ಬೆಂಗಳೂರಿನ ಯಕ್ಷ ದೇಗುಲ ( ರಿ. ) ಇವರು ಕೋಟದ ಹಂದಟ್ಟಿನ ಹಂದೆ ಶ್ರೀ ಮಹಾವಿಷ್ಣು, ಶ್ರೀ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಾಲಯದ ಆವರಣದಲ್ಲಿ ಪಾಂಚಜನ್ಯ ಎನ್ನುವ ಆಖ್ಯಾನವನ್ನು ಆಡಿ ತೋರಿಸಿದರು. ಸಾಂದೀಪನಿ ಋಷಿಯ ಗುರುಕುಲದಲ್ಲಿ ಕಲಿಯುತ್ತಿದ್ದ ಶ್ರೀ ಕೃಷ್ಣ ಮತ್ತು ಆತನ ಸಹಪಾಠಿ ಉದ್ಧವ ವಿಹಾರಕ್ಕಾಗಿ ಕಡಲ ತಡಿಯಲ್ಲಿ ತಿರುಗುತ್ತಿರುವಾಗ ಸಮುದ್ರದ ಮಧ್ಯದಲ್ಲಿ ಮನೆಯಾಕಾರವೊಂದು ತೇಲುತ್ತಿದ್ದು, ಅದರಲ್ಲಿ ಅಸ್ಪಷ್ಟ ಮನುಷ್ಯಾಕೃತಿಗಳನ್ನು ಕಂಡು ಚಕಿತರಾಗುತ್ತಾರೆ. ಅದರ ಬಗ್ಗೆ ಕುತೂಹಲಿಗಳಾದ ಈರ್ವರೂ ಅದೇನೆಂಬುದನ್ನು ತಿಳಿಯಲು ಸಾಂದೀಪನಿ ಗುರುಗಳ ಬಳಿ ಬರುತ್ತಾರೆ. ಆದರೆ ಚಿಂತಾಕ್ರಾಂತರಾಗಿದ್ದ ಗುರುಗಳನ್ನು ಕಂಡು ಕಾರಣ ಕೇಳಿದಾಗ ಗುರುಗಳು ವರುಷದ ಹಿಂದೆ ತನ್ನ ಮಗ ಪುನರ್ದತ್ತನನ್ನು ಅಪಹರಿಸಿದ ಕಡಲುಗಳ್ಳರ ಮನೆಯದು ಎನ್ನುತ್ತಾರೆ. ಶ್ರೀ ಕೃಷ್ಣನು ಪುನರ್ದತ್ತನನ್ನು ಹಿಂದಕ್ಕೆ ಕರೆತರುವುದೇ ತಾನು ಗುರುಗಳಿಗೆ ನೀಡುವ ಗುರುದಕ್ಷಿಣೆ ಎಂದು ಯೋಚಿಸಿ ಗೆಳೆಯನೊಂದಿಗೆ ಅಲ್ಲಿಗೆ ತೆರಳುತ್ತಾನೆ. ಅಲ್ಲಿ ಕಡಲುಗಳ್ಳರ ನಾಯಕ ಪಂಚಜನನನ್ನು ಸಂಹರಿಸಲು ಮುಂದಾದಾಗ, ಆತ ಪುನರ್ದತ್ತನನ್ನು ಪಾತಾಳದೊಡತಿ ಮೃತ್ಯುಮಾಲಿನಿಗೆ ದ್ರವ್ಯಕ್ಕಾಗಿ ನೀಡಿರುವುದಾಗಿ ತಿಳಿಸುತ್ತಾನೆ. ಶರಣಾದ ಪಂಚಜನನು ಶ್ರೀ ಕೃಷ್ಣನಲ್ಲಿ, ಸದಾ ನಿನ್ನ ಬಳಿಯೇ ಇರುವಂತೆ ಮೋಕ್ಷ ಕರುಣಿಸು ಎಂದಾಗ, ಆತನ ಅಸ್ಥಿಯಿಂದ ಶ್ವೇತವರ್ಣದ ಶಂಖವನ್ನು ರಚಿಸಿ (ಪಾಂಚಜನ್ಯ) ತನ್ನಲ್ಲಿ ಇರಿಸಿಕೊಳ್ಳುತ್ತಾನೆ. ಮುಂದೆ ಮೃತ್ಯು ಮಾಲಿನಿಯ ಬಳಿಗೆ ತೆರಳಿದಾಗ, ಆಕೆಯು ಕೃಷ್ಣನಿಗೆ ಮರುದಿನ ಅರಮನೆಗೆ ಬರುವಂತೆ ತಿಳಿಸಿ ಆತನಿಗೆ ತಂಗಲು ವ್ಯವಸ್ಥೆ ಮಾಡುತ್ತಾಳೆ.
ವಿಶ್ರಾಂತಿ ಗೃಹದಲ್ಲಿದ್ದ ಕೃಷ್ಣನನ್ನು ಕಂಡ ಮೃತ್ಯು ಮಾಲಿನಿಯ ಮಗಳಾದ ಅಸಿಕೆಯು ಕೃಷ್ಣನ ಚೆಲುವಿಗೆ ಮನಸೋತು ವಿವಾಹವಾಗಲು ಒತ್ತಾಯಿಸಿದಾಗ ನಿರಾಕರಿಸುತ್ತಾನೆ. ಮರುದಿನ ಮೃತ್ಯುಮಾಲಿನಿಯು ಗುರುಪುತ್ರನನ್ನು ನೀಡಲು ಒಪ್ಪದಾಗ ಯುದ್ಧಕ್ಕೆ ಮುಂದಾಗುತ್ತಾನೆ. ಅಸಿಕೆಯು ಮಧ್ಯ ಪ್ರವೇಶಿಸಿ ತಾಯಿಗೆ ಆತನ ವಿಚಾರವನ್ನು ತಿಳಿಸುತ್ತಾಳೆ. ಕ್ಷಮೆ ಕೋರಿದ ಮೃತ್ಯುಮಾಲಿನಿಯು ಗುರುಪುತ್ರನೊಂದಿಗೆ ತನ್ನ ಮಗಳನ್ನು ನೀಡುತ್ತಾಳೆ ಎಂಬಲ್ಲಿಗೆ ಈ ಸುಂದರ ಆಖ್ಯಾನ ಕೊನೆಗೊಳ್ಳುತ್ತದೆ. ಕೃಷ್ಣನಾಗಿ ಸುಜಯೀಂದ್ರ ಹಂದೆಯವರ ಮಾತು ಹಾಗೂ ಅಭಿನಯ ಪ್ರೇಕ್ಷರನ್ನು ಸೆಳೆದರೆ, ಉದ್ಧವನ ಮೊದ್ದುತನವನ್ನು ಹಾಸ್ಯರಸದೊಂದಿಗೆ ಅಭಿವ್ಯಕ್ತಿಗೊಳಿಸಿದವರು ಪ್ರಶಾಂತ್ ಹೆಗಡೆ. ಪಂಚಜನನಾಗಿ ತಮ್ಮಣ್ಣ ಗಾಂವ್ಕರ್ ಪಾತ್ರ ಸಹಜ ಗುಣವನ್ನು ಮೆರೆದರೆ, ಕಡ್ಲೆ ಗಣಪತಿಯವರ ಮೃತ್ಯುಮಾಲಿನಿ¿å ರೋಷಾವೇಷದ ಅಭಿನಯ ಮತ್ತು ಕೃಷ್ಣನ ಚೆಲುವಿಗೆ ಮನಸೋತ ಅಸಿಕೆಯಾಗಿ ಕುಂಕಿಪಾಲ್ ನಾಗರಾಜ ಭಟ್ ಅವರ ಶೃಂಗಾರ ರಸಾಭಿನಯ ಮನ ಸೆಳೆಯಿತು. ಸಾಂದೀಪನಿ ಮುನಿಯ ಪಾತ್ರವನ್ನು ಗಣೇಶ್ ಉಪ್ಪುಂದ ನಿರ್ವಹಿಸಿದರು. ಭಾಗವತರಾಗಿ ಲಂಬೋಧರ ಹೆಗಡೆ ಮತ್ತು ದೇವರಾಜ್ ದಾಸ್ ಮರವಂತೆ, ಮದ್ದಳೆಯಲ್ಲಿ ಯಲ್ಲಾಪುರ ಗಣಪತಿ ಭಟ್, ಚಂಡೆಯಲ್ಲಿ ಮಾಧವ ಮಣೂರು ಮತ್ತು ಸುದೀಪ್ ಉರಾಳ ಹಿಮ್ಮೇಳದ ಸೊಗಸನ್ನು ಹೆಚ್ಚಿಸಿದರು. ಪ್ರಸಾದನದಲ್ಲಿ ನರಸಿಂಹ ತುಂಗ ಮತ್ತು ರಾಜು ಪೂಜಾರಿ ಕೋಟ ಅವರ ಸಹಕಾರವಿತ್ತು. ಸಂಯೋಜನೆ ಸುದರ್ಶನ ಉರಾಳ, ನಿರ್ದೇಶನ ಕೆ. ಮೋಹನ್ ಅವರದ್ದಾಗಿತ್ತು.
ಕೆ. ದಿನಮಣಿ ಶಾಸ್ತ್ರಿ