ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಜಿಲ್ಲೆಯ ಶಾಶ್ವತ ನೀರಾವರಿ ಯೋಜನೆಗಳ ಬಗ್ಗೆ ಪ್ರಣಾಳಿಕೆಯಲ್ಲಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್. ಆಂಜನೇಯರೆಡ್ಡಿ ಹೇಳಿದರು.
ನಗರದಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಯಲುಸೀಮೆ ಭಾಗದ ದಶಕಗಳ ಬೇಡಿಕೆ ಈಡೇರಿಸುವಂತೆ ಹೋರಾಟ ಸಮಿತಿಯಿಂದ ಅನೇಕ ಪ್ರತಿಭಟನೆಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದರೂ ಗಮನ ಹರಿಸಲಿಲ್ಲ ಎಂದರು.
ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿಲ್ಲ: ಈ ಭಾಗದ ಅಂತರ್ಜಲದಲ್ಲಿ ಅಪಾಯಕಾರಿ ಯುರೇನಿಯಂ ಪತ್ತೆಯಾಗಿರುವ ಕುರಿತು ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ಕಳವಳ ವ್ಯಕ್ತಪಡಿಸಿದ್ದು, ಗಂಭೀರವಾಗಿ ಪರಿಗಣಿಸಬೇಕಾದ ಈ ಭಾಗದ ಜನಪ್ರತಿನಿಧಿಗಳು, ಸರ್ಕಾರವಾಗಲಿ ಸಮಸ್ಯೆ ಪರಿಹರಿಸುವ ಕ್ರಮ ಕೈಗೊಂಡಿಲ್ಲ. ಕೇಂದ್ರದ ಸರ್ಕಾರಿ ಸಂಸ್ಥೆಗಳೇ ಇಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಈ ಭಾಗದ ನೀರಾವರಿ ಸಮಸ್ಯೆ ಬಗೆಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಗಳಿಗೆ ವರದಿ ಸಲ್ಲಿಸಿದ್ದರೂ ನಿರ್ಲಕ್ಷಿಸಿದ್ದು, ಎತ್ತಿನಹೊಳೆ ಯೋಜನೆಯಿಂದ ಹನಿ ನೀರು ಜಿಲ್ಲೆಗಳಿಗೆ ಬರುವುದಿಲ್ಲ ಎಂಬ ವರದಿಯನ್ನೂ ಪರಿಗಣಿಸಿಲ್ಲ. ವಿಜ್ಞಾನಿಗಳು ನೀಡಿರುವ ವರದಿ ಬದಿಗಿಟ್ಟು, ಗುತ್ತಿಗೆದಾರರು ನೀಡುವ ಯೋಜನೆಗಳನ್ನು ಜಾರಿಗೊಳಿಸಿ ತನ್ನ ಜೇಬು ತುಂಬಿಸಿಕೊಳ್ಳುವ ಕೆಲಸಕ್ಕೆ ಕೈಹಾಕಿವೆ ಎಂದು ಆರೋಪಿಸಿದರು.
ಸಾಮರ್ಥ್ಯ ಕಳೆದುಕೊಂಡಿವೆ: ಎಚ್‌ಎನ್, ಕೆಸಿ ವ್ಯಾಲಿ ಯೋಜನೆಗಳಿಂದ ಕೆರೆಗಳು ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದು, ಅಂತರ್ಜಲವು ಕಲುಷಿತಗೊಳ್ಳುತ್ತಿದೆ. ಈ ಯೋಜನೆಯಿಂದಲೇ ಅಂತರ್ಜಲ ವೃದ್ಧಿಯಾಗಿದೆ ಎಂಬ ಸುಳ್ಳನ್ನು ವ್ಯವಸ್ಥಿತವಾಗಿ ಹರಡಿಸಲಾಗುತ್ತಿದೆ. ಆದರೆ ಕಳೆದ 3 ವರ್ಷಗಳಿಂದ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದ್ದು, ಇದರಿಂದ 40 ವರ್ಷಗಳ ಬಳಿಕ ಎಲ್ಲ ಕೆರೆ ಕುಂಟೆಗಳು ಕೋಡಿ ಹರಿದಿವೆ. ಆದರೆ ಮಳೆ ನೀರನ್ನು ಹಿದಿಟ್ಟುಕೊಳ್ಳುವ ಸಾಮರ್ಥ್ಯವು ಕೆರೆಗಳು ಕಳೆದುಕೊಂಡಿವೆ ಎಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ಕಾಮ್ರೇಡ್ ಲಕ್ಷ್ಮಯ್ಯ, ಲೋಕೇಶ್ ಗೌಡ, ಹಡಗಲಿ ಪ್ರಕಾಶ್, ನಾರಾಯಣಸ್ವಾಮಿ, ಶ್ರೀನಿವಾಸ್, ಗೋಪಾಲಗೌಡ, ಚೀಮಾಕಲಹಳ್ಳಿ ರಮೇಶ್, ರಾಮಕೃಷ್ಣಪ್ಪ, ಪ್ರಮೋದ್, ಆನಂದ್, ಬಾಬು, ಉಷಾರೆಡ್ಡಿ ಇದ್ದರು.