ಹೊಸದಿಲ್ಲಿ: ದೇಶದಲ್ಲಿ 100 ವರ್ಷಗಳು ದಾಟಿರುವಂಥ 234 ಅಣೆಕಟ್ಟುಗಳನ್ನು ಈಗಲೂ ಬಳಸಲಾಗುತ್ತಿದ್ದು, ಈ ಅಣೆಕಟ್ಟುಗಳ ಸುರಕ್ಷೆ ಬಗ್ಗೆ ಸಂಸದೀಯ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೆಲವು ಡ್ಯಾಂಗಳಂತೂ 300 ವರ್ಷಕ್ಕೂ ಹಳೆಯದಾಗಿದ್ದು, ಇವುಗಳನ್ನು ಇನ್ನೂ ಬಳಕೆಯಿಂದ ಮುಕ್ತಗೊಳಿಸಿಲ್ಲ ಎಂದೂ ಸಮಿತಿ ಅಸಮಾಧಾನ ಹೊರಹಾಕಿದೆ. ಶತಕ ಪೂರೈಸಿರುವಂಥ ಡ್ಯಾಂಗಳ ಪೈಕಿ ಕರ್ನಾಟಕದ 15 ಅಣೆಕಟ್ಟುಗಳೂ ಸೇರಿವೆ.
ಸಾಮಾನ್ಯವಾಗಿ ಅಣೆಕಟ್ಟುಗಳನ್ನು 100 ವರ್ಷಗಳ ಬಾಳಿಕೆ ಅವಧಿಗೆ ವಿನ್ಯಾಸಗೊಳಿಸಿರಲಾಗುತ್ತದೆ. ಕಾಲ ಕ್ರಮೇಣ ಜಲಾಶಯದ ನೀರು ದೀರ್ಘಾವಧಿ ಶೇಖರಣೆಗೊಳ್ಳುವ ಕಾರಣ ಅಣೆಕಟ್ಟಿನ ಕಾರ್ಯ ಕ್ಷಮತೆ ಕುಗ್ಗುತ್ತಾ ಹೋಗುತ್ತದೆ. ಆದರೆ ನಮ್ಮ ದೇಶದಲ್ಲಿ ಈವರೆಗೆ ಒಂದೇ ಒಂದು ಅಣೆಕಟ್ಟನ್ನೂ ಸ್ಥಗಿತಗೊಳಿಸಿಲ್ಲ. ಅಮೆರಿಕ ಸಹಿತ ಹಲವು ದೇಶಗಳು ಅವಧಿ ಮೀರಿದ ಅಣೆಕಟ್ಟುಗಳನ್ನು ಬಳಕೆಯಿಂದ ಮುಕ್ತಗೊಳಿಸಿ, ನೀರಿನ ನೈಸರ್ಗಿಕ ಹರಿವಿಗೆ ದಾರಿ ಮಾಡಿಕೊಡುತ್ತಿವೆ. ಭಾರತದಲ್ಲಿ ಇಂಥ ಪ್ರಕ್ರಿಯೆ ನಡೆದೇ ಇಲ್ಲ.
ನೀರಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಸಂಸತ್‌ಗೆ ಮಾ. 20ರಂದು ಸಲ್ಲಿಸಿದ ವರದಿಯಲ್ಲಿ ಈ ಕುರಿತು ಬೆಳಕು ಚೆಲ್ಲಿದೆ. ಜಲಶಕ್ತಿ ಸಚಿವಾಲಯವು ಶೀಘ್ರವೇ ಅಣೆಕಟ್ಟುಗಳ ಬಾಳಿಕೆ ಅವಧಿ ಮತ್ತು ಕಾರ್ಯಾಚರಣೆಯನ್ನು ಪರಿಶೀಲನೆ ನಡೆಸಬೇಕು ಮತ್ತು ಬಾಳಿಕೆ ಅವಧಿ ಮುಗಿದಿರುವ ಅಣೆಕಟ್ಟುಗಳನ್ನು ಕಾರ್ಯಾಚರಣೆಯಿಂದ ತೆಗೆದು ಹಾಕಬೇಕು ಎಂದು ಶಿಫಾರಸು ಮಾಡಿದೆ.
ದೇಶದಲ್ಲಿ ಈವರೆಗೆ ಸುಮಾರು 36ರಷ್ಟು ಅಣೆಕಟ್ಟು ದುರಂತಗಳು ನಡೆದಿವೆ. ಈ ಪೈಕಿ ಗುಜರಾತ್‌ನ ಮೊರ್ಬಿಯಲ್ಲಿ ನಡೆದ ಮಚ್ಚು ಅಣೆಕಟ್ಟು ಅವಘಡವು ಅತ್ಯಂತ ಭೀಕರ ದುರಂತಗಳ ಸಾಲಿಗೆ ಸೇರಿದೆ. 1979ರಲ್ಲಿ ನಡೆದ ಈ ದುರಂತದಲ್ಲಿ 2 ಸಾವಿರ ಮಂದಿ ಸಾವಿಗೀಡಾಗಿ, ಸುಮಾರು 12 ಸಾವಿರ ಮನೆಗಳು ನಾಶವಾಗಿದ್ದವು.
ಯಾವ ರಾಜ್ಯದಲ್ಲಿ ಎಷ್ಟಿವೆ?
ಮಧ್ಯಪ್ರದೇಶ 63
ಮಹಾರಾಷ್ಟ್ರ 44
ಗುಜರಾತ್ 30
ರಾಜಸ್ಥಾನ 25
ತೆಲಂಗಾಣ 21
ಉತ್ತರಪ್ರದೇಶ 17
ಕರ್ನಾಟಕ 15
ಛತ್ತೀಸ್‌ಗಡ 7
ಆಂಧ್ರಪ್ರದೇಶ 6
ಒಡಿಶಾ 3
ಬಿಹಾರ, ಕೇರಳ, ತ.ನಾಡು ತಲಾ 1