Advertisement

ಧರ್ಮದ ದಾರಿಯಲ್ಲಿ ಹದವರಿತ ನಡಿಗೆಯಿರಬೇಕು- “ಮದಿಪು’

12:21 PM Sep 06, 2017 | |

ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗೆ ಭಾಜನವಾದ ಮದಿಪು ತುಳು ಸಿನಿಮಾ  ಪ್ರೇಕ್ಷಕರ ಕಂಗಳ ಅಂಗಳದಲ್ಲಿ ಹೆಜ್ಜೆಯಿಟ್ಟು ನಲಿಯುತ್ತಿದೆ. ಅದರಲ್ಲೂ  ಮದಿಪು ಸಿನಿಮಾ ಮುಗಿಯುತ್ತಿದ್ದಂತೆ  ಪ್ರೇಕ್ಷಕರು ಎದ್ದು ಹೋಗಬೇಡಿ.  ಕೊನೆಯಲ್ಲಿ ಟೈಟಲ್‌ ಕಾರ್ಡ್‌ ಜೊತೆಯಲ್ಲಿ ಬರುವ ಈ ಸಂಭಾಷಣೆಯನ್ನು  ಕೇಳಿಸಿಕೊಳ್ಳದಿದ್ದರೆ ನೀವು ಮದಿಪು ಸಿನಿಮಾ ನೋಡಿದ್ದು ವ್ಯರ್ಥವಾಗುತ್ತದೆ.

Advertisement

“ನಮ ಸಮಾಜೊಡು ಬದುಕುನಗ ಮಾತಾ ಧರ್ಮದಕುಲು   ಬೇತೆ  ಧರ್ಮದಕ್ಲೆಗ್‌  ಬೇನೆ – ತೊಂದರೆ ಆವಂದಿಲೆಕ್ಕ  ಬದುಕುನ  ಜವಾಬ್ದಾರಿ ಉಂಡು ಫಾತಿಮಾ, ಒಂಜಿ ವೇಳೆ  ನೀಲಯೆÂ   ನಿನ್ನ ಮಗೇನೇ ಆದಿತ್ತುಂಡಲಾ  ಸಮಾಜದ  ಎಡೆªಗೋಸ್ಕರ  ಆಯನ್‌  ಕೇನುನ ಅಧಿಕಾರ ನಿಕ್‌R ಇಜ್ಜಿ !  ಈ ಮಲ್ಲ ಮನಸ್‌ ಮಲ್‌ತುದು  ನೀಲಯ್ಯಗ್‌  ಮಾತ್ರ ಅತ್‌ ಇಡೀ ಸಮಾಜೋಗು ಅಪ್ಪೆ$ ಆವೊಡು !’ಎಂದು ಪೋಡಿಯ ಬ್ಯಾರಿ ಪಾತ್ರಧಾರಿಯ ಮೂಲಕ ಹೇಳಿಸುವ ನಿರ್ದೇಶಕರು  ಇಂತಹ ಒಂದು ಅದ್ಭುತ  ಸಂದೇಶವನ್ನು ಮಡಿಲಲ್ಲಿ ಇಟ್ಟುಕೊಂಡು  ಪ್ರಸ್ತುತ ವಸ್ತುಸ್ಥಿತಿಗೆ ತೀರಾ ಹತ್ತಿರವಾಗಿ  ಮದಿಪು   ಚಿತ್ರಕತೆಯನ್ನು ಹೆಣೆದಿದ್ದಾರೆ.

ಮೊದಲ ಸಲವೇ  ಮನಸ್ಸಿಟ್ಟು  ನೋಡಿದವರಿಗೆ ಯಾರಿಗಾದರೂ ಈ ಚಿತ್ರ ಖಂಡಿತವಾಗಿಯೂ ಪ್ರಶಸ್ತಿಗೆ ಅರ್ಹ ಅಂತ ಅನ್ನಿಸಿ ದರೆ  ಸೋಜಿಗವೇನಿಲ್ಲ. ಚಿತ್ರದ ಉದ್ದಕ್ಕೂ  ಚಿಂತನೆಗೆ  ಹಚ್ಚುವ ಇಂತಹ ಎಷ್ಟೋ  ಸಂಭಾಷಣೆ ಗಳನ್ನು ಪತ್ರಕರ್ತ-ಲೇಖಕ ಜೋಗಿಯ ಜೋಳಿಗೆಯಿಂದ  ಎಳೆದೆಳೆದು  ಚಿತ್ರ ನಿರ್ದೇಶಕರು, ಸಂಬಂಧಗಳಿಗೆ-ವಿಶ್ವಾಸಗಳಿಗೆ  ಬೆಲೆ ಕೊಡುತ್ತಿದ್ದ  ತುಳುನಾಡಿನ ಅಂದಿನ ಕಾಲದ  ಕೆಳ ಜನಾಂಗದ ವಸ್ತುನಿಷ್ಠ ಜನರ ಬಾಯಿಂದ ಮುತ್ತಿನಂತೆ ಒಂದರ ಬೆನ್ನಿಗೆ ಇನ್ನೊಂದರಂತೆ ಉದುರಿಸಿದ್ದಾರೆ. ಎರಡು ಧರ್ಮಗಳ ನಡುವಿನ ನಂಬಿಕೆಯ ಸೂಕ್ಷ್ಮವಿಚಾರವನ್ನೂ  ಎಲ್ಲೂ  ಹಳಿ  ತಪ್ಪದ ಹಾಗೆ  ಕರುಳಿನ ಆಳದಿಂದ ಬರುವ ನೋವಿಗೆ ಉಪಶಮನ ನೀಡುವ ಪರಿಯಲ್ಲಿ ನಂಬಿದ-ನಂಬುವ-ನಂಬುತ್ತಿರುವ  ದೈವದ ಬಾಯಿಯಿಂದ ಹೇಳಿಸಿದ್ದಾರೆ. ದೈವದ ಪಾತ್ರಿಯ ಶುದ್ಧಾಚಾರದ ದಿನಚರಿಯ ಬದುಕಿನ  ಅಗತ್ಯದ ಬಗ್ಗೆ ಬೆಳಕು  ಚೆಲ್ಲಿದ್ದಾರೆ.

ಸಮಾಜದಲ್ಲಿ ಬದುಕುವಾಗ ಮನುಷ್ಯನಿಗೆ ತನ್ನ ಸ್ವಾರ್ಥದ  ಹಕ್ಕು ಮಾತ್ರವಲ್ಲದೆ ತನಗಿರುವ ಜವಾಬ್ದಾರಿಯನ್ನೂ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಚಿತ್ರದ ಪ್ರತಿಯೊಂದು  ನಡೆಯಲ್ಲಿಯೂ ಕತೆಯ ಹಿಡಿತ ಇಟ್ಟುಕೊಂಡು ನಿರ್ದೇಶಕರು ಚಿತ್ರ ಮುಗಿಯುವವರೆಗೂ ಪ್ರೇಕ್ಷಕ ತನ್ನ ಯೋಚನಾ ಲಹರಿ ಬೇರೆಡೆಗೆ ತಿರುಗಿಸದಂತೆ  ಮಾಡುವಲ್ಲಿ ಜಾಣ್ಮೆ ಮೆರೆದಿದ್ದಾರೆ.  ಈವರೆಗೆ  ತುಳುವಿನಲ್ಲಿ ಬಂದ ಹೆಚ್ಚಿನ ಕಲಾತ್ಮಕ ಚಿತ್ರಗಳ ನಿರ್ದೇಶಕರು ತುಳುನಾಡಿನ   ಕೆಳಸ್ತರದ ಜನಾಂಗದ  ವೃತ್ತಿ  ಜೀವನದ ಕಷ್ಟ ಸುಖಗಳನ್ನು ಅವರ ಸಮಾಜದ ಇತಿಮಿತಿಯಲ್ಲಿ ಮಾತ್ರ ಚಿತ್ರೀಕರಿಸಿದ್ದರು.   ಆದರೆ ಮದಿಪು  ಒಂದು ಹೆಜ್ಜೆ ಮುಂದೆ  ಹೋಗಿ  ವೃತ್ತಿಯ ಚಿತ್ರಣದ ಜೊತೆ  ಎರಡು ಧರ್ಮಗಳ ಮಾನವೀಯ ಸಂಬಂಧಗಳನ್ನು ರಾತ್ರಿಯ ಮಸುಕು  ದೀಪದಲ್ಲಿ ಯಾರೂ  ಮಿಸುಕಾಡದಂತೆ  ನಿಚ್ಚಳವಾಗಿ ತೋರಿದ್ದಾರೆ.  “ದೈವ ದರ್ಶನದ ಸಮಯದಲ್ಲಿ ಕೇಳದಿದ್ದರೂ ಎಳನೀರು  ಕೆತ್ತಿ ಎತ್ತಿ ಕೊಡುವ ನೀವು  ಈಗ  ಮಾತ್ರ ಒಂದು ಬೊಗಸೆ ಹೆಂಡ ಕೊಡುವುದಿಲ್ಲ  ಎಂತ ಜನ ಮಾರಾಯೆÅ ನೀವು?’  ಎನ್ನುವ  ಪರತಿಯ  ಪಾತ್ರಧಾರಿಯ ಹತಾಶೆಯ ಮಾತು ಸಮಾಜ, ಕೆಳ ಜನಾಂಗದವರನ್ನು ನಡೆಸಿಕೊಳ್ಳುವ ರೀತಿಗೆ ಹಿಡಿದ ಕನ್ನಡಿ.   ಪರತಿಯ ಪಾತ್ರಧಾರಿ ಸುಜಾತಾ ಶೆಟ್ಟಿ ನಿಮ್ಮ ನೆನಪಿನಂಗಳಕ್ಕೆ ಕನ್ನಡದ “ಉಮಾಶ್ರೀ’ ಅವರನ್ನು ಕರೆತರುತ್ತಾರೆ.

ಬಹಳ ಹಿಂದೆ ಡಾ| ರಾಜ್‌ಕುಮಾರ್‌ ಅವರ ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ಭಾವನಾತ್ಮಕವಾಗಿ  ಯಶೋದೆ ಕೃಷ್ಣನ ಬೆಳೆಸಿದ ರೇನು ದೇವಕಿಗೂ ಅವನು ಕಂದನಲ್ಲವೇ ? ಎಂದು ಹಾಡಿದ್ದರು. ಈ ಒಂದು ಹಾಡು ಮದಿಪು ಚಿತ್ರದ ಇಬ್ಬರು ತಾಯಂದಿರ ತುಮುಲವನ್ನು ತೆರೆದಿಡುತ್ತದೆ. ಬಡತನದ ಬೇಗೆಯಲ್ಲಿ ಎರಡು ಮಕ್ಕಳನ್ನು ಸಾಕಲು ತನ್ನಿಂದಾಗದು  ಎನ್ನುವ ಕಾರಣಕ್ಕೆ ಮಗುವನ್ನು ಬೇರೆಯವರ  ಮಡಿಲಿಗೆ ಹಾಕಿ ಕೊನೆಗಾಲದಲ್ಲಿ ಪುನಃ ಮಗು ಬೇಕು ಅನ್ನುವ  ಸ್ವಾರ್ಥಕ್ಕೆ  ಬಿದ್ದು  ಫಾತಿಮಾ ಅನ್ನುವ ಮಹಿಳೆ ದೈವದ   ಬಳಿಗೆ ಬಂದು ಸಾಕಿದ ತಾಯಿ ನಲಿಕೆ ಜನಾಂಗದ  ಪರತಿಯಿಂದ  ಮಗುವನ್ನು ಪಡೆಯಲು ಪರೋಕ್ಷವಾಗಿ ಪ್ರಯತ್ನಿಸುತ್ತಾಳೆ. ಮಗನನ್ನು ಬಿಟ್ಟು  ಬದುಕುವ ಯೋಚನೆ ಕೂಡ ಮಾಡದ ಸ್ಥಿತಿಯಲ್ಲಿ ಸಾಕು ತಾಯಿ ತನ್ನ  ಬಾಯಿ ತಪ್ಪಿನಿಂದ ಸತ್ಯದ ಸುಳಿವನ್ನು ಬಿಟ್ಟುಕೊಟ್ಟು ಇಕ್ಕಟ್ಟಿನಲ್ಲಿ ಒದ್ದಾಡುತ್ತಾಳೆ. ಕೊನೆಗೂ ದೈವ ಇಬ್ಬರೂ ತಾಯಂದಿರಿಗೂ  ಅನ್ಯಾಯ ಆಗದ ರೀತಿಯಲ್ಲಿ  ನ್ಯಾಯದ ಮದಿಪು ಕೊಟ್ಟು ಅವರಿಬ್ಬರೂ ನಿಟ್ಟುಸಿರು ಬಿಡುವಂತೆ ನೋಡಿಕೊಳ್ಳುತ್ತದೆ.   ಇದು ಚಿತ್ರದ ಒಟ್ಟಾರೆ ಸಾರಾಂಶವಾಗಿದೆ.

Advertisement

ಇಲ್ಲಿ ಕಥೆಗಿಂತಲೂ ಮಿಗಿಲಾದುದು ಕತೆ
ಯನ್ನು ಹೇಳಿದ ರೀತಿ, ಬಳಸಿಕೊಂಡ ತಾಂತ್ರಿಕತೆ, ಉಳಿಸಿಕೊಂಡ  ಸಾಂಸ್ಕೃತಿಕತೆ  ಚಿತ್ರ
ವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಇದು ಅರಿವಾಗುವಂತೆ ನಿರ್ದೇಶಕ ಚೇತನ್‌ ಮುಂಡಾಡಿ  ಚಿತ್ರೀಕರಿಸಿದ್ದಾರೆ. ಇಡೀ ಚಿತ್ರ ಹೆಚ್ಚಾಗಿ ಕತ್ತಲೆ ನೆರಳಿನಾಟದಲ್ಲಿ   ನಡೆಯುವುದರಿಂದ  ದಾರಿ ದೀಪವಾಗಿ ತೆಂಗಿನ ಗೆರಟೆ, ದೊಂದಿ, ತೆಂಗಿನ ಗರಿಯ ಸೂಟೆಯ ಬಳಕೆ, ದೈವ ಕೋಲದ  ಸಂದರ್ಭದ ಹಿನ್ನಲೆಯಲ್ಲಿ ವಾದ್ಯ ಮತ್ತು ಕದೋಣಿ  ಸಿಡಿಮದ್ದಿನ ಬಳಕೆ ಸಾಂಕೇತಿಕವಾಗಿ ನಮ್ಮನ್ನು  “ಆ’ ಕಾಲಕ್ಕೆ ಕೊಂಡೊಯ್ಯುವಂತೆ  ಶ್ರಮಪಟ್ಟಿರುವುದು ಎದ್ದು ಕಾಣುತ್ತದೆ. ತುಳುಸಂಸ್ಕೃತಿಯ ಸೊಗಡಿನ ಹಾಡುಗಳು ಪ್ರತ್ಯೇಕ ವಾಗಿ ಕೇಳಿಸದಿದ್ದರೂ  ಚಿತ್ರದಲ್ಲಿ ಮುಳುಗಿದ ವನಿಗೆ  ಕತೆಯ ಓಟದ  ದಾರಿಯನ್ನು ಸ್ಪಷ್ಟ ಪಡಿಸುತ್ತವೆ. ಇತ್ತೀಚಿನ  ಬೆಳವಣಿಗೆಯಂತೆ ಭೂತ ನರ್ತನವನ್ನು ಮನೋರಂಜನೆಗೆ  ಬಳಸಿಕೊಳ್ಳ
ಬಾರದು  ಅನ್ನುವ ಮಿತಿಯನ್ನು ಅನುಸರಿಸಿ ದರ್ಶನ ಪಾತ್ರಿಯ ತೆಂಗಿನ ಸಿರಿಯ ಹಿಂದೆ  ಕ್ಯಾಮರಾ ಇಟ್ಟು  ಸಿರಿ ಗರಿಯ ಪಲ್ಲಟವನ್ನು ಮಾತ್ರ  ದರ್ಶನ ರೀತಿಯಲ್ಲಿ ಚಿತ್ರೀಕರಿಸಿದ್ದಾರೆ. ಚಿತ್ರದುದ್ದಕ್ಕೂ ಬರುವ ಇಂತಹ ಸೂಕ್ಷ್ಮಗಳನ್ನು ಪ್ರೇಕ್ಷಕ ಗಮನಿಸಿದರೆ ಬಹುಶಃ ನಿರ್ದೇಶಕರ  ಶ್ರಮಕ್ಕೊಂದಿಷ್ಟು ಬೆಲೆ.

ಜಾತ್ಯತೀತತೆಯ ಬರೀ  ಸಂದೇಶ ಮಾತ್ರವಲ್ಲ  ಚಿತ್ರ ತಂಡದ ಕಾರ್ಯ ದಾರಿಯಲ್ಲೂ ನಿರ್ದೇಶಕ ಚೇತನ್‌ ವಿಶಿಷ್ಟತೆ ಮೆರೆದಿದ್ದಾರೆ. ಫಾತಿಮಾ ಪಾತ್ರಧಾರಿಯಾಗಿ  ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿದ ಡಾ| ಸೀತಾ ಕೋಟೆ ತಾನು ಅನ್ಯಧರ್ಮೀಯಳು  ಅನ್ನುವ  ಸುಳಿವೂ ಬಿಡದಂತೆ ನಟಿಸಿದ್ದಾರೆ. ಪೋಡಿಯಾ  ಬ್ಯಾರಿಯಾಗಿ ಮುಳುಗಿಹೋಗಿರುವ  ನಾಗರಾಜ ಅವರ ಹೆಸರಿನ ಮುಂದೆ “ಭಟ್‌’  ಎಂಬ ಉಪನಾಮ ವಿದೆ  ಎಂದು  ಅರಿವಾದರೆ ನೀವು ಖಂಡಿತಾ ಹುಬ್ಬೇರಿಸುತ್ತೀರಾ!. ಭೂತ ನಲಿಕೆಯ  ಪತಿ ಮಾನಿಯಾಗಿ ಮುಸ್ಲಿಂ ಸಮುದಾಯದ ಎಂ. ಕೆ.ಮಠ  ಅವರ ಅಭಿನಯ ಹೃದಯ ಮುಟ್ಟುವಂಥದ್ದು. ಅವರ ಪಾತ್ರದಲ್ಲಿ “ಸಮಾಜಕ್ಕೆ ಸುಳ್ಳು ಹೇಳಬಾರದು, ದೇವರಿಗೆ ಅಪಚಾರ ಮಾಡಬಾರದು’  ಎನ್ನುವ ಬದ್ಧತೆ ಕಂಡಾಗ ನಮ್ಮ ಹಿಂದಿನ ಸಾಮಾಜಿಕರಿಗೆ  ಎಂತಹ ಮಾನವೀಯ ಬಂಧನದ ಮನಸ್ಸಿತ್ತು  ಎನ್ನುವುದರ ಅರಿವಾಗುತ್ತದೆ. ಸತ್ಯವನ್ನು ಬಿಚ್ಚಿಡಲಾರದ ಅಪ್ಪನ ಅಸಹಾಯ ಕತೆಯನ್ನು ಅವರು ಬಿಂಬಿಸಿದ ರೀತಿ ಕಣ್ಣೆವೆಯಲ್ಲಿ ನೀರು ಹನಿಗೂಡಿಸದಿದ್ದರೆ ನಮಗೆ ಹೃದಯವಿಲ್ಲವೆಂದು ಖಡಾಖಂಡಿತವಾಗಿ  ಒಪ್ಪಿಕೊಳ್ಳಬೇಕಾಗುತ್ತದೆ.

ವಿ. ಮನೋಹರ  ಅವರಂತಹ ದಿಗ್ಗಜ  ಸಂಗೀತ ನಿರ್ದೇಶಕರು, ಉಗ್ರಂ ಖ್ಯಾತಿಯ ಸಂಕಲನಕಾರ  ಶ್ರೀಕಾಂತ್‌, ಡಿಸೈನರ್‌ ದೇವಿಪ್ರಸಾದ್‌  ಶೆಟ್ಟಿ  ಇವರೆಲ್ಲ ಲಾಭ ನಷ್ಟದ  ಲೆಕ್ಕಾಚಾರ ಬದಿಗಿಟ್ಟು ಈ ಚಿತ್ರಕ್ಕೆ ಜೀವ ತುಂಬಿದ್ದಾರೆ  ಅಂದಾಗ  ಭಾಷೆಯ ಬೆಳವಣಿಗೆಗೆ ನಮ್ಮ ಜವಾಬಾœರಿ ಏನು? ಅನ್ನುವ ಪ್ರಶ್ನೆಗಳಿಗೆ ತನ್ನಂತಾನೆ ಉತ್ತರ ಸಿಗುತ್ತದೆ. ಸಿನಿಮಾಟೋಗ್ರಾಫರ್‌ ಗಣೇಶ್‌ ಹೆಗ್ಡೆ  ಆ ಕತ್ತಲಿನ ಕಿರು ಬೆಳಕಿನಲ್ಲೂ  ತುಳುನಾಡಿನ  ಸೊಗಡನ್ನು  ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ತುಳು ಚಿತ್ರರಂಗದಲ್ಲಿ  ಹಾಕಿದ ದುಡ್ಡು  ಹಿಂದಿರುಗಿ ಬರುವ ಭರವಸೆ ಇಲ್ಲದಿದ್ದರೂ  ಎಂಟೆದೆಯ ಧೈರ್ಯ ಮಾಡಿ  ದುಡ್ಡು ಸುರಿದ  ನಿರ್ಮಾಪಕ ಸಂದೀಪ್‌ ಪೂಜಾರಿ  ನಂದಳಿಕೆ ಅವರಂತೂ  ಈ ಚಿತ್ರ ಪಡೆದ ಪ್ರಶಸ್ತಿಗೆ ಅತ್ಯಂತ ಯೋಗ್ಯರು. ಬರೀ ಹಾಸ್ಯಕ್ಕೆ ಪ್ರಾಧಾನ್ಯಅನ್ನುವ ಅಪವಾದದ ನಡುವೆಯೂ  ಚಿತ್ರದ ಗಂಭೀರತೆಯ ಓಘಕ್ಕೆ ತೊಂದರೆಯಾದೀತು ಎಂದು ಎಲ್ಲಿಯೂ ಅನವಶ್ಯಕ ಹಾಸ್ಯದ ಬೆನ್ನಿಗೆ ಬೀಳದೆ  ತುಳುನಾಡಿಗೊಂದು ಗಂಭೀರ ಚಿಂತನೆಯ, ಸಂದೇಶದ ಚಿತ್ರವನ್ನು ಕೊಟ್ಟ ಹೆಗ್ಗಳಿಕೆ  ಸಂದೀಪ್‌ ಕುಮಾರ್‌ ನಂದಳಿಕೆ ಅವರದು. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಏಕಕಾಲಕ್ಕೆ ಮುಡಿಗೇರಿಸಿಕೊಂಡಿರುವ  ಮದಿಪು  ಕೇವಲ ತುಳುವರ ಹೆಮ್ಮೆಯಲ್ಲ , ಕರ್ನಾಟಕದ ಹೆಮ್ಮೆ. ತುಳುವಿನಲ್ಲಿ ಇಂತಹ ಕಲಾತ್ಮಕ ಚಿತ್ರ ಸಾಧ್ಯನಾ?  ಎಂದು ಸಿನಿಮಾ ನೋಡಿದ ಅನಂತರ ಸ್ವತಃ ಗಿರೀಶ್‌  ಕಾಸರವಳ್ಳಿಯವರೇ ಹುಬ್ಬೇರಿಸಿದರು. ಬದಲಾವಣೆಯ ಸಂಧಿಯ
ಲ್ಲಿರುವ ತುಳು ಚಿತ್ರಕ್ಕೆ ಮದಿಪು  ಒಂದು ಭರವಸೆಯ  ದಾರಿ ದೀಪ.

ಕನ್ನಡದ ಝೀ ಟೀವಿಯ  ರಿಯಾಲಿಟಿ ಶೋಗಳಲ್ಲಿ  ಕಲಾನಿರ್ದೇಶಕರಾಗಿ ಹೊಟ್ಟೆ ಪಾಡಿನ  ನಡಿಗೆಯಲ್ಲಿದ್ದ ಬೆಳ್ತಂಗಡಿಯ ಚೇತನ್‌ ಕುಮಾರ್‌ ಶೆಟ್ಟಿ  ಮುಂದೆ ತನ್ನ ಹರವನ್ನು ಚಿತ್ರರಂಗಕ್ಕೆ ವಿಸ್ತರಿಸಿ ಚೇತನ್‌ ಮುಂಡಾಡಿ  ಎಂಬ ಚಿತ್ರನಾಮದೊಳಗೆ   ಮೊದಲ ಪ್ರಯತ್ನದಲ್ಲೇ  ರಾಷ್ಟ್ರ-ರಾಜ್ಯ ಪ್ರಶಸ್ತಿಗಳನ್ನೂ  ಬಗಲಿ ಗೇರಿಸಿದ  ಪ್ರತಿಭಾವಂತ, ವಿಭಿನ್ನ ಯೋಚನೆಯ ನಿರ್ದೇಶಕ.   ಮದಿಪು ಚಿತ್ರದ  ಯಶಸ್ಸು  ಎಲ್ಲಾ ತಾಂತ್ರಿಕ ವರ್ಗಕ್ಕೆ ಮತ್ತು ಪಾತ್ರವರ್ಗಕ್ಕೆ ಮೀಸಲು  ಅನ್ನುವ ಚೇತನ್‌ ತನ್ನ ಸಾಹಸದ ಹಿಂದಿರುವ  ಯಾರನ್ನೂ ಮರೆಯಲು ಇಷ್ಟಪಡುವುದಿಲ್ಲ.  ಚೇತನ್‌ ತರಹ ಯೋಚಿಸುವ ನಿರ್ದೇಶಕರ ಅಗತ್ಯ ತುಳು ಚಿತ್ರರಂಗಕ್ಕೆ  ಅಗತ್ಯವಿದೆ. ಹಲವಾರು ಯೋಚನೆ ಯೋಜನೆಗಳನ್ನು  ತಲೆ ತುಂಬಾ ತುಂಬಿಕೊಂಡಿರುವ ಚೇತನ್‌ಗೆ ಸಂದೀಪ್‌ ಪೂಜಾರಿ  ನಂದಳಿಕೆಯವರಂತ ಹತ್ತಾರು   ಸಹೃದಯ ನಿರ್ಮಾಪಕರ ಆಶ್ರಯ  ಬೇಕಿದೆ. ಈ ಚಿತ್ರ ನೋಡಿದ ಅನಂತರವಾದರೂ  ಅಂತವರು  ಮುಂದೆ ಬಂದು  ಚೇತನ್‌ ಮುಂಡಾಡಿಯವರ ಕನಸುಗಳಿಗೆ  “ಬೆರಿಸಾಯ’ ವಾಗಬೇಕು  ಎನ್ನುವುದು  ನಮ್ಮ  ಕಳಕಳಿ.

 ಶಾಂತಾರಾಮ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next