Advertisement

ವಚನ ಜ್ಞಾನದೆಡೆಗೆ ಕರದೊಯ್ಯುವ ದಾರಿದೀಪ

09:54 PM Jan 19, 2020 | Lakshmi GovindaRaj |

ತಿಪಟೂರು: ವಚನ ಸಾಹಿತ್ಯ ಜಗತ್ತಿನಲ್ಲೇ ವಿಶಿಷ್ಟ ಮತ್ತು ವಿಶೇಷ ಸಾಹಿತ್ಯವಾಗಿದ್ದು, ವಚನಗಳು ಮನುಷ್ಯನ ಜೀವನ ಜ್ಞಾನದೆಡೆಗೆ ಕರದೊಯ್ಯುವ ದಾರಿದೀಪವಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ನಂ. ಶಿವಗಂಗಪ್ಪ ತಿಳಿಸಿದರು.

Advertisement

ನಗರದ ನಿವೃತ್ತ ನೌಕರರ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್‌ ಸಹಯೋಗದೊಂದಿಗೆ ವಚನ ಸಾಹಿತ್ಯ ವಿಚಾರ ಸಂಕಿರಣ ಹಾಗೂ ಪಂಡಿತ ಚನ್ನಪ್ಪ ಎರೇಸೀಮೆಯವರ ಜನ್ಮ ಶತಮಾನೋತ್ಸವ, ಸಂಸ್ಮರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಚನ ಸಾಹಿತ್ಯ ಗದ್ಯ ಮತ್ತು ಪದ್ಯಗಳ ಮಿಶ್ರಣವಾಗಿದ್ದು, ಜನಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗಲಿರುವ ಸಾಹಿತ್ಯವಾಗಿದೆ. ಪ್ರತಿಯೊಬ್ಬರೂ ವಚನ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಬಸವಣ್ಣ, ಶಿವಶರಣರು, ದಾಸರು, ಮಹಾನಾಯಕರು ಹೆಜ್ಜೆ ಗುರುತು ಬಿಟ್ಟು ಹೋಗಿದ್ದು, ಶತ ಶತಮಾನಗಳು ಕಳೆದರೂ ಜೀವಂತವಾಗಿವೆ. ಇಂತಹ ಶರಣರ ಆದರ್ಶ ಅಳವಡಿಸಿಕೊಳ್ಳಬೇಕಿದೆ ಎಂದರು.

ಪ್ರಾಂಶುಪಾಲ ಎಂ.ಡಿ. ಶಿವಕುಮಾರ್‌ “ಆಧುನಿಕ ಸಮಾಜಕ್ಕೆ ವಚನ ಸಾಹಿತ್ಯದ ಅವಶ್ಯಕತೆ’ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತ, ಆಧುನಿಕ ಯುಗದಲ್ಲಿ ಮನುಷ್ಯ ಮಾನವೀಯ ಮೌಲ್ಯ, ಸಾಮಾಜಿಕ ಕಳಕಳಿ ಮರೆಯುತ್ತ, ಸ್ವಾರ್ಥತೆಯಿಂದ ಬದುಕು ನರಕ ಮಾಡಿಕೊಳ್ಳುತ್ತಿದ್ದಾನೆ. ಸಮಾಜದಲ್ಲಿ ಅತ್ಯಾಚಾರ, ಅನಾಚಾರ, ಸುಲಿಗೆಗಳು ನಡೆಯುತ್ತಿವೆ. ಯುವಪೀಳಿಗೆಯಲ್ಲಂತೂ ಸಂಸ್ಕಾರ, ಸಂಸ್ಕೃತಿ ಕೊರತೆ ಎದು ಕಾಣುತ್ತಿದ್ದು, ಶರಣರು, ದಾಸರ ವಿಚಾರಮೌಲ್ಯ ಅರಿತುಕೊಳ್ಳುವ ಗೋಚಿಗೂ ಹೋಗುತ್ತಿಲ್ಲ.

12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಬರೆಯುವ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದರು. ಧರ್ಮ, ದೇವರು, ಕಾಯಕ, ದಾಸೋಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಇವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ನಡೆಯಬೇಕು. ಉನ್ನತ ಶಿಕ್ಷಣ ಪಡೆದಂತೆಲ್ಲಾ ವಿದ್ಯಾರ್ಥಿಗಳು ದುಶ್ಚಟ, ದುರಾಭ್ಯಾಸಗಳ ದಾಸರಾಗಿದ್ದು, ಇದರಿಂದ ಹೊರ ಬರುಲು ಪಠ್ಯದಲ್ಲಿ ಶಿವ ಶರಣರ ವಚನಗಳು, ಸಾಧನೆಗಳ ಬಗ್ಗೆ ಅಳವಡಿಸಬೇಕು ಎಂಧು ಸಲಹೆ ನೀಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಶಸಾಪ ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ಮಾತನಾಡಿ, ವಚನಗಳ ವಿಚಾರಧಾರೆ ಮುಖ್ಯವಾಗಿದ್ದು, ಬಸವಣ್ಣನವರ ಕಾಲಘಟ್ಟದಲ್ಲಿ ವಚನ ಸಾಹಿತ್ಯ ಸಾರ್ವಜನಿಕ ಭಾಷೆಯನ್ನಾಗಿ ಮಾಡಿ ಸಮಾಜ ಶುದ್ಧೀಕರಣ ಮಾಡಲು ಶ್ರಮಿಸಿದರು. ಸುತ್ತೂರು ಜದ್ಗುರುಗಳು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಸ್ಥಾಪನೆ ಮಾಡಿ ತಾಲೂಕು, ಹೋಬಳಿ ಮಟ್ಟದಲ್ಲಿ ಘಟಕ ಸ್ಥಾಪಿಸಿ ಕಾರ್ಯಕ್ರಮ ಮಾಡಿ ಶರಣರ ವಿಚಾರ ಧಾರೆ ಪಸರಿಸುವ ಕೆಲಸ ಮಾಡುತ್ತಿದೆ.

ಚೆನ್ನಪ್ಪ ಎರೇಸೀಮೆ ಪಂಡಿತರಾಗಿದ್ದು, ತಿಪಟೂರಿನಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿದ್ದರು. ಇಂತಹ ಮಹನೀಯರ ಚಿಂತನೆ ಸಮಾಜಕ್ಕೆ ಪರಿಚಯಿಸುವ ಶಸಾಪ ಅಂದಿನಿಂದಲೂ ಮಾಡಿಕೊಂಡು ಬರುತ್ತಿದೆ. ಮುಂದೆಯೂ ರಾಜ್ಯ ಮಟ್ಟದ ಕಾರ್ಯಕ್ರಮ ಮಾಡುವ ಚಿಂತನೆ ನಡೆಸಿದೆ ಎಂದರು. ಪಂಡಿತ ಚನ್ನಪ್ಪ ಎರೇಸೀಮೆಯವರ ಬದುಕು ಬರಹ, ಸಾಹಿತ್ಯ ಚಿಂತನೆ ಹಾಗೂ ತಾಲೂಕಿನ ಧಾರ್ಮಿಕ ಕ್ಷೇತ್ರಗಳ ಅವಲೋಕನದ ಬಗ್ಗೆ ಗೋಷ್ಠಿ ಏರ್ಪಡಿಸಲಾಗಿತ್ತು.

ಪ್ರಾಧ್ಯಾಪಕ ಕೆ. ಆರ್‌.ಬಸವರಾಜು, ಡಾ.ಕೆ.ರಾಜಶೇಖರ್‌, ತುಳುಜಪ್ಪ, ಹಂಸಿ ಕುಮಾರಸ್ವಾಮಿ, ಕಸಾಪ ತಾ.ಅಧ್ಯಕ್ಷ ಕೆ.ಬಾಲಕೃಷ್ಣ, ಶಸಾಪ ಗೌರವಾಧ್ಯಕ್ಷ ಜಗದೀಶ್‌, ಉಪಾಧ್ಯಕ್ಷ ರಂಗನಾಥ್‌, ಕಾರ್ಯದರ್ಶಿ ಎಂ.ಎಸ್‌. ಚನ್ನೇಗೌಡ, ಸಾಹಿತಿ ಕೆ.ಎನ್‌. ರೇಣುಕಯ್ಯ, ಪ್ರಧಾನ ಕಾರ್ಯದರ್ಶಿ ಸಾರ್ಥವಳ್ಳಿ ಶಿವಕುಮಾರ್‌, ಕೊಬ್ಬರಿ ವರ್ತಕ ಟಿ.ಎನ್‌. ಪರಮಶಿವಯ್ಯ, ನಿವೃತ್ತ ಉಪನ್ಯಾಸಕ ತ.ಶಿ. ಬಸವಮೂರ್ತಿ, ಗಡಬನಹಳ್ಳಿ ಗಂಗಣ್ಣ, ಪರಶುರಾಮನಾಯಕ್‌, ಪಂಚಾಕ್ಷರಿ, ಶಿಕ್ಷಕ ಹನುಮಂತಪ್ಪ ಮತ್ತಿತರರಿದ್ದರು.

ವಚನ ಮತ್ತು ಶರಣರ ಸಂಪತ್ತು ಎಲ್ಲರ ಸಂಪತ್ತಾಗಿದ್ದು, ವಚನಶಾಸ್ತ್ರ ಪಿತಾಮಹ ಎನಿಸಿಕೊಂಡಿರುವ ಫ‌.ಗು. ಹಳಕಟ್ಟಿ ಇಡೀ ಜೀವನವನ್ನು ವಚನಗಳ ಸಂಗ್ರಹಕ್ಕೆ ಮುಡಿಪಾಗಿಟ್ಟರು. 12ನೇ ಶತಮಾನದ ಶಿವಶರಣರು ಬರೆದ ವಚನಗಳ ಸಂಗ್ರಹ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪಂಡಿತ ಚನ್ನಪ್ಪ ಎರೇಸೀಮೆ ವಚನ ಸಾಹಿತ್ಯ ಪರಂಪರೆ ಉಳಿಸಿ ಬೆಳೆಸಲು ಸಾಕಷ್ಟು ಶ್ರಮಿಸಿದ್ದಾರೆ.
-ಎಂ.ಜಿ.ಸಿದ್ದರಾಮಯ್ಯ, ಶಸಾಪ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next