Advertisement

ಪಕ್ಷದ ಬಿಕ್ಕಟ್ಟು ಶೀಘ್ರ ಬಗೆಹರಿಯಲಿದೆ

11:52 AM May 02, 2017 | Team Udayavani |

ಸಿದ್ದಾಪುರ (ಉತ್ತರ ಕನ್ನಡ): “ಪಕ್ಷದ ಆಂತರಿಕ ವಿಚಾರವಾಗಿ ಏನನ್ನೂ ಹೇಳಲಾರೆ. ಆದರೆ, ಎಲ್ಲ ಬಿಕ್ಕಟ್ಟು ಒಂದೆರಡು ದಿನಗಳಲ್ಲಿ ಸರಿಯಾಗಲಿದೆ. ರಾಷ್ಟ್ರೀಯ ನಾಯಕರು ಸೂಕ್ತ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಗೆಲುವಿಗೆ ಕೆಲಸ ಮಾಡುತ್ತೇವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಭೀಕರ ಬರಗಾಲವಿದೆ. ಇದು ಮುಂದುವರಿದರೆ ಕುಡಿಯುವ ನೀರಿಗೂ ಹಾಹಾಕಾರವಾಗಲಿದೆ. ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳಿಗೂ ನೀರಿಲ್ಲದಾಗಿದೆ. ಆದರೆ ರಾಜ್ಯ ಸರ್ಕಾರ
ಸಮರ್ಪಕ ಕ್ರಮ ತಗೆದುಕೊಂಡಿಲ್ಲ. ಮುಖ್ಯಮಂತ್ರಿಗೆ ಅಭಿವೃದ್ಧಿಪರ ಚಿಂತನೆಗಳಿಲ್ಲ. ಸಂಕಷ್ಟದಲ್ಲಿರುವ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಇಲ್ಲವಾದರೆ ಬಿಜೆಪಿ ಹೋರಾಟ ನಡೆಸುತ್ತದೆ.ಅದರ ದಿನಾಂಕವನ್ನು ಶೀಘ್ರ ತಿಳಿಸಲಾಗುವುದು. ಸರ್ಕಾರ ಇಷ್ಟು ಪ್ರಮಾಣದಲ್ಲಿ ತೆರಿಗೆಯನ್ನು ಪಡೆಯುತ್ತಿದೆ. ಆದರೂ ಬಜೆಟ್‌ ಘೋಷಣೆ ಪೈಕಿ ಶೇ. 60ರಷ್ಟು ಹಣವನ್ನೂ ಖರ್ಚು ಮಾಡಲಾಗಿಲ್ಲ’ ಎಂದರು.

Advertisement

ಸರ್ವೇ ನಡೆಸಿ ಟಿಕೆಟ್‌: ಉಪಚುನಾವಣೆಯಲ್ಲಿ ನಾವು ಗುಂಡ್ಲುಪೇಟೆಯಲ್ಲಿ ಶೇ. 46, ನಂಜನಗೂಡಿನಲ್ಲಿ ಶೇ. 43ರಷ್ಟು
ಮತ ಪಡೆದಿದ್ದೇವೆ. ಅಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸಿಗೆ ಬಿಟ್ಟುಕೊಟ್ಟಿತ್ತು. ಇದರಿಂದ ನೇರ ಸ್ಪರ್ಧೆ ನಡೆಯಿತು. 25 ದಿನ ಚುನಾವಣೆಗೆ ಕೆಲಸ ಮಾಡಿದ್ದೇವೆ. ಅದೊಂದು ಹೊಸ ಅನುಭವ. ಮುಂದಿನ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಹಲವರು
ಪಕ್ಷಕ್ಕೆ ಬರುತ್ತಿದ್ದಾರೆ. ಕ್ಷೇತ್ರಗಳಲ್ಲಿ ಸರ್ವೇ ನಡೆಸಿ, ಜನಾಭಿಪ್ರಾಯ ಪಡೆದು ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗುವುದು ಎಂದರು.

ಕಸ್ತೂರಿ ರಂಗನ್‌ ವರದಿಗೆ ನಮ್ಮ ವಿರೋಧ ಇದೆ. ಈ ಬಗ್ಗೆ ಅನಂತಕುಮಾರ್‌ ಜೊತೆಯಾಗಿ ನಾವೆಲ್ಲ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದ್ದೇವೆ. ರಾಜ್ಯ ಸರ್ಕಾರ ಸರಿಯಾದ ವರದಿ ನೀಡದಿರುವುದೇ ಇದಕ್ಕೆ ಕಾರಣ. ಕಸ್ತೂರಿ ರಂಗನ್‌ ವರದಿ ಜಾರಿಯಾಗಲು ಬಿಡುವುದಿಲ್ಲ ಎಂದರು. ರಾಜ್ಯ ಉಪಾಧ್ಯಕ್ಷ, ಸಂಸದ ಅನಂತಕುಮಾರ ಹೆಗಡೆ, ಶಾಸಕ
ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಕುಮಾರ ಬಂಗಾರಪ್ಪ, ಶಿವಾನಂದ ನಾಯ್ಕ, ಹರತಾಳ ಹಾಲಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next