ಗದಗ: ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ವಿಧಾನಸಭೆಯಲ್ಲಿ ಸಚಿವರ, ಶಾಸಕರ ಧ್ವನಿ ಅಡಗಿದ ಕಾರಣ ನ್ಯಾಯಾಂಗದ ಮೂಲಕ ಹೋರಾಟ ಆರಂಭಿಸಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಎಲ್ಲ ಸಚಿವರು, ಶಾಸಕರು ಮಾತನಾಡುತ್ತಿದ್ದರು. ಸಿಎಂ ಸಿದ್ದರಾಮಯ್ಯ ಅವರ ಎದುರು ಸಮಾಜದ ಸಚಿವರು, ಶಾಸಕರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮುದಾಯದ ಮಕ್ಕಳಿಗೆ ನ್ಯಾಯ ಸಿಗಬೇಕು, ಶೈಕ್ಷಣಿಕವಾಗಿ, ಸರಕಾರಿ ಉದ್ಯೋಗಕ್ಕಾಗಿ, ಸಂವಿಧಾನಬದ್ಧ ಹಕ್ಕುಗಳಿಗಾಗಿ ಪಂಚಮಸಾಲಿ ಸಮಾಜದ ವಕೀಲರು ಹೋರಾಟ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಅ. 15ರಂದು ಪಂಚಮಸಾಲಿ ಸಮಾಜದ ಪ್ರಮುಖ ವಕೀಲರ ಸಭೆ ಕರೆದಿದ್ದಾರೆ. ಆದರೆ, ಸಭೆಯ ಸಮಯ ಹಾಗೂ ಸ್ಥಳ ಸಭೆ ನಿಗದಿಯಾಗಿಲ್ಲ, ಕೂಡಲೇ ಸಮಯ ಹಾಗೂ ಸ್ಥಳ ನಿಗದಿಗೊಳಿಸಬೇಕು. ಮುಖ್ಯಮಂತ್ರಿಗಳ ಬಳಿ ತೆರಳುವ ನಿಯೋಗದಲ್ಲಿ ಯಾವ ಯಾವ ವಿಷಯಗಳನ್ನು ಚರ್ಚಿಸಬೇಕು ಎಂದು ಈಗಾಗಲೇ ತೀರ್ಮಾನ ಮಾಡಲಾಗಿದೆ. 10 ಜನ ವಕೀಲರೊಂದಿಗೆ ಸಮುದಾಯದ ಪ್ರಮುಖರು, ಪಂಚಮಸಾಲಿ ಹೋರಾಟಗಾರರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಭೆಯಲ್ಲಿ ಮೀಸಲಾತಿ ಹಾಗೂ ಅದರಿಂದ ಸಮಾಜಕ್ಕೆ ಉಂಟಾಗುವ ಅನುಕೂಲಗಳ ಕುರಿತು ಚರ್ಚಿಸುವುದರ ಜೊತೆಗೆ ಮನವೊಲಿಸಲಾಗುವುದು, ಒಂದು ವೇಳೆ ಬೇರೆ ಬೇರೆ ಕಾರಣ, ನೆಪವೊಡ್ಡಿ ಸಭೆಯನ್ನು ಮೊಟಕುಗೊಳಿಸಿದ್ದಲ್ಲಿ ವಕೀಲರೊಂದಿಗೆ, ಸಮುದಾಯದ ಮುಖಂಡರು, ಹೋರಾಟಗಾರರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು.
ಸಿಎಂ ಸಿದ್ದರಾಮಯ್ಯ ಅವರು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುತ್ತಾರೆ ಎಂಬ ವಿಶ್ವಾಸವಿದೆ. ಇಲ್ಲವಾದಲ್ಲಿ 10 ಸಾವಿರಕ್ಕೂ ಹೆಚ್ಚು ಸಮಾಜದ ಮುಖಂಡರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು, ಜಾತಿ ಜನಗಣತಿ ಮಾಡುವ ಬಗ್ಗೆ ಎಲ್ಲೆಡೆ ಅಸಮಾಧಾನವಿದ್ದು, ವೈಜ್ಞಾನಿಕವಾಗಿ, ಸತ್ಯವನ್ನು ಆಧರಿಸಿ ಜಾತಿ ಜನಗಣತಿಯಾದರೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಇದನ್ನೂ ಓದಿ: ನನ್ನಂತ ದಲಿತರಿಗೆ ಒಳ್ಳೆಯದಾಗದಿದ್ದರೆ ಮುಂದೆ ಯಾವ ದಲಿತರಿಗೂ ಒಳ್ಳೆದಾಗಲ್ಲ: ಜಿಗಜಿಣಗಿ ಭಾವುಕ