ ಸಂತಸ ವ್ಯಕ್ತಪಡಿಸಿದ್ದಾರೆ.

ನಿರಾತಂಕವಾಗಿ ನಡೆದ ಕಂಬಳ
ಈ ಸಾಲಿನ ಕಂಬಳ ಋತುವಿನ ಕೊನೆಯ ಕಂಬಳ ಮಾ. 10ರಂದು ಕಕ್ಯಪದವಿನಲ್ಲಿ ಯಶಸ್ವಿ ಯಾಗಿ ನಡೆದಿದೆ. ಇದರೊಂದಿಗೆ 2017- 18ನೇ ಸಾಲಿನಲ್ಲಿ ಅವಿಭಜಿತ ಜಿಲ್ಲಾ ಕಂಬಳ ಸಮಿತಿ ನಿಗದಿಪಡಿಸಿರುವ ಎಲ್ಲ  ಕಂಬಳ ಗಳು ನಿರಾತಂಕವಾಗಿ ಮುಕ್ತಾಯಗೊಂಡಿವೆ. ಈ ಋತುವಿನ ಪ್ರಥಮ ಕಂಬಳ ಕಳೆದ ನ. 11ರಂದು ಮೂಡಬಿದಿರೆಯ ಕಡಲಕರೆ ನಿಸರ್ಗ ಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದ ಕೋಟಿ – ಚೆನ್ನಯ ಜೋಡುಕರೆ ಯಲ್ಲಿ ನಡೆದಿತ್ತು. ಕಂಬಳ ಸಮಿತಿಯಿಂದ ಈ ಋತುವಿನಲ್ಲಿ ಒಟ್ಟು 19 ಕಂಬಳಗಳು ನಿಗದಿಯಾಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next