Advertisement

ಸ್ವರ್ಣಾ ನದಿ ಹೂಳೆತ್ತುವ ಪ್ರಕ್ರಿಯೆ ಆರಂಭ

12:34 AM Nov 08, 2019 | Sriram |

ಉಡುಪಿ: ಬೇಸಗೆಯಲ್ಲಿ ಉಡುಪಿ ನಗರದಲ್ಲಿ ಉಂಟಾಗುತ್ತಿದ್ದ ನೀರಿನ ಅಭಾವವನ್ನು ತಡೆಗಟ್ಟಲು ಕೊನೆಗೂ ಜಿಲ್ಲಾಡಳಿತ ಮುಂದಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಸ್ವರ್ಣಾ ನದಿಯಲ್ಲಿ ಕಳೆದ ಒಂದು ದಶಕದಿಂದ ತುಂಬಿರುವ ಹೂಳು ತೆರವು ಗೊಳಿಸಲು ಆರಂಭಿಸಲಾಗಿದ್ದು, ಮುಂದಿನ ಬೇಸಗೆಯಲ್ಲಿ ಉಡುಪಿ ನಗರಕ್ಕೆ ಕುಡಿಯುವ ನೀರಿನ ಬರ ತಟ್ಟದಂತೆ ಕ್ರಮಕೈಗೊಳ್ಳಲಾಗುತ್ತಿದೆ.

Advertisement

ಸ್ವರ್ಣಾ ನದಿಯ ಬಜೆಯಲ್ಲಿರುವ ಅಣೆಕಟ್ಟಿನಿಂದ ಮೇಲ್ಭಾಗದಲ್ಲಿ 7 ಕಿ.ಮೀ. ವ್ಯಾಪ್ತಿಯಲ್ಲಿ ಹೂಳು ತೆಗೆಯಲು ಟೆಂಡರ್‌ ಪಡೆದಿರುವ ಮಂಗಳೂರಿನ ಯೋಜಕ ಸಂಸ್ಥೆಯು ಕಳೆದ ಮೂರು ದಿನಗಳ ಹಿಂದೆ ನದಿಯಲ್ಲಿರುವ ಹೂಳು ತೆರವುಗೊಳಿಸಲು ಚಾಲನೆ ನೀಡಿದೆ. ಪ್ರಸ್ತುತ ಪುತ್ತಿಗೆ ಸೇತುವೆಯಿಂದ ಕೆಳಭಾಗದಲ್ಲಿ ತುಂಬಿ ರುವ ಹೂಳನ್ನು ಸಕ್ಕಿಂಗ್‌ ಯಂತ್ರಗಳ ಮೂಲಕ ತೆರವುಗೊಳಿಸಲಾಗುತ್ತಿದೆ. ಇದಕ್ಕಾಗಿ ಎರಡು ಸಕ್ಕಿಂಗ್‌ ಯಂತ್ರಗಳು ಹಾಗೂ ಮೂರು ಟಿಪ್ಪರ್‌, ಒಂದು ಜೆಸಿಬಿ ಹೂಳು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿವೆ. ಮುಂದಿನ ವಾರದಿಂದ ಇನ್ನೂ ಎರಡು ಸಕ್ಕಿಂಗ್‌ ಯಂತ್ರಗಳನ್ನು ಹಾಕಲಾಗುತ್ತದೆ. ಕಾಮಗಾರಿ ಪ್ರಕ್ರಿಯೆ 6 ತಿಂಗಳು ನಡೆಯಲಿದೆ ಎಂದು ಗುತ್ತಿಗೆ ಸಂಸ್ಥೆ ತಿಳಿಸಿದೆ.

ಮರಳಿನ ಆದಾಯ ನಗರಸಭೆಗೆ
ನದಿಯಲ್ಲಿ ಕಲ್ಲು, ಮಣ್ಣು, ಕಸ, ಕಡ್ಡಿಯನ್ನೊಳಗೊಂಡ ಹೂಳನ್ನು ತೆಗೆಯಲಾಗುತ್ತಿದೆ. ಆದರೆ ಅದೇ ರೀತಿ ಅದನ್ನು ಮಾರಾಟ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ನದಿ ದಡದಲ್ಲಿಯೇ ಜಾಲರಿ ಬಳಸಿ ಕಸಕಡ್ಡಿ, ದೊಡ್ಡ ಕಲ್ಲುಗಳಿಂದ ಮರಳನ್ನು ಪ್ರತ್ಯೇಕಿಸಲಾಗುತ್ತಿದೆ. ಆದರೆ ಗುತ್ತಿಗೆದಾರರಿಗೆ ಅವರು ತೆರವುಗೊಳಿಸುವ ಹೂಳಿನ ಪ್ರಮಾಣದಲ್ಲಿ ಹಣ ಪಾವತಿಯಾಗುತ್ತದೆ. ಪ್ರತ್ಯೇಕಿಸಿದ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಮಾರಾಟ ಮಾಡಿ ಬಂದ ಆದಾಯ ನಗರಸಭೆಗೆ ಸಿಗುತ್ತದೆ. ಮರಳನ್ನು ಸ್ಯಾಂಡ್‌ ಆ್ಯಪ್‌ ಮೂಲಕ ಖರೀದಿಸಬಹುದು.

ಗುಣಮಟ್ಟದ
ಮರಳು ಸಂಗ್ರಹ
ತೆರವುಗೊಳಿಸಿದ ಹೂಳನ್ನು ಸಂಗ್ರಹಿಸಲು ಹಿರಿಯಡ್ಕ ಬೊಮ್ಮರಬೆಟ್ಟು ಪಂಚಾಯತ್‌ ಕಟ್ಟಡದ ಹಿಂಭಾಗದ ಗಾಂಧಿ ಮೈದಾನದಲ್ಲಿ ಒಟ್ಟು 20 ಲ.ರೂ.ವೆಚ್ಚದಲ್ಲಿ ಸ್ಟಾಕ್‌ ಯಾರ್ಡ್‌ ನಿರ್ಮಿಸಲಾಗಿದೆ. ಸ್ಟಾಕ್‌ ಯಾರ್ಡ್‌ಗೆ ಜಿಯೋ ಫೆನ್ಸಿಂಗ್‌ ಅಳವಡಿಸಲಾಗಿದ್ದು, ಉತ್ತಮ ಗುಣಮಟ್ಟದ ಮರಳನ್ನು ಇಲ್ಲಿ ಸಂಗ್ರಹಿಸಲಾಗುತ್ತಿದೆ. ಇಲ್ಲಿ ಕಂಪ್ಯೂಟರ್‌, ಐದು ಸಿಸಿಟಿವಿ ಕೆಮರಾಗಳನ್ನು ಅಳವಡಿಸಿ ಯಾರ್ಡ್‌ಗೆ ಬಂದಿರುವ ಮರಳಿನ ಪ್ರಮಾಣವನ್ನು ಅಳೆಯಲು ವೇ ಬ್ರಿಡ್ಜ್ ಕೂಡ ಹಾಕಲಾಗಿದೆ. ಇದಕ್ಕಾಗಿ ಒಬ್ಬ ಕಂಪ್ಯೂಟರ್‌ ಆಪರೇಟರ್‌ ಹಾಗೂ ಒಬ್ಬ ಸೆಕ್ಯೂರಿಟಿ ಗಾರ್ಡ್‌ ನಿಯೋಜಿಸಲಾಗಿದೆ.

ಕಡಿಮೆ ಮೊತ್ತಕ್ಕೆ ಟೆಂಡರ್‌
ಸ್ವರ್ಣಾ ನದಿಯ 7 ಕಿ.ಮೀ. ವ್ಯಾಪ್ತಿಯಲ್ಲಿ 2.25 ಕೋ.ರೂ. ವೆಚ್ಚದಲ್ಲಿ ಹೂಳು ತೆಗೆಯಲು ಪ್ರತ್ಯೇಕ ಟೆಂಡರ್‌ಗಳನ್ನು ಕರೆಯಲಾಗಿತ್ತು. ಬಜೆ ಅಣೆಕಟ್ಟಿನಿಂದ ಮೇಲ್ಭಾಗದ ನದಿ ಪಾತ್ರದಲ್ಲಿ ಮಾಣಾç ಸೇತುವೆವರೆಗೆ 3.8 ಕಿ.ಮೀ.ವ್ಯಾಪ್ತಿಯಲ್ಲಿ ಹೂಳೆತ್ತುವುದಕ್ಕೆ 1.24 ಕೋ.ರೂ.ಗಳಿಗೆ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಆದರೆ ಗುತ್ತಿಗೆ ಸಂಸ್ಥೆಯು 42,92,250 ರೂ.ಗಳಿಗೆ ವಹಿಸಿಕೊಂಡಿದೆ. ಮಾಣಾç ಸೇತುವೆಯಿಂದ ಮೇಲಾ^ಗದಲ್ಲಿ ಶೀರೂರು ಮಠದ ಪ್ರದೇಶದವರೆಗೆ 3.2 ಕಿ.ಮೀ. ವ್ಯಾಪ್ತಿಯಲ್ಲಿ ಹೂಳು ತೆರವಿಗೆ 1 ಕೋ.ರೂ.ಗಳಿಗೆ ಅಂದಾಜುಪಟ್ಟಿ ಸಿದ್ಧಪಡಿಸಲಾಗಿತ್ತು. ಗುತ್ತಿಗೆ ಸಂಸ್ಥೆಯು 70.92 ಲ.ರೂ.ಮೊತ್ತದ ಟೆಂಡರ್‌ ಒಪ್ಪಂದ ಮಾಡಿಕೊಂಡಿದೆ.

Advertisement

ನೀರಿನ ಸಮಸ್ಯೆ ನಿವಾರಿಸಲು ಯತ್ನ
ನಗರದ ನೀರಿನ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸ್ವರ್ಣಾ ನದಿಯಲ್ಲಿ ಹೂಳೆತ್ತುವ ಪ್ರಕ್ರಿಯೆ ಆರಂಭಗೊಂಡಿದೆ. ಹಿರಿಯಡ್ಕ ಗಾಂಧಿ ಮೈದಾನದಲ್ಲಿ ಸ್ಟಾಕ್‌ಯಾರ್ಡ್‌ ನಿರ್ಮಿಸಲಾಗಿದೆ. ಕಾಮಗಾರಿ ಮುಗಿದ ತತ್‌ಕ್ಷಣ ಇದನ್ನು ಬಿಟ್ಟುಕೊಡಲಾಗುವುದು. ಇಲ್ಲಿ ಲಭಿಸುವ ಮರಳನ್ನು ಸ್ಯಾಂಡ್‌ ಬಝಾರ್‌ ಆ್ಯಪ್‌ ಮೂಲಕ ಮಾರಾಟ ಮಾಡಲಾಗುತ್ತದೆ.
-ಜಿ.ಜಗದೀಶ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next