ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜ. 18ರಂದು ಆರಂಭಗೊಂಡ ಅದಮಾರು ಮಠ ಪರ್ಯಾಯದ ದರ್ಬಾರ್ ಸಭೆ ಬುಧವಾರ ಸಮಾಪನಗೊಂಡಿತು. ಅಧಿಕಾರವಿರುವಾಗ ಎಲ್ಲವೂ ಖುಷಿಯಾಗುತ್ತದೆ, ಅಧಿಕಾರ ಹೋಗುವಾಗ ಬೇಸರವಾಗುತ್ತದೆ. ಆದ್ದರಿಂದ ವ್ಯಕ್ತಿಯನ್ನಾಗಲೀ, ಹುದ್ದೆಯನ್ನಾಗಲೀ ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳವುದು ಒಳ್ಳೆಯ ದಲ್ಲ. ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೊ. ಈ ಶರೀರವೂ ಕೂಡ ಬಾಡಿಗೆ ಮನೆಯಂತೆ. ಆತ್ಮ ಮಾತ್ರ ನಿತ್ಯಸತ್ಯ.
ಜೀವರು(ಆತ್ಮ)ಗಳು ಈ ಶರೀರವನ್ನು ನಿರಂತರ ಸಾಧನೆಗಾಗಿ ಬಳಸಿಕೊಳ್ಳಬೇಕು ಎಂಬ ಸಂದೇಶ ಶ್ರೀಮದ್ಭಾಗವತದಲ್ಲಿ ಸಿಗುತ್ತದೆ. ಪರ್ಯಾಯೋತ್ಸವದಲ್ಲಿ ಸಹಕರಿಸಿ ದವರಿಗೆಲ್ಲರಿಗೂ ಶ್ರೀದೇವರು ಅನುಗ್ರಹಿಸಲಿ ಎಂದು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವದಿಸಿದರು.
ದಿಯಾ ಸಿಸ್ಟಮ್ಸ್‌ನ ಡಾ| ರವಿಚಂದ್ರನ್ ಅವರನ್ನು ಪರ್ಯಾಯ ದರ್ಬಾರ್ ಸಮ್ಮಾನದಿಂದ ಮತ್ತು ವಿಧಾನ ಪರಿಷತ್ ಅರ್ಜಿ ಸಮಿತಿ ಅಧ್ಯಕ್ಷ ಮತ್ತು ಉಪಸಭಾಪತಿ ಧರ್ಮೇಗೌಡ ಮತ್ತು ಸಮಿತಿ ಸದಸ್ಯರನ್ನು ಗೌರವಿಸಲಾಯಿತು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಕಾರ್ಪೊರೇಶನ್ ಬ್ಯಾಂಕ್ ಆಡಳಿತ ನಿರ್ದೇಶಕಿ ಪಿ.ವಿ. ಭಾರತಿ, ಅದಾನಿ ಗ್ರೂಪ್‌ನ ಹಿರಿಯ ಅಧಿಕಾರಿ ಕಿಶೋರ್ ಆಳ್ವ, ಉದ್ಯಮಿ ಹರಿಯಪ್ಪ ಕೋಟ್ಯಾನ್, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ರಾಧಾಕೃಷ್ಣ ಆಚಾರ್ಯ ಶುಭ ಕೋರಿದರು.
ಓಂಪ್ರಕಾಶ ಭಟ್ ವಿರಚಿತ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಶ್ರೀಮಠದ ದಿವಾನ ಐ. ಲಕ್ಷ್ಮೀ ನಾರಾಯಣ ಮುಚ್ಚಿಂತಾಯ ಸ್ವಾಗತಿಸಿ ಶ್ರೀಕೃಷ್ಣ ಸೇವಾ ಬಳಗದ ಗೋವಿಂದರಾಜ್ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಬಳಗದ ಗೌರವಾಧ್ಯಕ್ಷ ಕೆ. ರಘುಪತಿ ಭಟ್, ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು.
ಗೌರವಾರ್ಪಣೆ
ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್‌ಪಿ ವಿಷ್ಣುವರ್ಧನ್, ಜಿ.ಪಂ. ಸಿಇಒ ಪ್ರೀತಿ ಗೆಹಲೋಟ್, ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಮೊದಲಾದವರನ್ನು ಗೌರವಿಸಲಾಯಿತು. ಶ್ರೀಕೃಷ್ಣ ಮಠದ ಮೇಸ್ತ್ರಿಯಾಗಿದ್ದ ಗುಂಡು ಮೇಸ್ತ್ರಿ ಸ್ಮರಣಾರ್ಥ ಕಾವಲುಗಾರ ನಾಗರಾಜ ಪರಮಪ್ಪ ಜಾಲಿ, ಪಾತ್ರೆಗಳನ್ನು ಶುಚಿಗೊಳಿಸುತ್ತಿದ್ದ ತುಕ್ರ ಮರಕಾಲರ ಸ್ಮರಣಾರ್ಥ ಹೊನ್ನಪ್ಪ ಯಮುನಪ್ಪ ಬಿ. ಶೆಟ್ಟಿಯವರಿಗೆ ಕೃಷ್ಣ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.