ಬೆಂಗಳೂರು: ರಾಜಧಾನಿಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಸಂಘಟನೆ ಉಸ್ತುವಾರಿ ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ ಹಾಗೂ ಸಂಸತ್ ಸದಸ್ಯ ಪುಟ್ಟರಾಜು ಅವರಿಗೆ ವಹಿಸಲಾಗಿದೆ. ನಗರದಲ್ಲಿ ನಡೆದ ಪಕ್ಷದ ನಗರ ಮತ್ತು ವಿಧಾನಸಭೆ ಕ್ಷೇತ್ರಗಳ ನೂತನ ಅಧ್ಯಕ್ಷರ ನೇಮಕ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಇಬ್ಬರು ಮುಖಂಡರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಗುರುತಿಸುವ ಹೊಣೆಗಾರಿಕೆ ನೀಡಲಾಗಿದೆ.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈಗಿನಿಂದಲೇ ಸಂಘಟನೆ ಗಟ್ಟಿಗೊಳಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಕುಪೇಂದ್ರರೆಡ್ಡಿ ಹಾಗೂ ಪುಟ್ಟರಾಜು ಅವರಿಗೆ ಬೆಂಗಳೂರಿನ ಹೊಣೆಗಾರಿಕೆ ನೀಡಲಾಗಿದೆ ಎಂದು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರು ಕಳೆದ ತಿಂಗಳು ಎರಡು ದಿನಗಳ ಕಾಲ ನಿರಂತರವಾಗಿ ನಗರದ 28 ವಿಧಾನಸಭೆ ಕ್ಷೇತ್ರಗಳ ಮುಖಂಡರ ಸಭೆ ನಡೆಸಿ ಪಕ್ಷ ಸಂಘಟನೆ ಕುರಿತು ಚರ್ಚಿಸಿದ್ದರು. ಅಲ್ಲಿನ ಅಭಿಪ್ರಾಯ, ಸಲಹೆ, ಸೂಚನೆ ಮೇರೆಗೆ ಇಂದು ನಗರದ ಅಧ್ಯಕ್ಷರು, 28 ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರು ಹಾಗೂ ವಿವಿಧ ವಿಭಾಗಗಳ ಅಧ್ಯಕರನ್ನು ನೇಮಿಸಲಾಗಿದೆ. ಬಿಬಿಎಂಪಿಯ 198 ವಾರ್ಡ್‌ಗಳ ಪೈಕಿ 100 ವಾರ್ಡ್‌ಗಳ ಅಧ್ಯಕ್ಷ ನೇಮಕವೂ ಆಗಿದೆ. ಉಳಿದ ವಾರ್ಡ್‌ಗಳ ನೇಮಕ ಶೀಘ್ರವೇ ಆಗಲಿದೆ ಎಂದರು.
ಬೆಂಗಳೂರಿನಲ್ಲಿ ಪಕ್ಷದ ಎಂಟಿ ಲಕ್ಷ ಸದಸ್ಯತ್ವ ನೋಂದಣಿಯಾಗಿದ್ದು, ಪ್ರತಿ ವಾರ್ಡ್‌ಗೆ 25 ಸಾವಿರ ಗುರಿ ನೀಡಲಾಗಿದೆ. ಪಕ್ಷಕ್ಕೆ ಉತ್ತಮ ಭವಿಷ್ಯ ಇದ್ದು ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪಕ್ಷದ ನೆಲೆಗಾಗಿ ಎಲ್ಲರೂ ಶ್ರಮ ಪಟ್ಟಿದ್ದಾರೆ. ಪಕ್ಷದ ನೂತನ ಕಟ್ಟಡ ಇನ್ನು ಒಂದೂವರೆ ತಿಂಗಳಲ್ಲಿ ಉದ್ಘಾಟನೆಯಾಗಲಿದೆ ಎಂದು ಹೇಳಿದರು.
ನಗರದ ನೂತನ ಅಧ್ಯಕ್ಷ ಪ್ರಕಾಶ್: ಇಂದಿನ ಸಭೆಯಲ್ಲಿ ಪಕ್ಷದ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷರಾಗಿ ಪಾಲಿಕೆಯ ಮಾಜಿ ಸದಸ್ಯ ಹಾಗೂ ಪಾಲಿಕೆಯಲ್ಲಿ ಜೆಡಿಎಸ್ ಪಕ್ಷದ ನಾಯಕರಾಗಿದ್ದ ಆರ್.ಪ್ರಕಾಶ್ ಹಾಗೂ ಕಾರ್ಯಾಧ್ಯಕ್ಷರಾಗಿ ಕೆ.ವಿ. ನಾರಾಯಣಸಾಮಿ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಜೆ. ಚಂದ್ರಶೇಖರ್ ಸೇರಿದಂತೆ ಇತರೆ ಪದಾಧಿಕಾರಿಗಳು ಮತ್ತು ವಿವಿಧ ಘಟಕಗಳ ಅಧ್ಯಕ್ಷರನ್ನು ನೇಮಿಸಲಾಯಿತು.