Advertisement
ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಭಾಗದ ಬಹುತೇಕ ಕಡೆಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಳವಾಗಿದ್ದು, ಬಹುತೇಕ ಕಡೆಗಳಲ್ಲಿ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಿದೆ. ಪರಿಣಾಮ ಜನರು ತೀವ್ರ ಸೆಕೆ ಅನುಭವಿಸುತ್ತಿದ್ದಾರೆ. ಏಪ್ರಿಲ್ ಪ್ರಾರಂಭದಲ್ಲಿ ಬಿಸಿಲಿನ ಬೇಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ರಾಜಧಾನಿ ಬೆಂಗಳೂರಿನಲ್ಲಿ 2023ರಲ್ಲಿ ಇದೇ ಮೊದಲ ಬಾರಿಗೆ ಶನಿವಾರ 34.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಮುಂದಿನ 24 ಗಂಟೆಗಳ ಕಾಲ ಮೋಡ ಕವಿದ ವಾತಾವರವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Related Articles
ಶನಿವಾರ ಕಲಬುರಗಿಯಲ್ಲಿ ಗರಿಷ್ಠ 38.2 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ. ರಾಯಚೂರು 37.4, ಗದಗ 36.2, ಮೈಸೂರು 36.2, ಬಳ್ಳಾರಿ 36.8, ಚಾಮರಾಜನಗರ 35.6, ಹಾವೇರಿ 35.4, ಚಿತ್ರದುರ್ಗ, ಮಂಗಳೂರು ತಲಾ 35.1 ಶಿವಮೊಗ್ಗ 35, ಕಾರವಾರದಲ್ಲಿ 35 ಗರಿಷ್ಠ ತಾಪಮಾನ ದಾಖಲಾಗಿದೆ. ಉಳಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರಿದಿದೆ.
Advertisement
ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ? ಅತೀಯಾದ ತಾಪಮಾನದಿಂದ ಜ್ವರ, ತಲೆನೋವು, ಹೀಟ್ ಸ್ಟೋಕ್‌ನಂತಹ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.¬ ದಿನಕ್ಕೆ ಕನಿಷ್ಠ 3 ಲೀಟರ್ ನೀರು ಸೇವಿಸಿ, ದಿನಕ್ಕೆ 2 ಬಾರಿ ಸ್ನಾನ ಮಾಡಿದರೆ ಚರ್ಮದ ಸಮಸ್ಯೆ ಕಾಡುವುದಿಲ್ಲ, ಮಕ್ಕಳು ಕಲುಷಿತ ನೀರು ಸೇವಿಸದಂತೆ ಎಚ್ಚರಿಕೆ ವಹಿಸಿ, ಕಾಟನ್ ಉಡುಪು ಧರಿಸಿ ಮೈ ಹಗುರವಾಗಿರಿಸಿ, ಮಧ್ಯಾಹ್ನ ಕಾಫಿ, ಟೀ ಅತೀಯಾದ ಸೇವನೆ ಬೇಡ ಎಂದೂ ವೈದ್ಯರು ತಿಳಿಸಿದ್ದಾರೆ.