Advertisement

ನಿಷ್ಕ್ರಿಯ ಕೊಳವೆಬಾವಿ ಮುಚ್ಚಲು ಗಡು

06:35 PM Apr 27, 2017 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಅಪಾಯಕಾರಿಯಾಗಿರುವ ನಿಷ್ಕ್ರಿಯ ಕೊಳವೆಬಾವಿಗಳ ಬಗ್ಗೆ 15 ದಿನದೊಳಗೆ ಪಟ್ಟಿ ಮಾಡಿ, ಅವುಗಳನ್ನು ಮುಚ್ಚಿಸುವಂತೆ ದ.ಕ. ಜಿ.ಪಂ. ಮುಖ್ಯಕಾರ್ಯನಿರ್ವಹಣಾಕಾರಿ ಡಾ| ಎಂ.ಆರ್‌. ರವಿ ಎಲ್ಲ ತಾ.ಪಂ.ಗಳ ಇಓಗಳು ಹಾಗೂ ಗ್ರಾ.ಪಂ.ಗಳ ಪಿಡಿಒಗಳಿಗೆ ಸೂಚನೆ ನೀಡಿದರು. ಬುಧವಾರ ನಗರದ ಜಿ.ಪಂ. ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

Advertisement

ಕ್ರಿಮಿನಲ್‌ ಮೊಕದ್ದಮೆ
ಜಿಲ್ಲೆಯಲ್ಲಿ ಕೊಳವೆಬಾವಿಗಳ ಸಂಖ್ಯೆ ಎಷ್ಟಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಉಪಕಾರ್ಯದರ್ಶಿ ಎನ್‌.ಆರ್‌. ಉಮೇಶ್‌, ಜಿಲ್ಲೆಯಲ್ಲಿ ಒಟ್ಟು 5,150 ಸಾರ್ವಜನಿಕ ಕೊಳವೆಬಾವಿಗಳು ಹಾಗೂ 33,000 ಖಾಸಗಿ ಕೊಳವೆಬಾವಿಗಳಿವೆ. ಇದರಲ್ಲಿ ನಿಷ್ಕ್ರಿಯವಾಗಿರುವ ಕೊಳವೆಬಾವಿ ಮುಚ್ಚುವಂತೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗುವುದು. ಆದರೆ ಖಾಸಗಿ ನಿಷ್ಕ್ರಿಯ ಕೊಳವೆಬಾವಿಗಳನ್ನು ಸಂಬಂಧಪಟ್ಟವರೇ ಮುಚ್ಚಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ಬಿಇಒಗಳಿಗೆ ಸ್ಪಷ್ಟ ಸೂಚನೆ ನೀಡಿ
ಸರಕಾರಿ ಶಾಲೆಗಳ ದುರಸ್ತಿಗೆ ಪ್ರಾಥಮಿಕ ಹಾಗೂ ಪ್ರೌಢ ಎಂಬ ಭೇದವಿಲ್ಲದೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಬಹುದು ಎಂದು ಜಿ.ಪಂ. ಸಭೆಯಲ್ಲಿ ನಿರ್ಣಯವಾಗಿದ್ದರೂ ಕೆಲವೊಂದು ಬಿಇಒಗಳು ಒಪ್ಪುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು. ಈ ಕುರಿತು ಬಿಇಒಗಳಿಗೆ ಸ್ಪಷ್ಟ ಸೂಚನೆ ನೀಡುವಂತೆ ಡಿಡಿಪಿಐ ಅವರಿಗೆ ಸಿಇಒ ಆದೇಶಿಸಿದರು. ಜಿಲ್ಲೆಯಲ್ಲಿ 71 ಶಾಲೆಗಳು ತುರ್ತು ದುರಸ್ತಿಯಾಗಬೇಕಿವೆ. ಅದಕ್ಕಾಗಿ 3.20 ಕೋ.ರೂ.ಗಳ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದರು.

ಅಸಾಧಾರಣ ಪ್ರತಿಭೆಗಳಿಗೆ ಪ್ರಶಸ್ತಿ
2016-17ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಗೌರವ್‌ದೇವ್‌ ಎಚ್‌.ಬಿ, ಫರ್ವಿಶಾ ವೆಲಿಶಾ ಮೊಂತೇರೊ, ಪಂಚಮಿ ಮಾರೂರು ಹಾಗೂ ಬಿ. ದಿವಿತ್‌ ಯು. ರೈ ಅವರಿಗೆ ಪ್ರಶಸ್ತಿ ನೀಡಲಾಯಿತು. ಮಹಿಳಾ ಸಾಂತ್ವನ ಕೇಂದ್ರಗಳಿಗೆ ಕಂಪ್ಯೂಟರ್‌ ವಿತರಿಸಲಾಯಿತು. ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಸರ್ವೋತ್ತಮ ಗೌಡ, ಆಶಾ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next