ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಬೆಳವಣಿಗೆಗಳಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಟ್ವೀಟ್ ಮಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಪಕ್ಷದಲ್ಲಿನ ಅಹಿತಕರ ವಿದ್ಯಮಾನದಿಂದ ಬೇಸತ್ತು ಈ ರೀತಿಯ ನಿರ್ಧಾರಕ್ಕೆ ಬಂದಿದ್ದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ನಾಯಕರು ರಾಜೀನಾಮೆ ನೀಡದಂತೆ ಸೂಚಿಸಿರುವುದರಿಂದ ರಾಜೀನಾಮೆ ನಿರ್ಧಾರ ಕೈಬಿಟ್ಟಿದ್ದೇನೆ ಎಂದು ಡಾ. ಸುಧಾಕರ್ ಹೇಳಿದ್ದಾರೆ.
ರಾಜೀನಾಮೆ ನೀಡುವುದಾಗಿ ಹೇಳಿದ್ದರಿಂದ ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಸದಾಶಿವ ನಗರದ ಅವರ ಮನೆ ಮುಂದೆ ಬೆಂಬಲಿಗರು ಬಂದು ರಾಜೀನಾಮೆ ನೀಡದಂತೆ ಒತ್ತಡಹಾಕಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ, ಬೆಂಗಳೂರು ವಿಭಾಗದ ಎಐಸಿಸಿ ಕಾರ್ಯದರ್ಶಿ ಮಧು ಯಾಸ್ಕಿ ಗೌಡ ಸಹ ರಾಜೀನಾಮೆ ನೀಡದಂತೆ ಸುಧಾಕರ್ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.
ಮನವೊಲಿಕೆ ಸಭೆ ನಂತರ ಮಾತನಾಡಿದ ಡಾ. ಸುಧಾಕರ್, ಪ್ರತಿ ಪಕ್ಷಗಳ ವಿರೋಧ ಎದುರಿಸಬಹುದು. ಆದರೆ, ನಮ್ಮ ಪಕ್ಷದವರೇ ನನ್ನ ಏಳಿಗೆ ಸಹಿಸದೇ ಅಪಪ್ರಚಾರ ಮಾಡಿದರೆ, ಸಹಿಸುವುದು ಸಾಧ್ಯವಿಲ್ಲ. ಕಳೆದ ಎರಡು ದಿನದಲ್ಲಿ ರಾಜಕೀಯದಿಂದಲೇ ದೂರ ಉಳಿಯಬೇಕೆಂದು ನಿರ್ಧರಿಸಿದೆ.
ಕಲುಷಿತ ರಾಜಕೀಯದಲ್ಲಿ ಮಿನುಗುತಾರೆಯಾಗಿ ಉಳಿಯುವ ಹಂಬಲ ನನ್ನದು. ರಾಜಕೀಯದಲ್ಲಿ ನನ್ನದೇ ಆದ ಆದರ್ಶಗಳನ್ನು ಇಟ್ಟುಕೊಂಡು ಬಂದಿದ್ದೇನೆ. ನನಗೆ ನನ್ನದೇ ಆದ ಚಾರಿತ್ರ್ಯ ಇದೆ. ಗುರುವಾರ ನಡೆದ ಜಿಲ್ಲಾ ಮುಖಂಡರ ಸಭೆಯಲ್ಲಿ ನನ್ನ ಚಾರಿತ್ರ್ಯ ವಧೆ ಮಾಡುವ ರೀತಿಯಲ್ಲಿ ಜಿಲ್ಲೆಯ ನಾಯಕರು ಮಾತನಾಡಿದರು. ಅದು ನನ್ನ ಮನಸ್ಸಿಗೆ ನೋವುಂಟು ಮಾಡಿತು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನ ತಲಾ ಮೂವತ್ತು ತಿಂಗಳ ಅವಧಿಗೆ ಒಪ್ಪಂದ ಆಗಿತ್ತು. ಆದರೆ, ಕಳೆದ ಎರಡು ತಿಂಗಳಿಂದ ಯಾವುದೇ ಸಭೆ ನಡೆಸಲು ಬಿಟ್ಟಿರಲಿಲ್ಲ. ಈಗ ಏಕಾ ಏಕಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯತ್ನಿಸಲಾಯಿತು. ಈ ಬೆಳವಣಿಗೆಯಿಂದ ನನ್ನ ಮನಸಿಗೆ ಬೇಸರವಾಗಿ ರಾಜೀನಾಮೆ ನಿರ್ಧಾರ ಮಾಡಿದ್ದೇ ಎಂದು ಹೇಳಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದ ಮಾತ್ರಕ್ಕೆ ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಅನುಯಾಯಿ, ನನ್ನ ಜೀವನ ಇರುವವರೆಗೂ ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ. ಆದರೆ, ರಾಜಕೀಯದಲ್ಲಿ ಇರಬೇಕೋ ಬೇಡವೋ ಎಂದು ಯೋಚನೆ ಮಾಡಿದ್ದೆ. ನನ್ನ ಕ್ಷೇತ್ರದ ಜನರು, ಪಕ್ಷದ ಹಿರಿಯರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಉಸ್ತುವಾರಿ ಕಾರ್ಯದರ್ಶಿ ಮಧು ಯಾಸ್ಕಿ ಗೌಡ, ಬಾಗೇಪಲ್ಲಿ ಶಾಸಕ ಸುಬ್ಟಾ ರೆಡ್ಡಿ, ಸಂಸದ ಮುನಿಯಪ್ಪ ಎಲ್ಲರೂ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ. ಬೇರೆ ಪಕ್ಷಕ್ಕೆ ಸೇರುವ ಮಾತೇ ಇಲ್ಲ ಎಂದು ಹೇಳಿದರು.
ಡಾ. ಸುಧಾಕರ್ ಅವರನ್ನು ಮನವೊಲಿಸಿದ ನಂತರ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸುಧಾಕರ್ ಅವರು ಜಿಲ್ಲೆಯಲ್ಲಿನ ಕೆಲವು ಬೆಳವಣಿಗೆಗಳಿಂದ ಬೇಸತ್ತು ರಾಜೀನಾಮೆಗೆ ನಿರ್ಧರಿಸಿದ್ದರು. ಈಗ ರಾಜೀನಾಮೆ ನಿರ್ಧಾರ ಹಿಂಪಡೆದಿದ್ದಾರೆ ಎಂದು ಹೇಳಿದರು.
ಬಿಜೆಪಿ ಸೇರುವ ವದಂತಿ: ಡಾ. ಸುಧಾಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ತಕ್ಷಣ ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಆತ್ಮೀಯರಾಗಿದ್ದ ಸುಧಾಕರ್ ಕೃಷ್ಣ ಅವರ ಹಾದಿ ತುಳಿಯುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದವು. ಆದರೆ, ಅದೆಲ್ಲವನ್ನು ಸುಧಾಕರ್ ಅಲ್ಲಗಳೆದಿದ್ದಾರೆ.
ರಾಜೀನಾಮೆಗೆ
ಮುಂದಾಗಿದ್ದೇಕೆ?
ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ಹಾಗೂ ಶಾಸಕ ಸುಧಾಕರ್ ಅವರ ತಂದೆ ಕೇಶವ ರೆಡ್ಡಿ ಅವರನ್ನು ಅಧ್ಯಕ್ಷ ಸ್ಥಾನ
ದಿಂದ ಕೆಳಗಿಳಿಸಬೇಕೆಂದು ಗೌರಿ ಬಿದನೂರು ಶಾಸಕ ಶಿವಶಂಕರ ರೆಡ್ಡಿ ಹಾಗೂ ಕೆಲವು ಜಿಪಂ ಸದಸ್ಯರು
ಆಗ್ರಹಿಸಿದ್ದರು. ಈ ಕುರಿತಂತೆ ಗುರುವಾರ ಸಿಎಂ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ಆ ಸಭೆಯಲ್ಲಿ ಶಿವಶಂಕರ ರೆಡ್ಡಿ ಮತ್ತು ಸುಧಾಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಬೇಸತ್ತ ಶಾಸಕ ಡಾ. ಸುಧಾಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಟ್ವೀಟ್ ಮಾಡಿದ್ದರು.