ಮೋಟಮ್ಮ, ಮಾಜಿ ಸಚಿವೆ
ನಾನು ಸಬ್ ರಿಜಿಸ್ಟ್ರಾರ್ ಕೆಲಸದಲ್ಲಿದ್ದೆ, ರಾಜಕಾರಣ ಪ್ರವೇಶ ನನಗೆ ಆಕಸ್ಮಿಕ, ನನ್ನನ್ನು ರಾಜಕಾರಣಕ್ಕೆ ಎಳೆತಂದದ್ದು ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದ ಡಿ.ಬಿ.ಚಂದ್ರೇಗೌಡರು. ಇಂದಿರಾಗಾಂಧಿಯವರ ಮಾತಿಗೆ ಗೌರವ ಕೊಟ್ಟು ಸರಕಾರಿ ಹುದ್ದೆ ತ್ಯಜಿಸಿ ರಾಜಕಾರಣಕ್ಕೆ ಬಂದೆ. ಚುನಾವಣೆಯ ಗಂಧಗಾಳಿಯೂ ನನಗೆ ಗೊತ್ತಿರಲಿಲ್ಲ, ಭಾಷಣ ಮಾಡಲು ಕೂಡ ಬರುತ್ತಿರಲಿಲ್ಲ.
1978ರಲ್ಲಿ ಮೂಡಿಗೆರೆಯಿಂದ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ಕೇವಲ ಮೂರು ಜನ ಮಾತ್ರ ಹೋಗಿ ನಾಮಪತ್ರ ಸಲ್ಲಿಸಿದ್ದೆವು. ಈಗಿನಂತೆ ಸಾವಿರಾರು ಜನರ ಮೆರವಣಿಗೆ, ನೂರಾರು ವಾಹನಗಳ ಸಾಲು ಸಾಲು ಇರಲೇ ಇಲ್ಲ. ದೇವರಾಜ ಅರಸು ಅವರನ್ನು ಪಕ್ಷದ ನಾಯಕರು ನನಗೆ ಪರಿಚಯಿ ಸಿಕೊಟ್ಟರು. ನನಗೆ ಮಾತ್ರ ಚುನಾವ ಣೆಗೆ ಅವರು 25 ಸಾವಿರ ರೂ. ಕಳುಹಿಸಿದ್ದರು, ಬೇರೆ ಯಾರಿಗೂ ಹಣ ಕೊಟ್ಟಿರಲಿಲ್ಲ, ಪಾರ್ಟಿ ಫಂಡ್ ಅನ್ನೋದು ಗೊತ್ತಿರಲಿಲ್ಲ. ಆಗಿನ ಕಾಲಕ್ಕೆ ಸಾರ್ವ ಜನಿಕರ ದೇಣಿಗೆ ಸೇರಿ ಒಂದು ಲಕ್ಷ ಖರ್ಚು ಮಾಡಿರಬಹುದು, ಅದು ಜೀಪ್ ಬಾಡಿಗೆ ಮತ್ತು ಪೆಟ್ರೋಲ್‌ಗೆ ಅಷ್ಟೆ. ಚುನಾವಣೆ ಹೇಗೆ ನಡೆಸಿದರು, ಹೇಗೆ ಮಾಡಿದರೂ ಎಂಬುದೇ ಗೊತ್ತಿಲ್ಲ.
ಪ್ರಚಾರಕ್ಕೆ ಈಗಿನಂತೆ ಹತ್ತಾರು ವಾಹನಗಳೇ ಇರಲಿಲ್ಲ, ಕೇವಲ ಒಂದೇ ಒಂದು ಜೀಪ್. ಕಾಲ್ನಡಿಗೆಯಲ್ಲೇ ಸಾಗಿ ಮತ ಕೇಳುತ್ತಿದ್ದೇವು. ನನಗೆ ಭಾಷಣ ಕೂಡ ಬರುತ್ತಿರಲಿಲ್ಲ, ಪ್ರಚಾರದ ವೇಳೆ ನಾನು ಮಾತಾಡಲ್ಲವೆಂದು ಚಂದ್ರೇಗೌಡರಿಗೆ ಹೇಳಿದೆ, ಆಗ ಅವರು ಅಭ್ಯರ್ಥಿಯಾಗಿ ಮಾತಾಡಬೇಕೆಂದರು. “ಹಿರಿಯರೆಲ್ಲ ಸೇರಿ ಚುನಾವಣೆಗೆ ನಿಲ್ಲಿಸಿದ್ದಾರೆ, ನನಗೆ ಆಶೀರ್ವಾದ ಮಾಡಿ’ ಎಂದು ಮತದಾರರಲ್ಲಿ ಮನವಿ ಮಾಡಿಕೊಳ್ಳಿ ಅಷ್ಟೇ ಸಾಕು ಎಂದು ಹೇಳಿಕೊಟ್ಟರು. ಆದರೆ ಚಂದ್ರೇಗೌಡರ ಭಾಷಣ ಮಾತ್ರ ಅತ್ಯದ್ಭುತ, ಮನಮಿಡಿಯುವಂತಿತ್ತು, ಆ ಭಾಷಣವನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಮನೆ ಮಗಳು, ನಿಮ್ಮ ಅಕ್ಕ, ತಂಗಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಕಾರ್ಯಕರ್ತರ ಮನೆಯಲ್ಲೇ ಊಟ ಆಗುತ್ತಿತ್ತು. ಕೆಲವು ಕಡೆ ಅವರೇ ದುಡ್ಡು ಕೊಡುತ್ತಿದ್ದರು.
ಎಸ್ಟೇಟ್‌ಗಳು, ಕಾರ್ಮಿಕರ ಕಾಲನಿಗಳಿಗೆ ಹೋದಾಗ ಅವರು ನನಗೆ ತಲೆಗೆ ಎಣ್ಣೆ ಹಾಕಿ, ಹೂ ಮುಡಿಸಿ ಬಹಳ ಪ್ರೀತಿಯಿಂದ ನೋಡುತ್ತಿದ್ದರು, ಕೆಲವು ಕಡೆ ಮೆರವಣಿಗೆ ಮಾಡಿದ್ದೂ ಉಂಟು. ತುಳು ಮಾತನಾಡುವ ಕಾರ್ಮಿಕರು “ಗೆಲ್ತಾಳೆ, ಗೆಲ್ತಾಳೆ, ಮೋಟಮ್ಮ ಗೆಲ್ತಾಳೆ’ ಎಂಬ ತುಳುವಿನಲ್ಲೇ ಘೋಷಣೆ ಕೂಗುತ್ತಿದ್ದರು. ವಿಶೇಷವಾಗಿ ನಮ್ಮ ಪಕ್ಷದ ಚುನಾವಣೆ ಚಿಹ್ನೆ “ಹಸ್ತ’ ದ ಬಗ್ಗೆ ಪರಿಚಯ ಮಾಡಿಕೊಡುತ್ತಿದ್ದ ಪರಿಯಂತೂ ಮರೆಯಲು ಸಾಧ್ಯವಿಲ್ಲ. ಆಗಿನ ಚುನಾವಣೆಗಳೇ ಚೆನ್ನಾಗಿದ್ದವು.
ಈಗ ಮತದಾರರಿಗೆ ಎಲ್ಲ “ಭಾಗ್ಯ’ ಕರುಣಿಸಿದರೂ ಮತ ಹಾಕಲ್ಲ, ಸ್ತ್ರೀಶಕ್ತಿ ಸಂಘಗಳ ಸ್ಥಾಪನೆಯ ರುವಾರಿಯಾದ ನನಗೆ ನನ್ನ ಊರಿನಲ್ಲೇ ಮತ ಹಾಕಲಿಲ್ಲ. ದುರಂತ ಹೇಗಿದೆ ನೋಡಿ. ಜನ ಯಾವುದಕ್ಕೆ ಬೆಲೆ ಕೊಡುತ್ತಾರೆ, ಯಾವ ದೃಷ್ಟಿಯಿಂದ ಮತ ಹಾಕುತ್ತಾರೆ ಅನ್ನುವುದು ತಿಳಿಯುತ್ತಿಲ್ಲ. ಈಗಿನ ಚುನಾವಣೆಗಳು ದುಬಾರಿ ಹಾಗೂ ದುಸ್ತರ.
-ಎಂ.ಎನ್.ಗುರುಮೂರ್ತಿ