Advertisement

ಡೆತ್‌ನೋಟ್‌ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

11:38 AM Mar 30, 2018 | Team Udayavani |

ಬೆಂಗಳೂರು: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಡೆತ್‌ನೋಟ್‌ ಬರೆದಿಟ್ಟು ಉದ್ಯಾನದಲ್ಲಿ ನೇಣಿಗೆ ಶರಣಾಗಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

Advertisement

ಕಲ್ಲೇಶ್‌ಗೌಡ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತುಮಕೂರು ಮೂಲದ ಅನ್ನಪೂರ್ಣೇಶ್ವರಿನಗರ ನಿವಾಸಿ ಕಲ್ಲೇಶ್‌ಗೌಡ ಸಿಎಂಎಸ್‌ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಎಟಿಎಂ ಕೇಂದ್ರಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದು, ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ.

ಈ ಸಂಬಂಧ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು. ಈ ಮಧ್ಯೆ ಕಾಮಾಕ್ಷಿಪಾಳ್ಯದ ಪಟ್ಟೇಗಾರಪಾಳ್ಯದ ಉದ್ಯಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೊತೆಗೆ ಡೆತ್‌ನೋಟ್‌ ದೊರೆತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಹೋದ್ಯೋಗಿಗಳ ವಿರುದ್ಧ ಆರೋಪ: ಎಟಿಎಂಗೆ ಹಣ ಹಾಕುವ ವಿಚಾರದಲ್ಲಿ 32 ಲಕ್ಷ ಹಣ ವ್ಯತ್ಯಯವಾಗಿದ್ದು, ಈ ಸಂಬಂಧ ಸಿಎಂಎಸ್‌ ಎಜೆನ್ಸಿ ಕೆಲವರನ್ನು ವಿಚಾರಣೆ ನಡೆಸುತ್ತಿದೆ. ಆಡಿಟಿಂಗ್‌ ಕೂಡ ನಡೆಸುತ್ತಿದೆ. ಇದರಲ್ಲಿ ಕಲ್ಲೇಶಗೌಡನ ಪಾತ್ರದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಈ ಸಂಬಂಧ ಕಲ್ಲೇಶ್‌ಗೌಡನಿಗೆ ರಾಜಶೇಖರ್‌ ಹಾಗೂ ರಘುನಾಥ್‌ ಎಂಬುವವರು ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದರು.

ಈ ಕುರಿತು ಕಲ್ಲೇಶ್‌ಗೌಡ ಆತ್ಮಹತ್ಯೆಗೂ ಮೊದಲು ರಾಜಶೇಖರ್‌ ಮತ್ತು ರಘುನಾಥ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಆತ್ಮಹತ್ಯೆಗೆ ಮೊದಲು ನನ್ನ ಸಾವಿಗೆ ಅವರೇ ಕಾರಣ ನನ್ನದೇನು ತಪ್ಪಿಲ್ಲ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದಾನೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪತ್ನಿಗೆ ಕರೆ ಮಾಡಿದ್ದ ಕಲ್ಲೇಶ್‌: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಲ್ಲೇಶ್‌ಗೌಡ ಬುಧವಾರ ರಾತ್ರಿ ಪತ್ನಿಗೆ ಕರೆ ಮಾಡಿ ಸಹೋದ್ಯೋಗಿಗಳು ಕಿರುಕುಳ ನೀಡುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಕ್ಕೆ ಹೆದರಿ ಆತ್ಮಹತ್ಯೆ?: ಜ.29ರಂದು ಜ್ಞಾನಭಾರತಿ ಠಾಣೆ ವ್ಯಾಪ್ತಿ ಉಲ್ಲಾಳ ವೃತ್ತದಲ್ಲಿ ಭದ್ರತಾ ಸಿಬ್ಬಂದಿಗೆ ಬಾಳೆಹಣ್ಣು ತರಲು ಹೇಳಿ 90 ಲಕ್ಷ ರೂ. ಜತೆ ನಾಪತ್ತೆಯಾಗಿದ್ದ ಆರೋಪಿಗಳಾದ ನರಸಿಂಹಮೂರ್ತಿ, ನಾರಾಯಣಸ್ವಾಮಿ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಇವರಿಗೆ ನೆರವು ನೀಡಿದ ಆರೋಪದಡಿ ಎರಡು ತಿಂಗಳಿಂದ ಸೆಕ್ಯೂರಿಟಿ ಏಜೆನ್ಸಿ ವಿಚಾರಣೆ ನಡೆಸುತ್ತಿದ್ದು, ಸದ್ಯ ಸಿಎಂಎಸ್‌ ಕಂಪನಿಯಲ್ಲಿ ಆಡಿಟಿಂಗ್‌ ನಡೆಯುತ್ತಿದೆ. ಇಲ್ಲಿ ಕಲ್ಲೇಶ್‌ಗೌಡನ ಪಾತ್ರವಿರುವುದು ಪತ್ತೆಯಾಗಿತ್ತು. ಇದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಪೊಲೀಸರು ಈ ಬಗ್ಗೆ ಸ್ಪಷ್ಟಪಡಿಸಲು ನಿರಾಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next