ರಾಯಚೂರು: ಕೇಂದ್ರ ಸರ್ಕಾರದ ಕಾರ್ಮಿಕ, ಜನ ವಿರೋಧಿ ಧೋರಣೆ ಖಂಡಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖೀಲ ಭಾರತ ಸಾರ್ವತ್ರಿಕ ಮುಷ್ಕರದ ಎರಡನೇ ದಿನವಾದ ಮಂಗಳವಾರ ಕಾರ್ಮಿಕ ಸಂಘಗಳ ಜಂಟಿ ಸಮಿತಿ ನೇತೃತ್ವದಲ್ಲಿ ಸಂಘಟನೆಗಳ ಮುಖಂಡರು, ಕಾರ್ಮಿಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಉದ್ಯಾನವನದಲ್ಲಿ ಮತ್ತೆ ಧರಣಿ ನಡೆಸಿದರು.
ಬಳಿಕ ಜಿಲ್ಲಾಡಳಿತ ಮೂಲಕ ಪ್ರಧಾನಿಗೆ ಮನವಿ ಪತ್ರ ಸಲ್ಲಿಸಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿ ಕಾರಕ್ಕೆ ಬಂದಾಗಿನಿಂದ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಅಗತ್ಯ ವಸ್ತುಗಳ ಬೆಲೆ ದಿನೇ ದಿನೆ ಹೆಚ್ಚುತ್ತಿದ್ದು, ಇದರಿಂದ ಬಡವರ್ಗ ಜನ ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಈ ಬೆಲೆ ಏರಿಕೆಗೆ ಸರ್ಕಾರದ ನೀತಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ, ವಿದ್ಯುತ್ ದರ ನಿಯಂತ್ರಿಸಬೇಕು. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕೇಂದ್ರೀಯ ಅಬಕಾರಿ ತೆರಿಗೆ ಕಡಿತಗೊಳಿಸಬೇಕು. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ಜೊತೆ ವಿದ್ಯುತ್ ಮಸೂದೆ ಹಿಂಪಡೆಯಬೇಕು. ಶಾಸನಬದ್ಧ ಬೆಂಬಲ ಬೆಲೆ ಕಾಯ್ದೆ ರೂಪಿಸಬೇಕು. ರಾಜ್ಯ ಸರ್ಕಾರ ಸಹ ರೈತ-ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು, ಕಟ್ಟಡ, ಹಮಾಲಿ, ಮನೆಗೆಲಸ ಮುಂತಾದ ಅಸಂಘಟಿತ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ, ಭದ್ರತೆ ಒದಗಿಸಬೇಕು. ಕೋವಿಡ್ ಲಾಕ್‌ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ವಿಮೆ ಸೌಲಭ್ಯ ಒದಗಿಸಬೇಕು ಹಾಗೂ ಅಂಗನವಾಡಿ-ಆಶಾ, ಬಿಸಿಯೂಟ ಮತ್ತು ಇತರೆ ಸ್ಕೀಮ್ ನೌಕರರಿಗೆ ಶಾಸನಬದ್ಧ, ಕನಿಷ್ಟ ವೇತನ, ಸಾಮಾಜಿಕ ಭದ್ರತೆ ಜಾರಿ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಜಂಟಿ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಡಿ.ಎಸ್. ಶರಣಬಸವ, ಎನ್.ಎಸ್. ವೀರೇಶ, ಎಂ. ರವಿ, ತಿಮ್ಮಪ್ಪ ಸ್ವಾಮಿ, ಬಾಷುಮಿಯಾ, ಸಲಾವುದ್ದೀನ್, ಎಂ. ಶರಣಗೌಡ, ವರಲಕ್ಷ್ಮೀಕುಮಾರ, ಅಬ್ದುಲ್ ಗನಿ, ವಿ.ಎಂ. ಉಕ್ಕಲಿ, ಮಹೇಶ ಚೀಕಲಪರ್ವಿ, ಕೆ. ನಾರಾಯಣ, ಬಾಬು, ಸೂರ್ಯಕಾಂತರಾವ್ ಟಿಕಾರಿ, ಆನಂದ, ಎಚ್. ಪದ್ಮಾ, ಪವನ್‌ಕುಮಾರ್, ಕೆ.ಜಿ. ವೀರೇಶ, ಚನ್ನಬಸವ ಜಾನೇಕಲ್, ಡಿ.ಎಚ್. ಕಂಬಳಿ, ನಾಗಮ್ಮ, ಕಲ್ಯಾಣಮ್ಮ, ಅಕ್ಕ ಮಹಾದೇವಿ, ಗುರುರಾಜ ದೇಸಾಯಿ, ಮರಿಯಮ್ಮ, ಗಿರಿಯಪ್ಪ ಪೂಜಾರಿ, ಶರ್ಪುದ್ದೀನ್ ಪೋತ್ನಾಳ್, ಮಹ್ಮದ್ ಅನಿಫ್, ರಮೇಶ್ ಮೀರಾಪೂರು, ಪೀರ್‌ಸಾಬ್, ಶರಣಪ್ಪ ಉದ್ಭಾಳ್, ರಂಗಮ್ಮ ಅನ್ವಾರ್, ರಾಮಣ್ಣ ತುರ್ವಿಹಾಳ್ ಸೇರಿದಂತೆ ವಿವಿಧ ಕೈಗಾರಿಕೆಗಳ ಕಾರ್ಮಿಕರು ಪಾಲ್ಗೊಂಡಿದ್ದರು.