ಉಡುಪಿ: ಸಮಾಜಸೇವೆ ಮಾಡಲು ಹಣ ಬೇಕಾಗಿಲ್ಲ, ಅದಕ್ಕಾಗಿ ತುಡಿಯುವ ಮನಸ್ಸಿದ್ದರೆ ಸಾಕು ಎಂದು ಸಮಾಜಸೇವಕಿ, ಮಹಿಳೆಯರ ಆರೋಗ್ಯಕ್ಕಾಗಿ, ವಂಚಿತರಿಗೆ ಸೌಲಭ್ಯ ಒದಗಿಸುವುದಕ್ಕಾಗಿ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಮಂಗಳೂರಿನ ಕಲ್ಪ ಟ್ರಸ್ಟ್‌ನ ಪ್ರಮೀಳಾ ರಾವ್ ಹೇಳಿದರು.
“ಕೂತು ಮಾತಾಡುವ’ ತಂಡದ ವತಿಯಿಂದ ರೋಟರಿ ಮಣಿಪಾಲ ಹಿಲ್ಸ್ ಸಹಭಾಗಿತ್ವದಲ್ಲಿ ಮಣಿಪಾಲದ ರೋಟರಿ ಶತಾಬ್ಧ ವೇದಿಕೆ ಬಯಲು ರಂಗಮಂದಿರದಲ್ಲಿ ಜರಗಿದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ನನ್ನ ಸೇವಾ ಕಾರ್ಯಗಳಿಗೆ ನನ್ನ ಕಾಲೇಜಿನ ವಿದ್ಯಾರ್ಥಿಗಳೇ ಸ್ಪೂರ್ತಿ. ಇರುವವರಿಗೆ ಹಳೆಯ ಬಟ್ಟೆಗಳನ್ನು ನೀಡುವ ಸೇವಾ ಕಾರ್ಯ ಆರಂಭಿಸಿ ಅನಂತರ ಹಳೆ ಬಟ್ಟೆಯಿಂದ ಸ್ಯಾನಿಟರಿ ಪ್ಯಾಡ್ ತಯಾರಿಸಿ ಅದನ್ನು ಅಗತ್ಯ ಇರುವವರಿಗೆ ವಿತರಿಸುವ ಯೋಜನೆ ಹಾಕಿಕೊಂಡೆವು. ಈ ಕೆಲಸದಲ್ಲಿ ಯುವತಿಯರ ಜತೆಗೆ ಯುವಕರನ್ನು ಕೂಡ ಬಳಸಿಕೊಂಡೆವು. ಮಹಿಳೆಯರ ಆರೋಗ್ಯ ಕಾಳಜಿ ಯುವಕರಲ್ಲಿಯೂ ಮೂಡಬೇಕೆಂಬ ಉದ್ದೇಶ ನನ್ನದು. ಗುಜರಾತ್, ಹೊಸದಿಲ್ಲಿ ಸೇರಿದಂತೆ ವಿವಿಧೆಡೆ ತರಬೇತಿ ಪಡೆದು ಆರೋಗ್ಯಕರವಾದ ಸ್ಯಾನಿಟರಿ ಪ್ಯಾಡ್‌ಗಳ ತಯಾರಿ ನಡೆಯುತ್ತಿದೆ. ಮಹಿಳೆಯರು ಪ್ರೀತಿ, ವಿಶ್ವಾಸದಿಂದ ನಮ್ಮ ಸೇವೆಯನ್ನು ಪಡೆಯುತ್ತಿರುವುದು ನನಗೆ ತುಂಬಾ ತೃಪ್ತಿ ನೀಡಿದೆ ಎಂದು ಪ್ರಮೀಳಾ ರಾವ್ ಹೇಳಿದರು.
18 ಕಾಲನಿಗಳಿಗೆ
ಪ್ಯಾಡ್ ಪೂರೈಕೆ
ರಾಜ್ಯದ ಸ್ಲಂ ಏರಿಯಾಗಳು, ಪರಿಶಿಷ್ಟ ಪಂಗಡ, ಹಿಂದುಳಿದವರು ಸೇರಿದಂತೆ ಒಟ್ಟು 18 ಕಾಲನಿಗಳಿಗೆ ನಿರಂತರವಾಗಿ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಪೂರೈಕೆ ಮಾಡುತ್ತಿದ್ದೇವೆ. ನಾನು ಪ್ರಾಧ್ಯಾಪಕಿಯಾಗಿ ಕೆಲಸ ಮಾಡುವ ಕಾವೂರು ಸರಕಾರಿ ಕಾಲೇಜಿನಲ್ಲೇ ಸ್ಯಾನಿಟರಿ ಪ್ಯಾಡ್ ಉತ್ಪಾದನೆ ಮಾಡುತ್ತೇವೆ. ಇಲಾಖೆಯ ಅಧಿಕಾರಿಗಳು ಕೂಡ ಹಲವು ಬಾರಿ ಪ್ರೋತ್ಸಾಹ ನೀಡಿದ್ದಾರೆ. ಹಲವರಿಗೆ ಶೌಚಾಲಯ ಕೂಡ ನಿರ್ಮಿಸಿಕೊಟ್ಟಿದ್ದೇವೆ. ಈ ಬಾರಿ ಮತ್ತಷ್ಟು ಸುಧಾರಿತವಾದ ಸ್ಯಾನಿಟರಿ ಪ್ಯಾಡ್‌ಗಳ ತಯಾರಿಕೆ ನಮ್ಮ ಯೋಜನೆಯಾಗಿದೆ ಎಂದವರು ತಿಳಿಸಿದರು.
“ಕೂತು ಮಾತಾಡುವ’ ತಂಡದ ಅವಿನಾಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಅಭಿಯಾನದ ಮೂಲಕ ಸಂಗ್ರಹಿಸಲಾದ ಸ್ಯಾನಿಟರಿ ಪ್ಯಾಡ್‌ಗಳ ತಯಾರಿಕೆಗೆ ಬೇಕಾದ ಕಾಟನ್ ಬಟ್ಟೆಗಳನ್ನು ಪ್ರಮೀಳಾ ರಾವ್ ಅವರಿಗೆ ಹಸ್ತಾಂತರಿಸಲಾಯಿತು.