Advertisement

ಅಂಟಾರ್ಟಿಕಾ ಈಗ ಜಗತ್ತಿನ ಸುರಕ್ಷಿತ ತಾಣ!

02:12 PM May 14, 2020 | sudhir |

ಅಂಟಾರ್ಟಿಕಾ: ಹೆಚ್ಚಿನೆಲ್ಲ ರಾಷ್ಟ್ರಗಳು ಕೋವಿಡ್ ಹೊಡೆತದಿಂದ ನಲುಗಿವೆ. ಮುಂದುವರಿದ ದೇಶಗಳು ಕೂಡ ಕೋವಿಡ್ ವಿರುದ್ಧ ಹೋರಾಡಲು ಸಾಧ್ಯವಾಗದೆ ಮಂಡಿಯೂರಿವೆ. ಆದರೆ ಈ ಒಂದು ಖಂಡದಲ್ಲಿ ಇದುವರೆಗೆ ಒಂದೇ ಒಂದು ಕೋವಿಡ್ ಪಾಸಿಟಿವ್‌ ಪತ್ತೆಯಾಗಿಲ್ಲ. ಸೋಂಕನ್ನು ದೂರವಿಡುವಲ್ಲಿ ಯಶಸ್ವಿಯಾಗಿದೆ.

Advertisement

ಭೂಮಿಯ ಮೇಲಿನ ಅತ್ಯಂತ ಶೀತ ಸ್ಥಳವಾದ ಅಂಟಾರ್ಟಿಕಾವನ್ನು ಈಗ ವಿಶ್ವದ ಸುರಕ್ಷಿತ ಸ್ಥಳ ಎಂದು ಪರಿಗಣಿಸಲಾಗಿದೆ. ಐಷರಾಮಿ ಪ್ರಯಾಣಿಕ ಹಡಗುಗಳಲ್ಲಿ ಕೋವಿಡ್ ಸೋಂಕಿತರು ಇರುವುದು ಪತ್ತೆಯಾದ ಬಳಿಕ ಅಂಟಾರ್ಟಿಕಾದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು ಭಾವಿಸಲಾಗಿತ್ತು. ಆದರೆ ವೈರಸ್‌ ಅಂಟಾರ್ಟಿಕಾದ ಕಡು ಶೀತದ ತೀರವನ್ನು ತಲುಪಲು ವಿಫ‌ಲವಾಗಿದೆ. ಅಂಟಾರ್ಟಿಕಾದಲ್ಲಿ ಖಾಯಂ ನಿವಾಸಿಗಳೆಂದು ಯಾರೂ ಇಲ್ಲ. ಇಲ್ಲಿರುವವರೆಂದರೆ ಪೆಂಗ್ವಿನ್‌ಗಳು, ತಿಮಿಂಗಿಲಗಳು, ಕಡಲು ಕೋಳಿಗಳು ಮಾತ್ರ.

ಆದರೂ ಸುಮಾರು 5,000 ಜನರು ಇಲ್ಲಿ ವಾಸವಾಗಿದ್ದಾರೆ. ಅವರು ಇಲ್ಲಿನ ಜನಸಂಖ್ಯೆಯಲ್ಲ. ಬದಲಾಗಿ ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ಬಂದಿರುವ ವಿಜ್ಞಾನಿಗಳು ಮತ್ತು ಸಂಶೋಧಕರು. ಸುಮಾರು 80 ಕಡೆಗಳಲ್ಲಿ ಇವರ ವಾಸದ ಟೆಂಟ್‌ಗಳಿವೆ.ಈಗೀಗ ಅಂಟಾರ್ಟಿಕಾದಲ್ಲಿ ಪ್ರವಾಸೋದ್ಯಮ ಗರಿಗೆದರುತ್ತಿದೆ. ಆರ್ಕ್‌ಟಿಕ್‌ ವಿಹಾರಗಳು ಹೆಚ್ಚು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ಧ್ರುವ ಪ್ರದೇಶ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಇಂಟರ್‌ನ್ಯಾಷನಲ್‌ ಅಸೋಸಿಯೇಶನ್‌ ಫಾರ್‌ ಅಂಟಾರ್ಟಿಕಾ ಟೂರ್‌ಆಪರೇಟರ್ಸ್‌ ಪ್ರಕಾರ 2018 ರಿಂದ 2019ರ ಅವಧಿಯಲ್ಲಿ ಸುಮಾರು 56,168 ಪ್ರಯಾಣಿಕರು ಈ ಖಂಡಕ್ಕೆ ಭೇಟಿ ನೀಡಿದ್ದಾರೆ. ಇದು ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 40ರಷ್ಟು ಹೆಚ್ಚಳವಾಗಿದೆ. 2019ರಿಂದ 2020ರ ಅವಧಿಯಲ್ಲಿ ಸುಮಾರು 78,500 ಪ್ರವಾಸಿಗರನ್ನು ನಿರೀಕ್ಷಿಸಲಾಗಿದೆ. ನವೆಂಬರ್‌ನಿಂದ ಮಾರ್ಚ್‌ ಅಂತ್ಯದ ವರೆಗೆ ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ನಿರ್ಬಂಧ ಹೇರಲಾಗಿತ್ತು
ಇಲ್ಲಿಗೆ ಈ ವರ್ಷದ ಆರಂಭದಲ್ಲೇ ಪ್ರವಾಸಿಗರನ್ನು ನಿರ್ಬಂಧಿಸಿ ಪ್ರವಾಸಿಗರ ಮೂಲಕ ವೈರಸ್‌ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಹೇರಲಾಗಿತ್ತು. ಅಂಟಾರ್ಟಿಕ್‌ ಕ್ರೂಸ್‌ ಹಡಗಿನಲ್ಲಿದ್ದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನ‌ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿತ್ತು. ಇವರಲ್ಲಿ ಶೇ. 60ರಷ್ಟು ಮಂದಿಯಲ್ಲಿ ಕೋವಿಡ್ ಪಾಸಿಟಿವ್‌ ಪತ್ತೆಯಾಗಿತ್ತು.

Advertisement

ದಕ್ಷಿಣ ಧ್ರುವದ ಸುತ್ತ ವ್ಯಾಪಿಸಿರುವ , 60 ಡಿಗ್ರಿ ದಕ್ಷಿಣ ಅಕ್ಷಾಂಶದೊಳಗಿರುವ ಹಿಮಾವೃತ ಖಂಡ ಇದಾಗಿದೆ. ಅಂಟಾರ್ಟಿಕದ ಸುತ್ತ ಸಮುದ್ರವೇ ಇದೆ. ಹಾಗೆಂದು ಇದು ಪ್ರತ್ಯೇಕ ಜಲರಾಶಿಯಲ್ಲ. ಹಿಂದೂ ಮಹಾಸಾಗರ, ಪೆಸಿಫಿಕ್‌ ಸಾಗರ ಹಾಗೂ ಅಂಟ್ಲಾಂಟಿಕ ಸಾಗರ ಒಂದುಗೂಡಿರುವ ಭಾಗ. ಸಾಗರದಲ್ಲಿ ಪಶ್ಚಿಮಾಭಿಮುಖವಾಗಿ ಬೀಸುವ ಗಾಳಿ, ಪ್ರದಕ್ಷಿಣಾ ಪಥವನ್ನೂ, ಖಂಡದ ಮೇ ಲೆ ಪೂರ್ವಾಭಿಮುಖವಾಗಿ ಬೀಸುವ ಗಾಳಿ ಅಪ್ರದಕ್ಷಿಣಾ ಪಥದ ಮೂಲಕ ಬೀಸುವುದರಿಂದ ಇವುಗಳ ಸಂಗಮ ಭಾಗ ದಕ್ಷಿಣ ಸಾಗರದಲ್ಲಿ ಪ್ರಕ್ಷುಬ್ಧ ಅಲೆಗಳನ್ನು ಏಳಿಸುತ್ತದೆ. ಹವಾಮಾನವೂ ಇತರ ಭೂ ಭಾಗಗಳಿಗಿಂತ ತುಂಬಾ ಭಿನ್ನವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ವರ್ಷದ ಕೆಲವೇ ತಿಂಗಳು ಮಾತ್ರ ಜನ ವಾಸಕ್ಕೆ ಅನುಕೂಲವಾಗಿರುವ ವಾತಾವರಣವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next