Advertisement
ಐದು ಆಲದ ಮರಗಳು ಒಟ್ಟಿಗೆ ಇರುವ ಸುಂದರ ತಾಣವೇ ಪಂಚವಟಿ. ಗೋದಾವರಿ ತಟದ ಈ ತಂಪು ನೆಲದಲ್ಲಿ ಸುಮ್ಮನೆ ಕೆಲಹೊತ್ತು ಕಳೆದರೆ, ತನುಮನಗಳಿಗೆ ಅಪಾರ ಆನಂದ ದಕ್ಕುತ್ತದೆ. ಇಲ್ಲಿನ ಪರಿಸರ ಅಷ್ಟೊಂದು ಪ್ರಶಾಂತ ಮತ್ತು ರಮ್ಯವೂ ಆಗಿದೆ. ರಾಮಾಯಣ ಕಾಲದಲ್ಲೂ ಪಂಚವಟಿ ಹೀಗೆಯೇ ಇತ್ತೇ? ದಂಡಕಾರಣ್ಯದ ಒಂದು ಭಾಗದಲ್ಲಿದ್ದ ಪಂಚವಟಿ, ಅತಿಸುಂದರವೇ ಇತ್ತೆಂಬುದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾದ ರೂಪಕಗಳಿಂದ ತಿಳಿಯುತ್ತದೆ.
Related Articles
Advertisement
ಸೀತಾ ಗುಹೆ: ಸೀತಾ ಮಾತೆ ಶಿವನ ಭಕ್ತೆಯೂ ಆಗಿದ್ದಳು. ಪಂಚವಟಿಯಲ್ಲಿ ಇದ್ದಷ್ಟು ದಿನ, ಈಕೆ ಈ ಗುಹೆಯಲ್ಲಿ ಶಿವನನ್ನು ಆರಾಧಿಸುತ್ತಿದ್ದಳು ಎನ್ನುವ ನಂಬಿಕೆಯಿದೆ. ಇಲ್ಲಿ 5 ಬೃಹತ್ ಆಲದ ಮರಗಳಿದ್ದು, ಅದರ ನೆರಳಿನಲ್ಲಿ ಕೆಲ ಹೊತ್ತು ಕಳೆಯಬಹುದು. ರಾವಣನು ಸೀತೆಯನ್ನು ಅಪಹರಿಸಿದ ತಾಣವೂ ಇದೇ ಎಂದು ಹೇಳಲಾಗುತ್ತದೆ.
ಕಪಾಲೇಶ್ವರ: ಇಲ್ಲೊಂದು ರಾಮಕುಂಡವಿದ್ದು, ಮರ್ಯಾದಾ ಪುರುಷೋತ್ತಮನು ಈ ಕುಂಡದಲ್ಲಿಯೇ ಸ್ನಾನ ಮಾಡುತ್ತಿದ್ದ ಎಂದು ಜನ ನಂಬುತ್ತಾರೆ. ಇಲ್ಲಿಗೆ ಆಗಮಿಸುವ ಅನೇಕ ಭಕ್ತರು ರಾಮಕುಂಡದಲ್ಲಿ ಮುಳುಕು ಹೊಡೆದು, ರಾಮನಾಮ ಸ್ಮರಣೆ ಮಾಡುತ್ತಾರೆ. ಈ ಕುಂಡದಿಂದ 43 ಮೆಟ್ಟಿಲುಗಳು ಮೇಲೇರಿದರೆ ಸಿಗುವುದು ಕಪಾಲೇಶ್ವರನ ಸನ್ನಿಧಾನ. ಇದು ಭಾರತದ ಅತ್ಯಂತ ವಿಶಿಷ್ಟ ಶಿವಮಂದಿರಗಳಲ್ಲಿ ಒಂದು.
ಇಲ್ಲಿ ನಂದಿಯು ಶಿವನ ಗರ್ಭಗುಡಿಯ ಮುಂದೆ ಇರದೇ, ಹಿಂಭಾಗದಲ್ಲಿದೆ ಹಾಗೂ ಶಿವನ ಮೂರ್ತಿಗಿಂತ ಎತ್ತರವಿದೆ. ಇದರ ಸಮೀಪದಲ್ಲೇ, ಗೋದಾವರಿ ದೇವಿಯ ದೇವಸ್ಥಾನವನ್ನೂ ಕಾಣಬಹುದು. 12 ವರ್ಷಗಳಿಗೊಮ್ಮೆ, ಕುಂಭಮೇಳದ ಸಮಯದಲ್ಲಷ್ಟೇ ಈ ದೇಗುಲದ ಬಾಗಿಲುಗಳನ್ನು ತೆರೆಯುತ್ತಾರೆ. ಪಂಚವಟಿಯಲ್ಲಿ ವರ್ಣಚಿತ್ರಗಳು ರಾಮಾಯಣ ಕಾಲದ ದೃಶ್ಯಗಳನ್ನು ಕಣ್ಣೆದುರು ನಿಲ್ಲಿಸುವಷ್ಟು ಕಲಾತ್ಮಕವೂ, ಕಣ್ಮನಗಳಿಗೆ ಆನಂದವನ್ನೂ ನೀಡುವಂತಿದೆ.
ದಂಡಕಾರಣ್ಯವಾಗಿದ್ದ ಕಾರಣ, ಆ ಕಾಲದಲ್ಲಿ ದಟ್ಟ ಕಾಡಿತ್ತು. ಅಂದು ಇಲ್ಲಿ ಮಧ್ಯಾಹ್ನ ಘಟಿಸಿದ್ದ ಸೂರ್ಯಗ್ರಹಣದಿಂದಾಗಿ, ಪಂಚವಟಿಯನ್ನು ಸಂಪೂರ್ಣ ಕತ್ತಲು ಆವರಿಸಿತ್ತು. ಪಕ್ಷಿಗಳೆಲ್ಲ ಗೂಡು ಸೇರಿದ್ದವು. ಆಕಾಶದಲ್ಲಿ ಗ್ರಹಗಳು ಕಾಣಿಸುತ್ತಿದ್ದವು ಎಂದು ವಾಲ್ಮೀಕಿ ಮಹರ್ಷಿ ವರ್ಣಿಸುತ್ತಾರೆ. ಆದರೆ, ಇಂದು ಪಂಚವಟಿಯಲ್ಲಿ ಆ ಪ್ರಮಾಣದ ಅರಣ್ಯವೇನೂ ಇಲ್ಲ. ನಾಸಿಕ್, ಜಿಲ್ಲಾಕೇಂದ್ರವೂ ಆಗಿರುವುದರಿಂದ, ಪಂಚವಟಿ ಪ್ರಗತಿಯತ್ತಲೂ ಮುಖಮಾಡಿದೆ.
ಇದುವೇ ಮಾರ್ಗ…: ಪಂಚವಟಿಯ ಸಮೀಪವೇ ಇರುವ ನಾಸಿಕ್‌ನಲ್ಲಿ ವಿಮಾನ ನಿಲ್ದಾಣವೂ ಇದೆ. ಅಲ್ಲಿಂದ ಪಂಚವಟಿಗೆ ಕೇವಲ 20 ಕಿ.ಮೀ. ಅಂತರ. ನಾಸಿಕ್‌ನಲ್ಲಿ ರೈಲ್ವೆ ನಿಲ್ದಾಣವೂ ಇದ್ದು, ಅಲ್ಲಿಂದ ಕೇವಲ 10 ಕಿ.ಮೀ. ಆಗುತ್ತದೆ. ಬೇಕಾದಷ್ಟು ಬಸ್ ವ್ಯವಸ್ಥೆಯೂ ಇದೆ.
* ಡಾ. ಸುಹಾಸ್ ರೈ