ಬೆಂಗಳೂರು: ಮೇಕೆದಾಟು ಪಾದಯಾತ್ರೆಯಿಂದ ಕಾಂಗ್ರೆಸ್ಸಿನ ನೈತಿಕ ದಿವಾಳಿತನ, ಭಂಡತನ ಹಾಗೂ ಭಟ್ಟಂಗಿ ರಾಜಕಾರಣದ ನಗ್ನ ದರ್ಶನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಗುರುವಾರ ಹೇಳಿಕೆ ನೀಡಿದ್ದಾರೆ.
ಅಧಿಕಾರ ದಾಹಕ್ಕಾಗಿ ನಡೆಸಿದ ಪಾದಯಾತ್ರೆ ಇದೆಂಬ ವಿಚಾರವನ್ನು ರಾಜ್ಯದ ಜನತೆ ವ್ಯಕ್ತಪಡಿಸುತ್ತಿದ್ದು,ಆಕ್ರೋಶ ಮುಗಿಲುಮುಟ್ಟಿದೆ ಎಂದು ಅವರು ತಿಳಿಸಿದ್ದಾರೆ. ಕಾಂಗ್ರೆಸ್‍ನ ಹತಾಶೆ ಮತ್ತು ಅಧಿಕಾರ ಲಾಲಸೆಯ ನಿಜಸ್ವರೂಪವು ದೇಶದೆಲ್ಲೆಡೆ ಪ್ರಕಟಗೊಂಡಿದೆ. ಸ್ವಾರ್ಥಕ್ಕಾಗಿ ಹಾಗೂ ತಮ್ಮ ಪಕ್ಷದ ಮೇಲೆ ಹಿಡಿತ ಸಾಧಿಸಲಿಕ್ಕಾಗಿ ಪಾದಯಾತ್ರೆಯ ನೆಪವೊಡ್ಡಿ ರಾಜ್ಯವ್ಯಾಪಿ ಕೋವಿಡ್ ವ್ಯಾಪಿಸಲು ಕಾಂಗ್ರೆಸ್ ಕಾರಣವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಇದು ತಾತ್ಕಾಲಿಕ ಸ್ಥಗಿತವಷ್ಟೇ.. ಮತ್ತೆ ರಾಮನಗರದಿಂದಲೇ ಪಾದಯಾತ್ರೆ ಮುಂದುವರಿಸುತ್ತೇವೆ
ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸಲು ಇಡೀ ಕಾಂಗ್ರೆಸ್ ನಾಯಕತ್ವ ವಿಫಲವಾಗಿದೆ. ಅಷ್ಟು ಮಾತ್ರ ಅಲ್ಲ; ಇದಕ್ಕಾಗಿ ದೇಶದ ಜನರ ಮುಂದೆ ಕಾಂಗ್ರೆಸ್ ಕ್ಷಮಾಪಣೆಯನ್ನು ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಪಾದಯಾತ್ರೆಯಿಂದ ನೊಂದು ತೊಂದರೆ ಅನುಭವಿಸಿದ ರಾಜ್ಯದ ಜನತೆ ಕಾಂಗ್ರೆಸ್ಸಿನ ಈ ಕುಟಿಲ ನೀತಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಕಾನೂನು ಉಲ್ಲಂಘಿಸಿದ ಹಾಗೂ ಕೋವಿಡ್ ವ್ಯಾಪಕವಾಗಿ ಹರಡಲು ಕಾರಣರಾದ ಕಾಂಗ್ರೆಸ್ಸಿಗರ ವಿರುದ್ಧ ರಾಜ್ಯ ಸರಕಾರವು ತೀವ್ರ ಕಾನೂನಿನ ಕ್ರಮ ತೆಗೆದುಕೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.