Advertisement
ಅವರ ಆಳಂಗ ಯಕ್ಷಗಾನಕ್ಕೆ ಹೇಳಿ ಮಾಡಿಸಿದಂತೆ ಇತ್ತು. ಕಾಂತಿಯುಕ್ತ ಕಣ್ಣುಗಳು, ವಿಶಾಲ ಹಣೆ, ಹರವಾದ ಎದೆ, ಸ್ವರ, ಎಲ್ಲವೂ ಯಕ್ಷಗಾನಕ್ಕೆ ಅನುಕೂಲವಾಗಿತ್ತು. ಎಲ್ಲ ರೀತಿಯ ಪಾತ್ರಗಳನ್ನು ಮಾಡಿ ಗೆದ್ದರು. ನಾಯಕ ಪಾತ್ರಗಳೆಂತೋ, ಪ್ರತಿನಾಯಕ ಪಾತ್ರಗಳಿಗೂ ಸೈ. ಸಾತ್ವಿಕ ಪಾತ್ರಗಳಂತೆ ತಾಮಸ ಸ್ವಭಾವದ ಪಾತ್ರಗಳನ್ನೂ ಅಷ್ಟೇ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುತ್ತಿದ್ದರು. ದಶರಥ, ಕೃಷ್ಣ, ಕರ್ಣ, ಕೌರವ, ಅರ್ಜುನ, ಹನುಮಂತ, ದುಷ್ಟಬುದ್ಧಿ, ದುರ್ಜಯ, ಕೈಲಾಸ ಶಾಸ್ತ್ರಿ ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹನುಮಂತನ ಪಾತ್ರದಲ್ಲಿ ವಿಶೇಷ ಸಿದ್ಧಿ ಅವರಿಗಿತ್ತು. ರಂಗಕಲೆಯ ನಾಲ್ಕು ಅಂಗಗಳಾದ ಆಹಾರ್ಯ, ಆಂಗಿಕ, ವಾಚಿಕ, ಸಾತ್ವಿಕ ಎಲ್ಲದರಲ್ಲೂ ಸಮಾನ ಸಿದ್ಧಿ ಪಡೆದ ಅಪೂರ್ವ ಕಲಾವಿದರಾಗಿದ್ದರು. ಗುಂಡುಬಾಳದಲ್ಲಿ ವ್ಯವಸ್ಥಿತ ಕಲಿಕಾಕೇಂದ್ರ ಇಲ್ಲದಿದ್ದರೂ ಹಿರಿಯ ಕಲಾವಿದರನ್ನು ನೋಡುತ್ತಾ ಕಿರಿಯರಿಗೆ ರಂಗ ತಾಲೀಮು ಸಿಗುತ್ತಿತ್ತು. ತಮ್ಮ ನಾಲ್ಕು ದಶಕಗಳ ಕಲಾ ವ್ಯವಸಾಯದಲ್ಲಿ ಅನೇಕರನ್ನು ತಿದ್ದಿ ಕಲಾವಿದರನ್ನಾಗಿ ರೂಪಿಸಿದ್ದಾರೆ. ಪ್ರಸಿದ್ಧ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ ಅವರಿಗೆ ಸೋದರಳಿಯ. ಗುಂಡುಬಾಳದಲ್ಲಿ ಅವರ ಗರಡಿಯಲ್ಲಿ ಸಿದ್ಧಗೊಂಡವರು. ಅವರೊಬ್ಬ ಒಳ್ಳೆಯ ಜ್ಯೋತಿಷಿ. ದೈವಾರಾಧಕರು. ಕಷ್ಟದಲ್ಲಿ ತನ್ನಲ್ಲಿಗೆ ಬಂದವರನ್ನು ತಮ್ಮದೇ ಆದ ಕ್ರಮದಲ್ಲಿ ಸಾಂತ್ವನ ಹೇಳಿ ಚಿಕಿತ್ಸೆ ನೀಡುವ ಕಾರ್ಯವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುತ್ತಿದ್ದರು. ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ ಕೌನ್ಸಿಲಿಂಗ್ ಮಾಡುವ ಕಲೆಯಲ್ಲಿ ಪರಿಣತರಾಗಿದ್ದರು. ನೊಂದ ಅನೇಕರು ಇವರಿಂದ ನೆಮ್ಮದಿಯ ಬಾಳು ಕಂಡುಕೊಂಡಿದ್ದಾರೆ.ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವ ಅವರ ಕಲಾಸಾಧನೆಗೆ ಸಂದಿದೆ. ಅವರಿಗೆ 70 ತುಂಬಿದ ಸಂದರ್ಭದಲ್ಲಿ ಊರ ಅಭಿಮಾನಿಗಳು ಕಾರ್ಯಕ್ರಮ ನಡೆಸಿ ಸತ್ಯಲೋಕವೆಂಬ ಅಭಿನಂದನಾ ಗ್ರಂಥ ಸಮರ್ಪಿಸಿದ್ದಾರೆ.
Advertisement
ಪರಿಪೂರ್ಣ ಕಲಾವಿದ ಸತ್ಯ ಹೆಗಡೆ ಹಡಿನಬಾಳ
07:00 AM Mar 09, 2018 | |
Advertisement
Udayavani is now on Telegram. Click here to join our channel and stay updated with the latest news.