ಬೆಂಗಳೂರು: ಮುಂಚೂಣಿ ನಾಯಕರು ತಮಗೆ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ, ರಾಷ್ಟ್ರೀಯ ಪಕ್ಷಗಳು ಬಲಹೀನಗೊಳ್ಳುತ್ತವೆ. ಇದಕ್ಕೆ ಇತ್ತೀಚೆಗೆ ನಡೆದ ಚುನಾವಣಾ ಫಲಿತಾಂಶವೇ ಸಾಕ್ಷಿ ಎಂದು ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಮಾತಂಗ ಪ್ರತಿಷ್ಠಾನ ಶನಿವಾರ ಹಮ್ಮಿಕೊಂಡಿದ್ದ “ಮಾತಂಗ ಪ್ರತಿಭಾ ಸಂಗಮ’- ಮಾದಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಯಕರಾದವರು ತಾವು ಮಾತ್ರ ಬೆಳೆದು ಬೀಗಿದರೆ ಸಮುದಾಯಕ್ಕೆ ಉಪಯೋಗ ಆಗುವುದಿಲ್ಲ. ಎರಡನೇ ಹಂತದ ನಾಯಕರನ್ನೂ ಬೆಳೆಸಬೇಕು. ಆಗ ಮಾತ್ರ ಸಮುದಾಯಗಳು ಸಮಗ್ರವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಹೋರಾಟಗಳನ್ನು ಮುಂಚೂಣಿಯಲ್ಲಿಟ್ಟು, ಶಿಕ್ಷಣವನ್ನು ನಿರ್ಲಕ್ಷಿಸಿದ್ದರಿಂದ ತಳ ಸಮುದಾಯಗಳು ವಿವಿಧ ಹಂತಗಳಲ್ಲಿ ಹಿಂದುಳಿಯುತ್ತಿವೆ. ಆದ್ದರಿಂದ ಶಿಕ್ಷಣಕ್ಕೆ ಒತ್ತುಕೊಡಬೇಕು. ಆ ನಿಟ್ಟಿನಲ್ಲಿ ಸಂಘಟನೆಗಳು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕೆ ಮಠಗಳು ಕೂಡ ಕೈಜೋಡಿಸಲಿವೆ ಎಂದು ತಿಳಿಸಿದರು.
ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ಆನೇಕಲ್‌ನಲ್ಲಿ ನಾನು ಒಳ್ಳೆಯ ಕೆಲಸಗಳನ್ನು ಮಾಡಿದರೂ ಜನ ಸೋಲಿಸಿದರು. ಪ್ರಾಮಾಣಿಕವಾಗಿ ಯಾವುದೇ ತಾರತಮ್ಯ ಧೋರಣೆ ಅನುಸರಿಸದೆ ಕೆಲಸ ಮಾಡಿದ್ದೇನೆ. ಆದರೆ, ನಾನು ನಿಷ್ಠುರವಾಗಿರುವುದು ಕೆಲವರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ನನಗೆ ಈ ಹಿಂದೆ ಸೋಲು ಉಂಟಾಯಿತು ಎಂದು ಅಭಿಪ್ರಾಯಪಟ್ಟರು.
ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ, ಪ್ರತಿಷ್ಠಾನದ ಅಧ್ಯಕ್ಷ ಆರ್. ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ 217 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.