Advertisement

ಬೂದೂರು ಜನರ ಅಳಲು ಕೇಳ್ಳೋರಿಲ್ಲ

02:50 PM Oct 06, 2018 | Team Udayavani |

ಗುರುಮಠಕಲ್‌: ಕಾಕಲವಾರ ಗ್ರಾಪಂ ವ್ಯಾಪ್ತಿಯ ಬೂದೂರು ಜನರು ಮೂಲ ಸೌಕರ್ಯಗಳಿಲ್ಲದೇ ತತ್ತರಿಸಿ ಹೋಗಿದ್ದಾರೆ. ಗ್ರಾಮದಲ್ಲಿ ಕುಡಿಯಲು ನೀರು, ನಡೆದಾಡಲು ರಸ್ತೆ, ಮಹಿಳಾ ಶೌಚಾಲಯ, ವಿದ್ಯುತ್‌ ಸೇರಿ ಹಲವು ಸಮಸ್ಯೆಗಳಲ್ಲಿಯೂ ಜೀವನ ಸಾಗಿಸುತ್ತಿದ್ದು, ಅಧಿಕಾರಿ ಹಾಗೂ ಜನಪ್ರತಿನಿಧಿ ಗಳಿಗೆ ಇವರ ಅಳಲು ಕೇಳದಂತಾಗಿದೆ.

Advertisement

ಗ್ರಾಮದಲ್ಲಿ ಮಹಿಳೆಯರಿಗೆ ಶೌಚಾಲಯ ಇಲ್ಲದೇ ಬಯಲಿಗೆ ತೆರಳುವುದು ಅನಿವಾರ್ಯವಾಗಿಬಿಟ್ಟಿದೆ. ಮಳೆಗೆ
ನಿರುಪಯುಕ್ತ ಗಿಡಗಳು ಬೆಳೆದಿರುವುದು ವಿಷ ಜಂತುಗಳ ಭಯಕ್ಕೆ ಮಹಿಳೆಯರು ಆತಂಕ ವ್ಯಕ್ತಪಡಿಸುತ್ತಿದಾರೆ. ಗ್ರಾಮದಲ್ಲಿ ಕನಿಷ್ಠ ಪಕ್ಷ ಮಹಿಳೆಯರಿಗೆ ಶೌಚಾಲಯ ನಿರ್ಮಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಸಮರ್ಪಕ ರಸ್ತೆಗಳಿಲ್ಲದಿರುವುದು, ಚರಂಡಿ ಅವ್ಯವಸ್ಥೆಯಿಂದ ಕೂಡಿರುವುದರಿಂದ ಗ್ರಾಮದ ಸರಕಾರಿ ಶಾಲೆಗೆ ತೆರಳುವ ಮಾರ್ಗದಲ್ಲಿ ಸಂಪೂರ್ಣ ಚರಂಡಿ ನೀರು ಹರಿದು ನಡೆದಾಡಲು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಟಾಚಾರಕ್ಕೆ ಎಂಬಂತೆ ಅರ್ಧ ರಸ್ತೆ ನಿರ್ಮಿಸಿ ಬಿಟ್ಟಿರುವುದು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. 

ಗ್ರಾಮದಲ್ಲಿ ರಸ್ತೆಗಳು ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು ಮಾರ್ಗದಲ್ಲೆಲ್ಲ ಚರಂಡಿ ನೀರು ಹರಿಯುತ್ತಿದ್ದು, ನಡೆದಾಡಲು ರಸ್ತೆಗಳೇ ಇಲ್ಲದಂತಾಗಿದೆ. ಗ್ರಾಮಸ್ಥರು ಕೊಳಚೆ ನೀರಿನಲ್ಲಿ ನಡೆದಾಡುತ್ತಿದ್ದಾರೆ. ಚರಂಡಿ ನೀರು
ನಿಂತು ಸೊಳ್ಳೆಗಳು ಉತ್ಪತ್ತಿಯಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಿಸುವಂತಾಗಿದೆ.

ಗ್ರಾಮದ ಹೊರವಲಯದಲ್ಲಿ ಸುಮಾರು 6 ವರ್ಷಗಳ ಹಿಂದೆ ವಿದ್ಯುತ್‌ ಪರಿವರ್ತಕ ಕೂಡಿಸಲಾಗಿದೆ. ಆದರೆ ಗ್ರಾಮಕ್ಕೆ ಬೆಳಕು ನೀಡುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಕ್ಕೆ ಜಿಡ್ಡಾಗಿ ಅಂಟಿರುವ ಸಮಸ್ಯೆಗಳನ್ನು ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳು ನಿವಾರಿಸಲು ಮುಂದಾಗಬೇಕು ಎಂದು ನರಸಿರೆಡ್ಡಿ ಪಾಟೀಲ, ಆಶಪ್ಪ ಮನ್ನೆ, ರಾಜು ರೆಡ್ಡಿ ಆರಕೇರಿ, ವಿಶ್ವನಾಥ ಬಡಿಗೇರಿ, ನಾಗೇಶ ಆಗ್ರಹಿಸಿದ್ದಾರೆ. 

„ಚನ್ನಕೇಶವುಲು ಗೌಡ

Advertisement
Advertisement

Udayavani is now on Telegram. Click here to join our channel and stay updated with the latest news.

Next