ಎಚ್.ಡಿ.ಕೋಟೆ: ವಿಧಾನಸೌಧ ಹಾಗೂ ಇನ್ನೆಲ್ಲೋ ಎಸಿ ರೂಮಿನಲ್ಲಿ ಕೂತಿರುವ ರಾಜಕಾರಣಿಗಳಿಗೆ ದಿನದ 24 ಗಂಟೆನೂ ಕರೆಂಟ್ ಕೊಡ್ತೀರಿ. ದೇಶಕ್ಕೆ ಅನ್ನ ಹಾಕುವ ರೈತನ ಪಂಪ್‌ಸೆಟ್‌ಗೆ 3 ಗಂಟೆ ಕೂಡ ಸಮರ್ಪಕ ಕರೆಂಟ್ ಕೊಡಲ್ಲ. ಇದು ಯಾವ ನ್ಯಾಯ ಸ್ವಾಮಿ ಎಂದು ರೈತ ಮುಖಂಡರೋರ್ವರು ಸೆಸ್ಕ್ನ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಟೆ ತಗೆದುಕೊಂಡ ಘಟನೆ ಮಂಗಳವಾರ ಪಟ್ಟಣದ ಸೆಸ್ಕ್ನ ಕಚೇರಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ನಡೆಯಿತು.
ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಉಪವಿಭಾಗ ಕಚೇರಿ ಆವರಣದಲ್ಲಿ ಸೆಸ್ಕ್ನ ಅಧಿಕ್ಷಕ ಎಂಜಿನಿಯರ್ ಎನ್.ನರಸಿಂಹೇಗೌಡ ಅಧ್ಯಕ್ಷತೆಯಲ್ಲಿ ಉಪವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ಅಲಿಸುವ ಜನಸಂಪರ್ಕ ಸಭೆ ನಡೆಯಿತು.
ರೈತ ಮುಖಂಡ ದೇವಲಾಪುರ ಗೋವಿಂದೇಗೌಡ ಮಾತನಾಡಿ, ತೋಟದ ಮನೆಗಳಿಗೆ ಉಚಿತವಾಗಿ ಕರೆಂಟ್ ಕೊಡಲು ಇಲಾಖೆ ಆದೇಶ ಇಲ್ಲ ಅಂತೀರಿ. ಹಾಗದರೆ ಆ ರೈತ ಸ್ವಂತ ಹಣ ಲಕ್ಷಾಂತರ ರೂ. ಎಲ್ಲಿಂದ ತಂದು ವಿದ್ಯುತ್ ಸಂಪರ್ಕ ಪಡೆಯಬೇಕು. ರಾಜಕಾರಣಿಗಳಿಗಾದರೆ ದಿನದ 24 ಗಂಟೆ ಕರೆಂಟು ಕೊಡ್ತೀರಿ, ಆದರೆ, ರೈತರಿಗೆ ಅಗತ್ಯ ಸಮಯದಲ್ಲಾದರೂ ಕರೆಂಟ್ ನೀಡಿದಿದ್ದರೇ ರೈತ ಜೀವನ ಮಾಡುವುದಾದರೂ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಎನ್.ನರಸಿಂಹೇಗೌಡ ಮಾತನಾಡಿ, ಕಸಬಾ ಹೋಬಳಿ ದೊಡ್ಡದಿದ್ದು, ತಾಲೂಕಿನ ಅಣ್ಣೂರು ಗ್ರಾಮದಲ್ಲಿ ಉಪ ಕೇಂದ್ರ ತೆರೆಯುವ ಸಂಬಂಧ ಮೇಲಧಿಕಾರಿಗಳಿಂದ ಅನುಮತಿ ಸಿಕ್ಕಿದ್ದು, ಶೀಘ್ರದಲ್ಲೇ ಉಪಕೇಂದ್ರ ತೆರೆಯಲಾಗುವುದು ಎಂದು ತಿಳಿಸಿದರು.
ಇನ್ನೂ ಗ್ರಾಪಂ ಸದಸ್ಯರೋರ್ವರು ತಾಲೂಕಿನ ಮುಸ್ಕರೆ ವಿಶ್ವಕರ್ಮ ಕಾಲೋನಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿ ಮುಗಿದಿದ್ದರೂ ಲೈನ್ ಚಾರ್ಜ್ ಮಾಡಿಲ್ಲ ಎಂದು ದೂರಿದರು. ಈಗ ಅಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯವಾಗಿದ್ದು ದೀಪಾವಳಿ ಹಬ್ಬಕ್ಕೆ ಕರೆಂಟ್ ಕೊಟ್ಟರೆ ಜನರಿಗೂ ಸಂತಸ ಆಗುತ್ತದೆ ಎಂದ ಸೆಸ್ಕ್ ಎಂಡಿ, ಅಲ್ಲೇ ಇದ್ದ ಸೆಸ್ಕ್ ಎಂಜಿನಿಯರ್‌ಗಳಿಗೆ ಇನ್ನೇರಡು ದಿನದಲ್ಲಿ ಲೈನ್ ಚಾರ್ಜ್ ಮಾಡಿ ಅವರಿಗೆ ಕರೆಂಟ್ ನೀಡಬೇಕು ಎಂದು ಸೂಚಿಸಿದರು.
ಇನ್ನು ಸಭೆಯಲ್ಲಿ ಕಳೆದ ಸಭೆಯಲ್ಲಿ ಕೇಳಿ ಬಂದಿದ್ದ ದೂರು ಸಮಸ್ಯೆಗಳನ್ನು ಒಂದೊಂದಾಗಿಯೇ ಕೇಳಿ ಸೆಸ್ಕ್ನ ಅಧಿಕಾರಿಗಳ ಬೆವರಿಳಿಸಿದರು. ಪಪಂ ಮಾಜಿ ಸದಸ್ಯ ಮೀಲ್ ನಾಗರಾಜು, ಸೆಸ್ಕ್ ವಿದ್ಯುತ್ ಗುತ್ತಿಗೆದಾರರಾದ ಮಧು, ನಾರಾಯಣ್, ನೂರುಲ್ಲಾಮೇಸಿŒ, ರಾಜಣ್ಣ ಶಿವರಾಜು, ಕುಣಿಗಾಲ್ ರಾಜು ಸೆಸ್ಕ್ ಅಧಿಕಾರಿಗಳಾದ ಹುಣಸೂರು ಉಪವಿಭಾಗದ ಇಇ,ನಾಗರಾಜು, ಎಚ್.ಡಿ.ಕೋಟೆ ಸೆಸ್ಕ್ನ ಎಇಇ ಪ್ರದೀಪ್ ಸೇರಿದಂತೆ 100ಕ್ಕೂ ಹೆಚ್ಚು ರೈತರು, ಗ್ರಾಹಕರು ಇದ್ದರು.
ತಾನು ಇದುವರೆಗೆ ಸುಮಾರು 20 ಕಡೆ ಜನಸಂಪರ್ಕ ಸಭೆ ಮಾಡಿದ್ದೇನೆ. ಎಲ್ಲಾ ಕಡೆಯೂ ತೋಟದ ಮನೆಗೆ ಕರೆಂಟ್ ಕೋಡಿ ಎಂದು ರೈತರು, ಜನರು ಕೇಳುತ್ತಿದ್ದಾರೆ. ಒಂದು ತೋಟದ ಮನೆಗೆ ಕರೆಂಟ್ ನೀಡಲು 30-40 ಕಂಬಬೇಕು. ಹೀಗಾಗಿ ಸುಮಾರು 4-5 ಲಕ್ಷ ರೂ ವೆಚ್ಚವಾಗುತ್ತದೆ. ರೈತರೇ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶವಿದೆ.
-ಎನ್.ನರಸಿಂಹೇಗೌಡ, ಸೆಸ್ಕ್ ಅಧೀಕ್ಷಕ ಎಂಜಿನಿಯರ್