ಬೆಂಗಳೂರು: ನಗರ ಜಿಲ್ಲೆ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಪಕ್ಷ, ವ್ಯಕ್ತಿ, ಜಾತಿ, ಧರ್ಮದ ಮುಲಾಜಿಗೆ ಒಳಗಾಗದೆ ನೀತಿ ಸಂಹಿತೆ ಅನುಷ್ಠಾನಕ್ಕೆ ತರುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ತಿಳಿಸಿದ್ದಾರೆ.
ಗುರುವಾರ ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ ಹಾಗೂ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳ ಪೈಕಿ ನಗರ ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರುವ ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ಮಹದೇವಪುರ, ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ರಾಜಕೀಯ ಪಕ್ಷಗಳ ಕಚೇರಿಗಳ ಎದುರು ಅಳವಡಿಸಲಾಗಿದ್ದ ಜಾಹಿರಾತು ಫಲಕಗಳು ಸೇರಿದಂತೆ ಏಳು ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಶೇ.99ರಷ್ಟು ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಗಿದೆ. ಕೆಲವೊಂದು ಬಾಕಿ ಉಳಿದಿದ್ದರೆ ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ನೀತಿ ಸಂಹಿತೆ ಜಾರಿಯ ಉಸ್ತುವಾರಿ ನೋಡಿಕೊಳ್ಳಲು ಪ್ರತಿ 20 ಮತಗಟ್ಟೆಗೆ ಒಬ್ಬರನ್ನು ಸೆಕ್ಟರ್ ಆಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. 6 ಸಂಚಾರಿ ವಿಚಕ್ಷಣ ದಳಗಳನ್ನು ರಚಿಸಲಾಗಿದೆ.
ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ರಾಜಕೀಯ ಪಕ್ಷಗಳ ಸಭೆ, ಸಮಾರಂಭ ಮತ್ತು ಪ್ರಚಾರದ ವಿಡಿಯೋ ಚಿತ್ರೀಣರಣ ಮಾಡಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ನಗರ ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರುವ ಏಳು ಕ್ಷೇತ್ರಗಳಲ್ಲಿ ಒಟ್ಟು 30.85 ಲಕ್ಷ ಮತದಾರರಿದ್ದು, ಇದಕ್ಕಾಗಿ 5,369 ಬ್ಯಾಲೆಟ್ ಯೂನಿಟ್, 4,729 ಕಂಟ್ರೋಲ್ ಯೂನಿಟ್ ಹಾಗೂ 4,700 ವಿವಿಪ್ಯಾಟ್‌ಗಳು ಬೇಕು.
ಈಗಾಗಲೇ ಅಗತ್ಯವಿರುವ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ತರಿಸಿಕೊಳ್ಳಲಾಗಿದೆ. 2,772 ಮತಗಟ್ಟೆಗಳನ್ನು ಗುರುತಿಸಿದ್ದು, 410 ಹೆಚ್ಚುವರಿ ಮತಗಟ್ಟೆಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಚುನವಣಾ ಕರ್ತವ್ಯಕ್ಕೆ ಒಟ್ಟು 20 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ನಗರ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್, ವಿಶೇಷ ಜಿಲ್ಲಾಧಿಕಾರಿ-2, ರಂಗಪ್ಪ ಉಪಸ್ಥಿತರಿದ್ದರು.
ಕಂಟ್ರೋಲ್ ರೂಮ್ ಗೆ ಚಾಲನೆ: ಇದೇ ವೇಳೆ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಕಂಟ್ರೋಲ್ ರೂಮ್‌ಗೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. ಸಾರ್ವಜನಿಕರು 18004250138 ಶುಲ್ಕ ರಹಿತ ಸಂಖ್ಯೆಗೆ ಕರೆ ಮಾಡಿ ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದು. ಇದರೊಂದಿಗೆ ಸಹಾಯವಾಣಿ ಕೇಂದ್ರಕ್ಕೂ (080 22211157) ಜಿಲ್ಲಾಧಿಕಾರಿಗಳು ಗುರುವಾರ ಚಾಲನೆ ನೀಡಿದರು.