Advertisement

ಬಾಲ ಬಿಚ್ಚಿದರೆ ಕಠಿಣ ಕ್ರಮ:ಎಸ್ಪಿ 

04:24 PM Apr 05, 2018 | Team Udayavani |

ಕಲಬುರಗಿ: ಮೇ 12ರಂದು ನಡೆಯುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ರೌಡಿಗಳು ಯಾವುದೇ ನಿಟ್ಟಿನಲ್ಲಿ ಬಾಲ ಬಿಚ್ಚಿದರೆ ಹಾಗೂ ತೆರೆಮರೆಯಲ್ಲಿ ಕೈ ಚಳಕ ತೋರಿದಲ್ಲಿ ಪರಿಸ್ಥಿತಿ ನೆಟ್ಟಗಿರಲ್ಲ. ಇಲಾಖೆ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ. ಈಗ ಮಾತಿನಲ್ಲಿ ಹೇಳಲಾಗುತ್ತಿದೆ. ಕಠಿಣ ಕ್ರಮಕ್ಕೆ ಅವಕಾಶ ಮಾಡಿಕೊಡದಿರಿ.

Advertisement

ಇದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಡಿಎಆರ್‌ ಪೊಲೀಸ್‌ ಮೈದಾನದಲ್ಲಿ ನಡೆಸಲಾದ ರೌಡಿ ಪೇರೆಡ್‌ನ‌ಲ್ಲಿ ಪಾಲ್ಗೊಂಡ ರೌಡಿಗಳಿಗೆ ನೀಡಿದ ಖಡಕ್‌ ಎಚ್ಚರಿಕೆ.

ಮೇ 12ರಂದು ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷಗಳ ಹಾಗೂ ಯಾವುದೇ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿ ಇಂತಹವರಿಗೆ ಮತ ಹಾಕಿ ಎಂದು ಜನರಿಗೆ ಬೆದರಿಸುವುದು ಕಂಡು ಬಂದ್ರೆ, ಜತೆಗೆ ವಿನಾಕಾರಣ ಶಾಂತಿ ಭಂಗ ತರಲು ಮುಂದಾದರೆ ನಿಮ್ಮನ್ನ ಸುಮ್ನೆ ಬಿಡಲ್ಲ ಹುಷಾರ್‌, ತೆಪ್ಪಗೆ ಮನೆಯಲ್ಲಿರಿ ಎಂದು ರೌಡಿಗಳಿಗೆ ತಾಕೀತು ಮಾಡಿದರು.

ಕೆಲವು ಪುಂಡರಿಗೆ ಲಾಠಿ ರುಚಿ ಸಹ ತೋರಿಸಿದರು. ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಂದಾಜು 3800 ರೌಡಿಗಳಿದ್ದು, ಅವರಲ್ಲಿ ಬುಧವಾರ ನಗರದಲ್ಲಿ ನಡೆದ ಪರೇಡ್‌ ನಲ್ಲಿ 600ಕ್ಕೂ ಹೆಚ್ಚು ರೌಡಿಗಳು ಪಾಲ್ಗೊಂಡಿದ್ದರು. ಅದೇ ರೀತಿ ತಾಲೂಕಾ ಕೇಂದ್ರಗಳಲ್ಲೂ ಪರೇಡ್‌ ನಡೆಸಿ ಖಡಕ್‌ ಎಚ್ಚರಿಕೆ ನೀಡಲಾಗಿದೆ.

ಹಲವು ರೌಡಿಗಳಿಗೆ ಲಾಠಿ ರುಚಿ ತೋರಿಸಿದರು. ಉದ್ದುದ್ದ ಕೂದಲು ಬಿಟ್ಟು, ಕಡಗ, ರಿಂಗ್‌ ಇತ್ಯಾದಿ ಹಾಕಿಕೊಂಡು ವಿಕಾರವಾಗಿ ಕಾಣುತ್ತಿದ್ದವರನ್ನು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡರು. ಶಿಸ್ತಿನಿಂದ ಇರುವಂತೆ ತಾಕೀತು ಮಾಡಿದರು.

Advertisement

ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಸುವುದಿಲ್ಲ ಎಲ್ಲರನ್ನು ತಹಶೀಲ್ದಾರ್‌ರ ಎದುರು ಹಾಜರುಪಡಿಸಿ ಮುಚ್ಚಳಿಕೆ ಬರೆಸಿಕೊಳ್ಳಲಾಯಿತು. ಒಂದು ವೇಳೆ ದೃಷ್ಕೃತ್ಯಗಳನ್ನು ಮುಂದುವರಿಸಿದ್ರೆ ಗಡಿಪಾರು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನು ರೌಡಿಗಳಿಗೆ ನೀಡಲಾಗಿದೆ ಎಂದು ಎಸ್ಪಿ ಶಶಿಕುಮಾರ ಇದೇ ವೇಳೆ ಸುದ್ದಿಗಾರರಿಗೆ ತಿಳಿಸಿದರು.

ಈ ಹಿಂದೆ 16 ಜನರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳುವ ಜೊತೆಗೆ, 23 ರೌಡಿಗಳನ್ನು ಗಡಿಪಾರಿಗೆ ಶಿಫಾರಸು ಮಾಡಲಾಗಿತ್ತು. ಅಗತ್ಯ ಬಿದ್ದಲ್ಲಿ ಮತ್ತಷ್ಟು ಜನರ ಗಡಿಪಾರಿಗೆ ಶಿಫಾರಸು ಮಾಡುವುದಾಗಿ ಹೇಳಿದರು. ಹೆಚ್ಚುವರಿ ಎಸ್ಪಿ ಜಯಪ್ರಕಾಶ, ಎಎಸ್ಪಿ ಲೋಕೇಶ ಬಿ.ಜೆ. ಎಸ್ಪಿ ಅವರಿಗೆ ಸಾಥ್‌ ನೀಡಿದರು. ಪರೇಡ್‌ನ‌ಲ್ಲಿ ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಮಿಥುನಕುಮಾರ ಜಿ.ಕೆ., ಡಿಎಸ್ಪಿಗಳಾದ ಪವನ್‌ ನಂದಿ, ಪಾಂಡುರಂಗಯ್ಯ, ಇನ್ಸ್‌ಪೆಕ್ಟರ್‌ಗಳಾದ ಶಕೀಲ ಅಂಗಡಿ, ಎಸ್‌.ಎಂ. ಯಾಳಗಿ, ಸಂಗಮೇಶ ಹಿರೇಮಠ, ರಮೇಶ ಮೇಟಿ, ಶಾಂತಿನಾಥ ಮೊದಲಾದವರು ಪಾಲ್ಗೊಂಡಿದ್ದರು.

ಕೂದಲು ಕಟ್‌ ಮಾಡಿ, ಗಡ್ಡ ಬೋಳಿಸಿದ್ರು
ಬುಧವಾರ ನಡೆದ ರೌಡಿಗಳ ಪರೇಡ್‌ನ‌ಲ್ಲಿ ಉದ್ದುದ್ದ ಕೂದಲು ಬಿಟ್ಟು, ಜತೆಗೆ ಕೈಗೆ ಕಬ್ಬಿಣದ ಇನ್ನಿತರ ಕಡಗ, ಕಿವಿಗೆ ಓಲೆ ಹಾಕಿಕೊಂಡು ಹಾಗೂ ಅಡ್ಡಾದಿಡ್ಡಿಯಾಗಿ ಮೀಸೆ, ಗಡ್ಡ ಬಿಟ್ಟು ಜನರಿಗೆ ಭಯ ಹುಟ್ಟಿಸುವಂತೆ ಕಾಣಿಸುತ್ತಿದ್ದ ರೌಡಿಗಳಿಗೆ ಎಸ್ಪಿ ಶಶಿಕುಮಾರ ಹಾಗೂ ಇತರ ಪೊಲೀಸ್‌ ಅಧಿಕಾರಿಗಳು ಲಾಠಿ ರುಚಿ ತೋರಿಸಿದರು. ಕಳೆದ ಸಲವೇ ಶಿಸ್ತಿನಿಂದ ಇರುವಂತೆ ಸೂಚಿಸಲಾಗಿತ್ತು. ಆದರೆ ನಾಯಿ ಬಾಲ ಡೊಂಕು ಎನ್ನುವ ಹಾಗೆ ಹೀಗೆ ಬಂದಿದ್ದಿರಲ್ಲ ಎಂದು ತರಾಟೆಗೆ ತೆಗೆದುಕೊಂಡರಲ್ಲದೇ ಸಲೂನ್‌ದವರನ್ನು ಮೈದಾನಕ್ಕೆ ಕರೆಯಿಸಿ ಹಲವು ರೌಡಿಗಳ ಕೂದಲು ಕಟ್‌ ಮಾಡಿಸಿ, ಗಡ್ಡ ಬೋಳಿಸಲಾಯಿತು. ಜತೆಗೆ ಬಾಲ ಮುದುರಿಕೊಂಡಿರುವಂತೆ ಎಚ್ಚರಿಕೆ ನೀಡಲಾಯಿತು. ಇನ್ಮೂಂದೆಯೂ ಸರಿಯಾಗಿ, ಶಿಸ್ತಿನಿಂದ ನೀಟಾಗಿಯೇ ಇರಬೇಕು ಎಂದು ಖಡಕ್‌ ಎಚ್ಚರಿಕೆ ನೀಡಲಾಯಿತು. ಪೊಲೀಸರ ಈ ದಿಟ್ಟ ಎಚ್ಚರಿಕೆಯಿಂದ ರೌಡಿಗಳು ವಿಚಲಿತಗೊಂಡಂತೆ ಕಂಡರು. ಒಟ್ಟಾರೆ ಜನರಲ್ಲಿ ತಳಮಳ ಮೂಡಿಸಿದ ರೌಡಿಗಳ ಕೃತ್ಯ ಸಂಪೂರ್ಣ ಕಿತ್ತು ಹಾಕುವ ಕಲಬುರಗಿ ಪೊಲೀಸರ ಈ ಕಾರ್ಯವು ಜನರ ಮೆಚ್ಚುಗೆಗೆ ಕಾರಣವಾಗಿರುವಲ್ಲಿ ಯಾವುದೇ ಸಂಶಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next