Advertisement

ಕುಡಿವ ನೀರಿಲ್ಲದೆ ಪರಿತಪಿಸುವ ತಿಮ್ಲಾಪುರ ಕೋಡಿ ಜನ

05:06 PM Nov 15, 2019 | Suhan S |

ಹುಳಿಯಾರು: ನಮ್ಮ ಬೀದಿಗೆ ನೀರು ಸರಬರಾಜು ಮಾಡುವ ಕೊಳವೆಬಾವಿ ಮೋಟಾರ್‌ ಕೆಟ್ಟು 15 ದಿನವಾಗಿದೆ, ಈವರೆಗೂ ರಿಪೇರಿ ಮಾಡಿಸಿಲ್ಲ, 2-3 ಬಾರಿ ಕೆಟ್ಟು ಹೋಗಿದ್ದ ಮೋಟಾರ್‌ ಅನ್ನು ರಿಪೇರಿ ಮಾಡಿಸಿದ್ದೇವೆ. ಆದರೆ, ಈಗ, ಪಪಂಗೆ ಮನವಿ ಮಾಡಿದರೂ ರಿಪೇರಿ ಮಾಡಿಸುತ್ತಿಲ್ಲ, ಅಕ್ಕಪಕ್ಕದ ಜಮೀನುಗಳಿಗೆ ಹೋಗಿ ಕಾಡಿಬೇಡಿ ನೀರು ತರಬೇಕಿದೆ.

Advertisement

ಇದು ಹುಳಿಯಾರು ಪಪಂ ವ್ಯಾಪ್ತಿಯ ತಿಮ್ಲಾಪುರ ಕೋಡಿ ನಿವಾಸಿಗಳ ಅಳಲಾಗಿದೆ. ತಿಮ್ಲಾಪುರ ಕೋಡಿಯಲ್ಲಿನ ಕೈ ಪಂಪು ಹುಳಿಯಾರು ಪಟ್ಟಣಕ್ಕೆ ಹತ್ತಾರು ವರ್ಷಗಳ ಕಾಲ ಕುಡಿವ ನೀರು ಸರಬರಾಜು ಮಾಡಿತ್ತು. ಸರಿಯಾದ ಮಳೆಯಿಲ್ಲದೆ ಕೊಳವೆ ಬಾವಿಯ ಅಂತರ್ಜಲ ಕಡಿಮೆಯಾಯಿತು. ಹಾಗಾಗಿ 2-3 ವರ್ಷಗಳ ಹಿಂದೆ ಕೈ ಪಂಪು ತೆಗೆದು ಮೋಟರ್‌ ಬಿಟ್ಟು ಇರುವ ನೀರನ್ನು ಸಿಸ್ಟನ್‌ ಮೂಲಕ ಕೋಡಿ ನಿವಾಸಿಗಳಿಗೆ ನೀಡಲಾಗುತ್ತಿತ್ತು.

3-4 ಕಿ.ಮೀ.ದೂರ ಹೋಗಬೇಕಿದೆ: ಮುಂಜಾನೆ ತ್ರಿಫೇಸ್‌ ವಿದ್ಯುತ್‌ ಕೊಟ್ಟಾಗ ಅಕ್ಕಪಕ್ಕದ ಜಮೀನಿಗೆ ಹೋಗಿ ಅಲ್ಲಿನ ಮಾಲಿಕರನ್ನು ಕಾಡಿಬೇಡಿ ನೀರು ತರುವ ಅನಿವಾರ್ಯತೆಯಿದೆ. ಅವರೂ ಬಿಡದಿದ್ದರೆ 3-4 ಕಿ.ಮೀ.ದೂರಕ್ಕೆ ಹೋಗಿ ನೀರನ್ನು ತರಬೇಕಿದೆ. ಹಾಗಾಗಿ ದಿನಬೆಳಗಾದರೆ ಇಲ್ಲಿನ ಮಹಿಳೆಯರಿಗೆ ನೀರು ತರುವುದೇ ಗೋಳಾಗಿ ಪರಿಣಮಿಸಿದೆ. ಅಲ್ಲದೆ ಈ ಸ್ಥಳ ಪಟ್ಟಣ ಪ್ರದೇಶದಿಂದ 1 ಕಿ.ಮೀ. ದೂರವಿದ್ದು ಕೆರೆಯ ಕೋಡಿ ಬಳಿಯಿದೆ. ಇಲ್ಲಿನ ನಿವಾಸಿಗಳು ಆಸ್ಪತ್ರೆ, ಸಂತೆ, ಅಂಗಡಿ, ಶಾಲೆಗಳಿಗೆ ಬರಲು 1 ಕಿ.ಮೀ ನಡೆಯುವುದು ಅನಿವಾರ್ಯ. ವಿಧಿಯಿಲ್ಲದೆ ನಡೆದುಕೊಂಡೆ ಓಡಾಡುವ ಇಲ್ಲಿನ ಜನರಿಗೆ ಈ ರಸ್ತೆಯ ಇಕ್ಕೆಲಗಳಲ್ಲಿ ಹೆಮ್ಮರವಾಗಿ ಬೆಳೆದಿರುವ ಜಾಲಿ ಗಿಡಗಳು ತೊಡಕಾಗಿದ್ದು ತೆರವು ಮಾಡಿಸುವಂತೆ ಪಪಂ ಅಧಿಕಾರಿಗಳಿಗೆ ಹೇಳಿದರೂ ತೆರವು ಮಾಡಿಸಿಲ್ಲ

ಸ್ಪಂದಿಸದ ಅಧಿಕಾರಿಗಳು: ಇನ್ನು ಈ ರಸ್ತೆಯ ಕಂಬಳಿಗೆ ಬೀದಿ ದೀಪಗಳನ್ನು ಕಟ್ಟಿ ವರ್ಷಗಳೇ ಕಳೆದಿದೆ. ಹಾಗಾಗಿ ರಾತ್ರಿ ಸಂದರ್ಭದಲ್ಲಿ ಅಂಗೈಯಲ್ಲಿ ಜೀವ ಹಿಡಿದು ಓಡಾಡುತ್ತಿದ್ದಾರೆ. ಅಲ್ಲದೆ ಮನೆ ಗಳಿರುವ ಸ್ಥಳದಲ್ಲೂ ಬೀದಿ ದೀಪ ಕೆಟ್ಟಿದ್ದು ಬಡಾ ವಣೆಯ ಜನ ಕತ್ತಲೆಯಲ್ಲಿ ದಿನ ದೂಡುತ್ತಿದ್ದಾರೆ. ಪ್ರತಿ ನಿತ್ಯ ನೀರು, ಬೀದಿ ದೀಪ, ಜಾಲಿ ತೆರವಿಗೆ ಕೇಳಿಕೇಳಿ ಸಾಕಾಗಿ ಹೋಗಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಸ್ಪಂದಿಸದೆ ಮೌನಕ್ಕೆ ಶರಣಾಗಿದ್ದಾರೆ.

15 ದಿನಗಳ ಹಿಂದೆಯೇ ಅಧಿಕಾರಿಗಳಿಗೆ ಮನವಿ:  2-3 ವರ್ಷ ಇಲ್ಲಿನ ನಿವಾಸಿಗಳು ನೀರಿನ ಸಮಸ್ಯೆ ಯಿಲ್ಲದೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ನಂತರ ಕೊಳವೆಬಾವಿಗೆ ಬಿಟ್ಟಿದ್ದ ಮೋಟರ್‌ ಕೆಡಲು ಆರಂಭವಾಯಿತು. ಗ್ರಾಪಂಗೆ ಎಷ್ಟು ಹೇಳಿದರೂ ಕೇಳದಿದ್ದಾಗ ಸ್ಥಳೀಯರೇ ಮನೆಗಿಷ್ಟು ಎಂದು ಹಣ ಹಾಕಿ ರಿಪೇರಿ ಮಾಡಿಸುತ್ತಿದ್ದರು. ಹೀಗೆ 3-4 ಬಾರಿ ರಿಪೇರಿ ಮಾಡಿಸಿದ್ದರು. ಆದರೆ ಈಗ ಪುನಃ ಮೋಟಾರ್‌ ಕೆಟ್ಟಿದೆ. ಹೀಗೆ ಪದೇ ಪದೆ ರಿಪೇರಿ ಮಾಡಿಸಿ ಸೋತಿರುವ ಸ್ಥಳೀಯರು ಪಟ್ಟಣ ಪಂಚಾಯ್ತಿಯವರೇ ಒಳ್ಳೆಯ ಕಡೆ ರಿಪೇರಿ ಮಾಡಿಸಲಿ ಅಥವಾ ಮೋಟಾರ್‌ ಬದ ಲಾಯಿಸಲೆಂದು ಮನವಿ ಸಲ್ಲಿಸಿದ್ದಾರೆ. ಮನವಿ ಸಲ್ಲಿಸಿ 15 ದಿನಗಳಾದರೂ ಯಾರೊಬ್ಬರೂ ಇತ್ತ ಗಮನ ಹರಿಸದೆ ನಿರ್ಲಕ್ಷಿಸಿದ್ದಾರೆ. ಹೀಗಾಗಿ ನೀರಿಗೆ ಹಾಹಾಕಾರ ಆರಂಭವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ಇಲ್ಲಿನ ಕೊಳವೆ ಬಾವಿ ಮೋಟರ್‌ ಅನ್ನು 2-3 ಬಾರಿ ಕೆಟ್ಟಾಗ ಸ್ಥಳೀಯರಿಂದ ಹಣ ಸಂಗ್ರಹಿಸಿ ರಿಪೇರಿ ಮಾಡಿಸಿದ್ದೇವೆ. ಒಮ್ಮೆ ಸ್ಟಾರ್ಟರ್‌ ಸಹ ಸುಟ್ಟು ಹೋಗಿತ್ತು. ಇಲ್ಲಿನ ಜನರೇ ಹಣ ಸಂಗ್ರಹಿಸಿ ತಂದಿದ್ದಾರೆ. ಹೀಗೆ ಪದೇ ಪದೇ ನಾವೇ ಮಾಡಿಸುತ್ತಿದ್ದು ಈ ಬಾರಿಯಾದರೂ ಪಪಂ ಮಾಡಿಸಲಿ ಎಂದರೆ ಇತ್ತ ತಿರುಗಿಯೂ ನೋಡದೆ ನಿರ್ಲಕ್ಷ್ಯ ವಹಿಸಿದ್ದಾರೆ. –ವರದಣ್ಣ, ತಿಮ್ಲಾಪುರ ಕೋಡಿ ನಿವಾಸಿ

 

-ಎಚ್‌.ಬಿ.ಕಿರಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next