Advertisement

ಹಿಂಸೆಗೆ ತಿರುಗಿದ ಹೆತ್ತವರ ಆಕ್ರೋಶ

06:10 AM Sep 11, 2017 | Team Udayavani |

ಗುರುಗ್ರಾಮ/ಹೊಸದಿಲ್ಲಿ: ಹರಿಯಾಣದಲ್ಲಿ 2ನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನನನ್ನು ಕತ್ತು ಸೀಳಿ ಹತ್ಯೆಗೈದ ಪ್ರಕರಣ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ರವಿವಾರ ಹಿಂಸೆಗೆ ತಿರುಗಿತು. ಪ್ರತಿಭಟನಕಾರರು ಶಾಲೆಯ
ಕಿಟಕಿ, ಗಾಜುಗಳನ್ನು ಒಡೆದಿದ್ದಲ್ಲದೆ, ಸಮೀಪ ವಿದ್ದ  ಮದ್ಯದಂಗಡಿಗೆ ಬೆಂಕಿ ಹಚ್ಚಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠೀಪ್ರಹಾರ ಮಾಡಿ ಗುಂಪು ಚದುರಿಸಿದರು.

Advertisement

ರ್ಯಾನ್‌ ಇಂಟರ್‌ನ್ಯಾಶನಲ್‌ ಶಾಲೆಯ ಮುಂದೆ ನಿರಂತರ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಹೆತ್ತವರು, ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಇದಕ್ಕೆ ಸರಕಾರ ಸ್ಪಂದಿಸಿರಲಿಲ್ಲ. ರವಿ ವಾರವೂ ಪ್ರತಿಭಟನಕಾರರು ಶಾಲೆಯ ಮುಂದೆ ನೆರೆದಿದ್ದು, ಅವರ ಆಕ್ರೋಶವು ಶಾಲೆಯಿಂದ 50 ಮೀ. ದೂರದಲ್ಲಿದ್ದ ಮದ್ಯ
ದಂಗಡಿಯತ್ತ ತಿರುಗಿತು. ಶಾಲೆಯ ಬಸ್‌ ಚಾಲಕರು, ನಿರ್ವಾಹಕರು ಹಾಗೂ ಇತರ ಸಿಬಂದಿ ವಿರಾಮದ ಅವಧಿಯಲ್ಲಿ ಇದೇ ಮದ್ಯದಂಗಡಿಯಲ್ಲಿ ಮದ್ಯ ಸೇವಿಸಿ, ಕುಕೃತ್ಯ ಎಸಗುತ್ತಾರೆ ಎಂದು ಆರೋಪಿಸಿ ಆ ಅಂಗಡಿಗೆ ಬೆಂಕಿ ಹಚ್ಚಿದರು. 
20 ಮಂದಿ ವಶಕ್ಕೆ: ಹಿಂಸೆ ಹಿನ್ನೆಲೆಯಲ್ಲಿ ಪ್ರತಿಭಟನಕಾರರ ಪೈಕಿ 20 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಏನಿದು ಘಟನೆ?: ಶಾಲೆಯ 2ನೇ ತರ ಗತಿಯಲ್ಲಿ ಕಲಿಯುತ್ತಿದ್ದ ಪ್ರದ್ಯುಮ್ನ ಠಾಕೂರ್‌ ಶುಕ್ರವಾರ ಬೆಳಗ್ಗೆ 7.30ಕ್ಕೆ ಶಾಲೆಗೆ ಬಂದಿದ್ದ. 8.30ರ ವೇಳೆ ಶಾಲೆಯ ಟಾಯ್ಲೆಟ್‌ನಲ್ಲಿ ಆತನ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆ ಸಂಬಂಧ ಪೊಲೀಸರು ಶಾಲೆಯ ಬಸ್‌ ಚಾಲಕ ಅಶೋಕ್‌ ಕುಮಾರ್‌ನನ್ನು ಬಂಧಿಸಿದ್ದಾರೆ. ಆತ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಹೋಗಿ ಕೊಲೆ ಮಾಡಿದ್ದಾಗಿ ಆತನೇ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಿಬಿಐಗೆ ವಹಿಸಲು ಸಿದ್ಧ: ಹರಿಯಾಣ ಶಿಕ್ಷಣ ಸಚಿವ ರಾಮ್‌ವಿಲಾಸ್‌ ಶರ್ಮಾ, ಘಟನೆಯಲ್ಲಿ ಶಾಲಾ ಆಡಳಿತ ಮಂಡಳಿಯ ಲೋಪವೂ ಇದೆ ಎಂದು ಹೇಳಿದ್ದಾರೆ. ಶಾಲೆಯ ಮಾಲಕನ ವಿರುದ್ಧ ಬಾಲನ್ಯಾಯ ಕಾಯ್ದೆಯನ್ವಯ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ತನಿಖೆ ಬಗ್ಗೆ ಹೆತ್ತವರಿಗೆ ತೃಪ್ತಿಯಾಗದಿದ್ದರೆ, ಸಿಬಿಐಗೆ ವಹಿಸಲೂ ಸಿದ್ಧ ಎಂದು ತಿಳಿಸಿದ್ದಾರೆ.

ದಿಲ್ಲಿ ಶಾಲೆಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಗುರುಗ್ರಾಮದ ಘಟನೆ ಹರಿಯಾಣದಲ್ಲಿ ಕಿಚ್ಚು ಹೊತ್ತಿಸಿರುವ ಬೆನ್ನಲ್ಲೇ ದಿಲ್ಲಿಯ ಶಾಹದಾರಾದಲ್ಲಿನ ಟ್ಯಾಗೋರ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ 5 ವರ್ಷದ ಬಾಲಕಿ ಮೇಲೆ ಶಾಲೆಯ ಭದ್ರತಾ ಸಿಬಂದಿಯೇ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ನಡೆದಿದೆ. ಝಾರ್ಖಂಡ್‌ ಮೂಲದ ವಿಕಾಸ್‌ನನ್ನು ಬಂಧಿಸಲಾಗಿದೆ. ಇಬ್ಬರು ಹದಿಹರೆಯದ ಮಕ್ಕಳಿರುವ ಈತ 3 ವರ್ಷಗಳಿಂದಲೂ ಇದೇ ಶಾಲೆಯಲ್ಲಿದ್ದ. ಶನಿವಾರ ಮಧ್ಯಾಹ್ನ ಯಾರೂ ಇಲ್ಲದ ವೇಳೆ ಬಾಲಕಿಯನ್ನು ಕ್ಲಾಸ್‌ರೂಂಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಬಾಯಿ ಬಿಟ್ಟರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆದರಿಸಿದ್ದಾನೆ. ಮನೆಗೆ ಹೋದ ಬಾಲಕಿ ತಾಯಿಯ ಬಳಿ ತನಗೆ ನೋವಾಗುತ್ತಿದೆ ಹಾಗೂ ಗುಪ್ತಾಂಗಗಳಲ್ಲಿ ರಕ್ತ ಬರುತ್ತಿದೆ ಎಂದು ಹೇಳಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರು, ಮ್ಯಾಜಿಸ್ಟ್ರೇಟ್‌ ತನಿಖೆಗೆ ಆದೇಶಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next