ರಾಯಚೂರು: ಇಲ್ಲಿನ ಕೃಷಿ ವಿವಿಯಲ್ಲಿ ಡಿ.8 ರಿಂದ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿ ಮೇಳಕ್ಕೆ ರವಿವಾರ ಜನಸಾಗರವೇ ಹರಿದು ಬಂದಿತ್ತು. ಆದರೆ, ಅದರಲ್ಲಿ ಕೃಷಿಕರಲ್ಲದವರೇ ಹೆಚ್ಚಾಗಿದ್ದು, ಸಂತೆಯಂತೆ ಭಾಸವಾಯಿತು.
ಮೂರನೇ ದಿನ ರವಿವಾರದ್ದರಿಂದ ನಿರೀಕ್ಷೆಯಂತೆ ಜನಸಾಗರವೇ ಹರಿದು ಬಂದಿತ್ತು. ಬೆಳಗ್ಗೆಯಿಂದಲೇ ಮೇಳದತ್ತ ಜನ ಆಗಮಿಸುತ್ತಿದ್ದರು. ಮಾಹಿತಿ ಪ್ರಕಾರ ರವಿವಾರ ಒಂದೇ ದಿನ ಒಂದೂವರೆ ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿದ್ದಾರೆ. ಕೃಷಿಗೆ ಸಂಬಂಧಿ ಸಿದ ಮಳಿಗೆಗಳಿಗೆ ಜನ ಭೇಟಿ ನೀಡಿ ವೀಕ್ಷಿಸಿದರೂ, ಭರ್ಜರಿ ವ್ಯಾಪಾರ ನಡೆಸಿದ್ದು ಮಾತ್ರ ದಿನಬಳಕೆ ವಸ್ತುಗಳ ವ್ಯಾಪಾರಿಗಳು. ಇದರಿಂದ ಸಿರಿಧಾನ್ಯಗಳ ಉತ್ತೇಜಿಸುವ ಉದ್ದೇಶಕ್ಕೆ ಆಯೋಜಿಸಿದ್ದ ಕೃಷಿ ಮೇಳದಲ್ಲಿ ಸಿರಿಧಾನ್ಯಗಳ ವ್ಯಾಪಾರಿಗಳು ಮಂಕಾಗಿದ್ದಾರೆ. ಕೃಷಿ ವಿವಿಯಿಂದ ಆಯೋಜಿಸಿದ್ದ ಮಳಿಗೆಗಳಿಗಿಂತ ಖಾಸಗಿ ಮಳಿಗೆಗಳೇ ಹೆಚ್ಚು ಕಂಡುಬರುತ್ತಿದ್ದವು. ಇದರಿಂದ ಎಲ್ಲರ ಚಿತ್ತ ಆ ಕಡೆ ಹರಿಯುತ್ತಿತ್ತು.
ಅನಧಿಕೃತ ಮಳಿಗೆಗಳೇ ಹೆಚ್ಚು: ಕೃಷಿ ವಿವಿಯಲ್ಲಿ ಅಧಿಕೃತವಾಗಿ 218 ಮಳಿಗೆಗಳನ್ನು ಅಳವಡಿಸಲಾಗಿತ್ತು. ಬೇರೆ ಬೇರೆ ಅಳತೆಯ, ಬೇರೆ ಮಾದರಿಯ ಮಳಿಗೆಗಳನ್ನು ಅಳವಡಿಸಲಾಗಿತ್ತು. ಅದಕ್ಕಾಗಿ ಮುಂಗಡ ಹಣ ಪಡೆಯಲಾಗಿತ್ತು. ಪ್ರವೇಶ ದ್ವಾರ ಶುರುವಾಗುತ್ತಿದ್ದಂತೆ ಅನಧಿಕೃತ ಮಳಿಗೆಗಳನ್ನು ಹಾಕಿಕೊಂಡಿದ್ದು, ರಸ್ತೆ ಬದಿಯಲ್ಲೇ ತಿಂಡಿಗಳು, ಬಟ್ಟೆ, ಸ್ಟೇಶನರಿ, ಜ್ಯೂಸ್ ಸೆಂಟರ್, ಮಿರ್ಚಿಭಜಿ, ಗೋಬಿ ಮಂಚೂರಿ ಹೀಗೆ ತರಹೇವಾರಿ ಅಂಗಡಿಗಳನ್ನು ಹಾಕಲಾಗಿದೆ. ಇದರಿಂದ ಬಹುತೇಕ ಜನ ಒಳಗೆ ತೆರಳದೆ ಅಲ್ಲಿಯೇ ತಮ್ಮ ವ್ಯಾಪಾರ ವಹಿವಾಟು ನಡೆಸಿದ್ದರಿಂದ, ಬಾಡಿಗೆ ಪಾವತಿಸಿ ಮಳಿಗೆ ಹಾಕಿದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಯಿತು.
ರೈತರಿಗಿಲ್ಲ ಬಿಡುವು: ವಿಪರ್ಯಾಸವೆಂದರೆ ಕೃಷಿ ಮೇಳ ರೈತರಿಗಾಗಿಯಾದರೂ ನಿಜವಾದ ರೈತಾಪಿ ವರ್ಗ ಕೃಷಿ ಚಟುವಟಿಕೆಯಲ್ಲಿ ಮಗ್ನವಾಗಿದೆ. ಈಗ ಎಲ್ಲೆಡೆ ಹತ್ತಿ ಬಿಡಿಸುತ್ತಿದ್ದರೆ, ಮತ್ತೂಂದೆಡೆ ಭತ್ತ ಕಟಾವು ಕಾರ್ಯ ಜೋರಾಗಿದೆ. ಅಲ್ಲದೇ, ಕೂಲಿಗಳು ಸಿಗದೆ ರೈತರು ನಾನಾ ಪಡಿಪಾಟಲು ಎದುರಿಸುತ್ತಿದ್ದಾರೆ. ಇಂಥ ಹೊತ್ತಲ್ಲಿ ಮೇಳಕ್ಕೆ ಹೋಗಲು ಪುರುಸೊತ್ತೆಲ್ಲಿ ಎಂದು ಪ್ರಶ್ನಿಸುತ್ತಾರೆ ಗ್ರಾಮೀಣ ಭಾಗದ ಜನ.
ಒಟ್ಟಾರೆ ಮೇಳ ಈ ಭಾಗದ ಜನರಿಗೆ ಮುದ ನೀಡುತ್ತಿದೆ ಎನ್ನುವುದು ಸತ್ಯವಾದರೂ ಉದ್ದೇಶಿತ ಗುರಿ ತಲುಪಲು ಸಾಧ್ಯವಾಗಿದೆಯಾ ಎನ್ನುವ ಪ್ರಶ್ನೆಯೂ ಸಹಜವಾಗಿ ಮೂಡುತ್ತಿದೆ.