Advertisement

ನಾಳೆಯಿಂದ ರಂಗೇರಲಿದೆ ಕಣ

11:17 AM May 04, 2019 | Team Udayavani |

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಸಮರದಲ್ಲಿ ಮೇ 5ರಿಂದ ಪ್ರಚಾರದ ಅಬ್ಬರ ಹೆಚ್ಚಿಸಲು ಬಿಜೆಪಿ ನಿರ್ಧರಿಸಿದೆ. ರಾಜ್ಯದ ಘಟಾನುಘಟಿ ನಾಯಕರನ್ನು ಕ್ಷೇತ್ರಕ್ಕೆ ಕರೆತರಲು ನಿರ್ಧರಿಸಲಾಗಿದ್ದು, ಬಿ.ವೈ.ರಾಘವೇಂದ್ರ ಸೇರಿದಂತೆ ಅನೇಕ ನಾಯಕರು ಕ್ಷೇತ್ರದಲ್ಲೇ ಠಿಕಾಣಿ ಹೂಡಲಿದ್ದಾರೆ.

Advertisement

ಉಪ ಚುನಾವಣೆ ನಾಮಪತ್ರ ಸಲ್ಲಿಕೆ ನಂತರದಲ್ಲಿ ಮೈತ್ರಿಕೂಟದ ಪ್ರಚಾರ ಅಬ್ಬರಕ್ಕೆ ಹೋಲಿಸಿದರೆ ಬಿಜೆಪಿ ಪ್ರಚಾರ ಒಂದಿಷ್ಟು ಸಪ್ಪೆಯಂತೆ ಭಾಸವಾಗುತ್ತಿದೆಯಾದರೂ ಮೇ 5ರಂದು ಕುಂದಗೋಳದಲ್ಲಿ ಬಿಜೆಪಿ ಬೂತ್‌ ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಪ್ರಚಾರ ಭರಾಟೆ ತೀವ್ರಗೊಳಿಸಲು ನಿರ್ಧರಿಸಿದೆ. ಮೇ 4ರಂದು ಅಮವಾಸ್ಯೆ ಇರುವುದರಿಂದ ಮರುದಿನ ಮೇ 5ರಿಂದ ಪ್ರಚಾರ ತೀವ್ರಗೊಳಿಸಲು ಬಿಜೆಪಿ ನಿರ್ಧರಿಸಿದೆ. ಕುಂದಗೋಳದಲ್ಲಿ ಮೇ 5ರಂದು ನಡೆಸಲಿರುವ ಬೂತ್‌ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಸುಮಾರು 3 ಸಾವಿರ ಕಾರ್ಯಕರ್ತರನ್ನು ಸೇರಿಸಲು ನಿರ್ಧರಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ನಾಯಕರಾದ ಜಗದೀಶ ಶೆಟ್ಟರ, ಕೆ.ಎಸ್‌. ಈಶ್ವರಪ್ಪ, ಪ್ರಹ್ಲಾದ ಜೋಶಿ ಸೇರಿದಂತೆ ಅನೇಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೂತ್‌ ಮಟ್ಟದ ಕಾರ್ಯಕರ್ತರ ಸಮಾವೇಶದ ನಂತರದಲ್ಲಿ ಜಿಪಂ ಕ್ಷೇತ್ರವಾರು ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಕುಂದಗೋಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಆರು ಜಿಪಂ ಕ್ಷೇತ್ರಗಳು ಬರಲಿದ್ದು, ಆರು ಸಮಾವೇಶಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ. ಒಂದೆಡೆ ದೊಡ್ಡ ಸಮಾವೇಶ ಮಾಡುವ ಬದಲಾಗಿ, ಜಿಪಂ ಕ್ಷೇತ್ರವಾರು ಸಮಾವೇಶಗಳನ್ನು ಆಯೋಜಿಸುವ ಮೂಲಕ ಪಕ್ಷದ ರಾಜ್ಯಮಟ್ಟದ ನಾಯಕರನ್ನು ಕರೆತಂದು ಆಯಾ ಕ್ಷೇತ್ರ ವ್ಯಾಪ್ತಿಯ ಜನರ ಮೇಲೆ ಪ್ರಭಾವ ಬೀರಲು ಬಿಜೆಪಿ ಮುಂದಾಗಿದೆ.

3 ದಿನ ಯಡಿಯೂರಪ್ಪ ಠಿಕಾಣಿ?: ಕ್ಷೇತ್ರದಲ್ಲಿ ಗೆಲುವು ತಮ್ಮದಾಗಿಸಿಕೊಳ್ಳಲು ಎರಡೂ ಕಡೆಯವರು ತೀವ್ರ ಕಸರತ್ತಿಗೆ ಮುಂದಾಗಿದ್ದಾರೆ. ಯಾವುದೇ ಸಣ್ಣ ಅವಕಾಶ ಬಿಟ್ಟು ಕೊಡಬಾರದು ಎಂಬ ನಿಟ್ಟಿನಲ್ಲಿ ಜಿದ್ದಾಜಿದ್ದಿಯೊಂದಿಗೆ ಪ್ರಚಾರ, ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಈಗಾಗಲೇ ಕ್ಷೇತ್ರಕ್ಕೆ ಸಚಿವರಾದ ಡಿ.ಕೆ. ಶಿವಕುಮಾರ, ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ಮಾಜಿ ಸಚಿವ ಎಚ್.ಕೆ.ಪಾಟೀಲ ಸೇರಿದಂತೆ ಅನೇಕರನ್ನು ಉಸ್ತುವಾರಿಗಳಾಗಿ ನೇಮಿಸಿದೆ. ಜಿಪಂ ಕ್ಷೇತ್ರಕ್ಕೆ ಒಬ್ಬರಂತೆ ಆರು ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದ್ದು, ಕ್ಷೇತ್ರದಲ್ಲಿನ ಸುಮಾರು 40 ಗ್ರಾಪಂಗಳಿಗೆ ತಲಾ ಒಬ್ಬರು ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಿದೆ.

ಬಿಜೆಪಿ ಸಹ ತಾನೇನು ಕಡಿಮೆಯಲ್ಲ ಎಂಬಂತೆ ಈಗಾಗಲೇ ಪಕ್ಷದ ನಾಯಕರಾದ ಕೆ.ಎಸ್‌. ಈಶ್ವರಪ್ಪ, ಜಗದೀಶ ಶೆಟ್ಟರ, ಗೋವಿಂದ ಕಾರಜೋಳ ಹಾಗೂ ಪ್ರಹ್ಲಾದ ಜೋಶಿ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಿದೆ. ಇದೀಗ ಶಾಸಕ ಬಸವರಾಜ ಬೊಮ್ಮಾಯಿ ಅವರನ್ನು ಸಹ ಉಸ್ತುವಾರಿ ಪಟ್ಟಿಗೆ ಸೇರಿಸಲು ನಿರ್ಧರಿಸಿದೆ. ರಾಜ್ಯದ ಇನ್ನಷ್ಟು ಬಿಜೆಪಿ ನಾಯಕರನ್ನು ಕ್ಷೇತ್ರಕ್ಕೆ ಕರೆ ತಂದು ಜಿಪಂವಾರು ಉಸ್ತುವಾರಿ ನೀಡುವ, ಪಕ್ಷದ ಶಾಸಕರು, ಸಂಸದರು, ವಿಧಾನಪರಿಷತ್ತು ಸದಸ್ಯರಿಗಳಿಗೂ ವಿವಿಧ ಜವಾಬ್ದಾರಿ ನೀಡುವ ಮೂಲಕ ಪ್ರಚಾರ ಕಾರ್ಯ ಪರಿಣಾಮಕಾರಿ ವಿಸ್ತರಣೆಗೆ ಮುಂದಾಗಿದೆ.

Advertisement

ಬಿ.ವೈ. ರಾಘವೇಂದ್ರ ಅವರು ಒಂದೆರಡು ದಿನಗಳಲ್ಲಿಯೇ ಕ್ಷೇತ್ರಕ್ಕೆ ಆಗಮಿಸಲಿದ್ದು, ಕ್ಷೇತ್ರದಲ್ಲೇ ಠಿಕಾಣಿ ಹೂಡಲಿದ್ದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ತಮ್ಮದೇ ಕಾರ್ಯತಂತ್ರ ರೂಪಿಸಲಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರು ಮೇ 5ರಂದು ಕುಂದಗೋಳಕ್ಕೆ ಆಗಮಿಸಲಿದ್ದು, ನಂತರ ಚಿಂಚೋಳಿಯಲ್ಲಿ ಪ್ರಚಾರ ನಡೆಸಲಿದ್ದು, ಕುಂದಗೋಳ ಕ್ಷೇತ್ರದಲ್ಲಿ 2-3 ದಿನ ಠಿಕಾಣಿ ಹೂಡುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನು ಖಚಿತವಾಗಿಲ್ಲ ಎಂಬುದು ಬಿಜೆಪಿ ಮೂಲಗಳ ಅನಿಸಿಕೆ.

ಕುಂದಗೋಳದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಪರವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಮಾಜಿ ಸಚಿವ ಸಿ.ಎಂ. ಉದಾಸಿ ಇನ್ನಿತರರು ಪ್ರಚಾರ ನಡೆಸಿದ್ದು, ಮೇ 5ರ ನಂತರ ಪ್ರಚಾರ ಕಾರ್ಯವನ್ನು ಬಿಜೆಪಿಯೂ ತೀವ್ರಗೊಳಿಸುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮೈತ್ರಿ ಕೂಟ ಹಾಗೂ ಬಿಜೆಪಿಯಿಂದ ಪ್ರಚಾರ ಅಬ್ಬರ ಇನ್ನಷ್ಟು ರಂಗೇರಲಿದೆ. ಸವಾಲು-ಪ್ರತಿಸವಾಲು, ಆರೋಪ-ಪ್ರತ್ಯಾರೋಪಗಳ ಅಬ್ಬರವೂ ಹೆಚ್ಚಲಿದೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next