Advertisement

ಭಾಷಣ ಕೇಳಲು ಬಂದಿತ್ತು ಜನಸಾಗರ

11:52 AM Aug 17, 2018 | Team Udayavani |

ಕಲಬುರಗಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಭಾಷಣಕ್ಕೆ ನಿರೀಕ್ಷೆ ಮೀರಿ ಜನ ಬಂದಿರುವ ಹಾಗೂ ಅದೇ ಸಮಯಕ್ಕೆ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ ಸಭೆಗೆ ಜನ ಬಾರದಿರುವ ಘಟನೆಗೆ 1980ರ ಘಟನೆಗೆ ಕಲಬುರಗಿ ಸಾಕ್ಷಿಯಾಗಿತ್ತು.

Advertisement

ಅದು 1980ರ ಇಸ್ವಿ. ಕಲಬುರಗಿ ಲೋಕಸಭೆ ಸ್ಥಾನಕ್ಕೆ ಉಪ ಚುನಾವಣೆ. ಇಂದಿರಾ ಗಾಂಧಿ ಪರಮಾಪ್ತ ಸಿ.ಎಂ. ಸ್ಟೀಫನ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಆಗ ಜನತಾ ಪಕ್ಷ ಹಾಗೂ ಇತರರ ಬೆಂಬಲಿತ ಅಭ್ಯರ್ಥಿಯಾಗಿ ಬಾಪುಗೌಡ ದರ್ಶನಾಪುರ ಸ್ಪರ್ಧಾ ಕಣದಲ್ಲಿದ್ದರು. 

ಆಗ ವಾಜಪೇಯಿ ನೂತನ ವಿದ್ಯಾಲಯ ಮೈದಾನದಲ್ಲಿ ದರ್ಶನಾಪುರ ಪರ ಮತಯಾಚಿಸುವ ಚುನಾವಣೆ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಸಭೆಗೆ ಸಾವಿರಾರು ಜನ ಸಮೂಹವೇ ಬಂದಿತ್ತು. ಇದು ಅವರ ಭಾಣಷದ ನಿಖರತೆ ಹಾಗೂ ವ್ಯಕ್ತಿತ್ವ ನಿರೂಪಿಸುತ್ತದೆ. ಇದೇ ಸಮಯಕ್ಕೆ ನೂತನ ವಿದ್ಯಾಲಯ ಮೈದಾನ ಕೂಗಳತೆ ದೂರದಲ್ಲೇ ಈಗಿನ ಟೌನ್‌ ಹಾಲ್‌ ಬಳಿ ಸ್ಟೀಫನ್‌ ಪರವಾಗಿ ಆಗಿನ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ ಹಾಗೂ ಮತ್ತವರ ನಾಯಕರ ಚುನಾವಣಾ ಪ್ರಚಾರ ಸಭೆ ನಡೆದಿತ್ತು.
ಈ ಸಭೆಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬಾರದಿರುವುದನ್ನು ಹಿರಿಯ ನಾಯಕರು ಪಕ್ಷ ಬೇಧ ಮರೆತು ಈಗಲೂ ನೆನೆಯುತ್ತಾರೆ.

ಚುನಾವಣೆಗೆ ಹಿನ್ನೆಲೆ: 1980ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ನಾಯಕ ಧರ್ಮಸಿಂಗ್‌ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ ಸಂಸತ್‌ ಸದಸ್ಯರಾಗಿ ಪ್ರಮಾಣ ವಚನ ತೆಗೆದುಕೊಳ್ಳುವ ಮುನ್ನವೇ ರಾಜೀನಾಮೆ ನೀಡಿ  ಆ ಸ್ಥಾನವನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪರಮಾಪ್ತ, ಕಾಂಗ್ರೆಸ್‌ ನ ಹಿರಿಯ ನಾಯಕ ಸಿ.ಎಂ. ಸ್ಟೀಫನ್‌ ಅವರಿಗೆ ಬಿಟ್ಟು ಕೊಡಲಾಯಿತು. 

ಹೀಗಾಗಿ ಲೋಕಸಭೆಗೆ ಉಪ ಚುನಾವಣೆ ನಡೆಯಿತು. ಸ್ಟೀಫನ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರೆ ಜನತಾ ಪಕ್ಷ ಸೇರಿ ಇತರರ ಬೆಂಬಲದಿಂದ ಬಾಪುಗೌಡ ದರ್ಶನಾಪುರ ಸ್ಪರ್ಧಿಸಿದ್ದರು. ಆಗ ದರ್ಶನಾಪುರ ಪರವಾಗಿ ನೂತನ ವಿದ್ಯಾಲಯ ಮೈದಾನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಪಾಲ್ಗೊಂಡು ಭಾಷಣ ಮಾಡಿ ಬಿಸಿಲೂರಿನ ಜನತೆಯ ಗಮನ ಸೆಳೆದಿದ್ದರು. ತಮ್ಮ ಭಾಷಣದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು, ತಮ್ಮ ಭಾಷಣ ಕೇಳಲು ಸಾವಿರಾರು ಜನರು ಬರುತ್ತೀರಿ, ಆದರೆ ಮತಗಳಾಗಿ ಏಕೆ ಪರಿವರ್ತನೆಯಾಗುವುದಿಲ್ಲ ಎಂದು ಜನತೆಯನ್ನು ಪ್ರಶ್ನಿಸಿದ್ದರು.

Advertisement

ಇದನ್ನು ಸಹ ಕಲಬುರಗಿ ಜನ ಇನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. ದರ್ಶನಾ ಪುರ ಪರ ಮತಯಾಚಿಸಲು ಎರಡನೇ ಸಲ ಆಗಮಿದ್ದ ವಾಜಪೇಯಿ ಅವರು ಅದಕ್ಕಿಂತ ಮುಂಚೆ 1971-72ರಲ್ಲಿ ಜನ ಸಂಘದ ಅಧ್ಯಕ್ಷರಾಗಿ ಸಂಘದ ಸಂಘಟನೆ ಸಲುವಾಗಿ ಕಲಬುರಗಿಗೆ ಪ್ರಥಮ ಸಲ ಆಗಮಿಸಿದ್ದರು. ಸಂಘಟನಾ ಸಭೆಯಲ್ಲಿ ಪಾಲ್ಗೊಂಡವರು ಪೈಕಿ ಬಹುತೇಕರು ಈಗ ಇಲ್ಲ. ತದನಂತರ
1996ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ| ಬಸವರಾಜ ಪಾಟೀಲ್‌ ಸೇಡಂ ಪರ ಮತಯಾಚಿಸಲು ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ್ದರು.

 ಮುಂದೆ 1998-99ರಲ್ಲಿ ವಾಜಪೇಯಿ 13 ತಿಂಗಳು ಪ್ರಧಾನಿಯಾಗಿದ್ದಾಗ ಸೇಡಂ ಸಹ ಸಂಸದರಾಗಿದ್ದರು. ಮುಂದೆ 1999ರಲ್ಲಿ ಪ್ರಧಾನಿಯಾಗಿದ್ದರೆ ಸೇಡಂ ಗೆಲುವು ಸಾಧಿಸಿರಲಿಲ್ಲ. ಇದರ ನಡುವೆ 1993ರಲ್ಲಿ ರಾಯಚೂರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ವಾಜಪೇಯಿ ಅವರು ಬೀದರ್‌ ಮುಖಾಂತರ ಕಲಬುರಗಿಗೆ ಆಗಮಿಸಿ ಒಂದು ಗಂಟೆ ಕಾಲ ನಗರದಲ್ಲಿ ಕೆಲವು ಮುಖಂಡರೊಂದಿಗೆ ಚರ್ಚಿಸಿದ್ದರು. ತದನಂತರ ಅವಿಭಜಿತ ಕಲಬುರಗಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿ ಅತಿಥಿ ಗೃಹದಲ್ಲಿ ರಾತ್ರಿ ತಂಗಿ, ಮರುದಿನ ರಾಯಚೂರಿಗೆ ಪ್ರಯಾಣ ಬೆಳೆಸಿದ್ದರು.

ಹೀಗೆ ಒಟ್ಟು ನಾಲ್ಕು ಸಲ ಮಾಜಿ ಪ್ರಧಾನಿ ವಾಜಪೇಯಿ ಅವರು ಕಲಬುರಗಿಗೆ ಬಂದಿದ್ದು, ನಾಲ್ಕೂ ಸಲವೂ ಪ್ರಧಾನಿಯಾಗುವ ಮುಂಚೆಯೇ ಬಂದಿದ್ದರು ಎಂಬುದು ಒಂದು ವಿಶೇಷ ಎಂಬುದಾಗಿ ಬಿಜೆಪಿಯ ಹಿರಿಯ ತಲೆಮಾರಿನವರು ತಿಳಿಸಿದ್ದಾರೆ.

ಎನ್‌ವಿ ಮೈದಾನದಲ್ಲೇ ಸಭೆ: ಜನ ಸಂಘದ ಅಧ್ಯಕ್ಷರಾಗಿ ಸಂಘದ ಸಂಘಟನಾ ಸಭೆ ಹಾಗೂ ಎರಡು ಸಲ ಚುನಾವಣೆ ಪ್ರಚಾರ ಸಭೆ ನಡೆಸಿದ್ದು ನೂತನ ವಿದ್ಯಾಲಯ ಮೈದಾನದಲ್ಲೇ. ವಾಜಪೇಯಿ ಭಾಷಣ ಮಾಡಿದ್ದು ನೂತನ ವಿದ್ಯಾಲಯ ಮೈದಾನದಲ್ಲಿ ನಡೆದ ಮೂರು ಸಭೆಗಳಲ್ಲಿಯೇ ಮಾತ್ರ ಎಂಬುದು ಮಗದೊಂದು ವಿಶೇಷವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next