Advertisement

ಗೌರಿ ಲಂಕೇಶ್‌ ಹತ್ಯೆಗೆ ಸಂಘಟನೆಗಳ ಆಕ್ರೋಶ

02:56 PM Sep 07, 2017 | |

ದಾವಣಗೆರೆ: ಪತ್ರಕರ್ತೆ, ಸಾಹಿತಿ, ವಿಚಾರವಾದಿ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆ ಖಂಡಿಸಿ, ಬುಧವಾರ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.

Advertisement

ಜಿಲ್ಲಾ ವರದಿಗಾರರ ಕೂಟ, ರಾಜ್ಯ ಪತ್ರಕರ್ತರ ಸಂಘ, ಕಾರ್ಯನಿರತ ಪತ್ರಕರ್ತರ ಸಂಘ, ಕಾಂಗ್ರೆಸ್‌, ಸಿಪಿಐ, ಸಿಪಿಐ(ಎಂ), ಪ್ರಜಾ ರಕ್ಷಣಾ ವೇದಿಕೆ, ಪಿಎಫ್‌ಐ, ವಿವಿಧ  ಪ್ರಗತಿಪರ, ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ, ಮಾನವ ಸರಪಳಿ, ರಸ್ತೆ ತಡೆ ನಡೆಸಿ, ಗೌರಿ ಲಂಕೇಶ್‌ ಹತ್ಯೆಯನ್ನು ಖಂಡಿಸಿ, ದುಷ್ಕರ್ಮಿಗಳ ಶೀಘ್ರ ಬಂಧನಕ್ಕೆ ಒತ್ತಾಯಿಸಿದ್ದಾರೆ. ಸಿಪಿಐ, ಸಿಪಿಐ (ಎಂ), ಪ್ರಜಾ ರಕ್ಷಣಾ ವೇದಿಕೆ, ವಿವಿಧ ಪ್ರಗತಿಪರ ಸಂಘಟನೆ ಕಾರ್ಯಕರ್ತರು ಶ್ರೀ ಜಯದೇವ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಮಾನವ ಸರಪಳಿ ರಚಿಸುವ ಮೂಲಕ ಹತ್ಯೆ ಮಾಡಿದವರ ಬಂಧನಕ್ಕೆ ಒತ್ತಾಯಿಸಿದರು. 

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ| ಬಿ. ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಅಂಬೇಡ್ಕರ್‌ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸುವ ಮೂಲಕ ಗೌರಿ ಲಂಕೇಶ್‌ ಹತ್ಯೆಯನ್ನ ತೀವ್ರವಾಗಿ ಖಂಡಿಸಿದರು. ಜಿಲ್ಲಾ ವರದಿಗಾರರ ಕೂಟದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಬೈಕ್‌ ರ್ಯಾಲಿ ನಡೆಸಿದ ಪತ್ರಕರ್ತರು ಗೌರಿ ಲಂಕೇ ಹತ್ಯೆಯನ್ನ ತೀವ್ರವಾಗಿ ಖಂಡಿಸಿದರು. ಅಭಿವ್ಯಕ್ತಿ ಸ್ವಾತಂತ್ರ ಎತ್ತಿ ಹಿಡಿಯುವ, ಸಮಾಜದ ಅಂಕುಡೊಂಕು ತಿದ್ದುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಮುಕ್ತವಾಗಿ ಕೆಲಸ ಮಾಡವ ವಾತಾವರಣ, ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಹತ್ಯೆಕೋರರ ಬಂಧನಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ
ಮನವಿ ಸಲ್ಲಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕುವೆಂಪು ಕನ್ನಡ ಭವನದ ಮುಂದೆ ಜಮಾಯಿಸಿ, ಮೌನಾಚರಣೆ ಮೂಲಕ ಗೌರಿ ಲಂಕೇಶ್‌ ಗೆ ಗೌರವ ಸಲ್ಲಿಸಿದರು. ಹತ್ಯೆ ಮಾಡಿದವರ ಬಂಧನಕ್ಕೆ ಒತ್ತಾಯಿಸಿದರು. ಮೇಯರ್‌ ಅನಿತಾಬಾಯಿ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮಹಾನಗರ ಪಾಲಿಕೆ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ, ಗೌರಿ ಲಂಕೇಶ್‌ ಹತ್ಯೆ ಖಂಡಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮೌನಾಚರಣೆಯ ಮೂಲಕ ಸಾಮಾಜಿಕ ಕಳಕಳಿಯ ಹೋರಾಟಗಾರ್ತಿಗೆ ನಮನ ಸಲ್ಲಿಸಿದರು. 

Advertisement

ದಾವಣಗೆರೆ ದಕ್ಷಿಣ ಕಾಂಗ್ರೆಸ್‌ ಸಮಿತಿ, ಸುವರ್ಣ ಕರ್ನಾಟಕ ವೇದಿಕೆ ಕಾರ್ಯಕರ್ತರು, ಕ್ಯಾಂಡೆಲ್‌ ಲೈಟ್‌ ಮೂಲಕ ಗೌರಿ ಲಂಕೇಶ್‌ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಹತ್ಯೆ ಖಂಡಿಸಿ, ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದರು. 

ಗೌರಿ ಲಂಕೇಶ್‌ ತಮ್ಮ ತಂದೆಯಂತೆ ಪ್ರಖರ ವೈಚಾರಿಕ ಚಿಂತಕಿ. ಎಡಪಂಥೀಯ ಚಿಂತನೆಯ ಮೈಗೂಡಿಸಿಕೊಂಡಿದ್ದ ಅವರು ದಿಟ್ಟೆ ಪತ್ರಕರ್ತೆಯಾಗಿ ಅತ್ಯಂತ ನಿರ್ಭೀಡತೆಯಿಂದ ಹಲವಾರು ವಿಚಾರಗಳ ಬರೆದಿದ್ದರು. ಯಾವುದೇ ಒತ್ತಡ, ಭಯ, ಆಮಿಷಕ್ಕೊಳಗಾಗದೆ ತಾವು ಹೇಳಬೇಕಾಗಿದ್ದನ್ನು ಹೇಳುತ್ತಿದ್ದ ದಿಟ್ಟ ಮಹಿಳೆ. ಅಂತಹ ಅಪರೂಪದ ವ್ಯಕ್ತಿತ್ವದ ಗೌರಿ ಲಂಕೇಶ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಮಾನವೀಯತೆಯೇ ಇಲ್ಲದ, ಮೃಗೀಯ ವರ್ತನೆಯವರು ಈ ಹೇಡಿ ಕೃತ್ಯವೆಸಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಎರಡು ವರ್ಷಗಳ ಹಿಂದೆ ಸಾಹಿತಿ ಡಾ| ಎಂ.ಎಂ. ಕಲಬುರ್ಗಿಯವರ ಹತ್ಯೆ ದುಷ್ಕರ್ಮಿಗಳು ಇನ್ನೂ ಪತ್ತೆಯಾಗಿಲ್ಲ. ಈಗ ಗೌರಿ ಲಂಕೇಶ್‌ ಹತ್ಯೆಯಾಗಿರುವುದ ನೋಡಿದರೆ ಸತ್ಯವನ್ನ ನೇರವಾಗಿ ಹೇಳುವುದೇ ತಪ್ಪು ಎನ್ನುವಂತಾಗುತ್ತಿದೆ. ಸೈದ್ಧಾಂತಿಕ ವಿಚಾರಗಳ ಬಗ್ಗೆ ಏನೇ
ಭಿನ್ನಾಭಿಪ್ರಾಯ ಇದ್ದರೆ ವಿಚಾರಗಳ ಮೂಲಕ ಚರ್ಚೆ ಮಾಡಬೇಕು. ಅದನ್ನು ಬಿಟ್ಟು ಈ ರೀತಿಯಲ್ಲಿ ಹತ್ಯೆಗೆ ಮುಂದಾಗಿರುವುದು ಸರಿಯಲ್ಲ. ವಿಚಾರವಾದಿಯ ಹತ್ಯೆ ಮಾಡಬಹುದು. ಆದರೆ, ಅವರು ಸದಾ ಪ್ರತಿಪಾದಿಸುತ್ತಿದ್ದ ವಿಚಾರಗಳು ಎಂದಿಗೂ ಸಾಯುವುದಿಲ್ಲ. ಹತ್ಯೆ ಮಾಡಿದ ತಕ್ಷಣ ಯಾರೂ ಸಹ ಹೋರಾಟದಿಂದ ಹಿಂದೆ ಸರಿಯುವುದೇ ಇಲ್ಲ. ಬದಲಿಗೆ ಇನ್ನೂ ಹೆಚ್ಚಿನ ಪ್ರಖರತೆಯ ಹೋರಾಟಕ್ಕೆ ಅಣಿಯಾಗುವರು ಎಂಬುದನ್ನು ಹತ್ಯೆಕೋರರು ಅರಿಯಬೇಕು. ಗೌರಿ ಲಂಕೇಶ್‌ ದೈಹಿಕವಾಗಿ ಇಲ್ಲದೇ ಇರಬಹುದು. ವಿಚಾರಧಾರೆ ಮೂಲಕ ಅವರು ಎಲ್ಲ ಪ್ರಗತಿಪರ ಚಿಂತಕರು, ಸಾಮಾಜಿಕ ಹೋರಾಟಗಾರರ ಮನದಲ್ಲಿ ಸದಾ ಅಚ್ಚಳಿಯದೆ ಉಳಿದಿದ್ದಾರೆ ಎಂದರು. 

ರಾಜ್ಯದಲ್ಲಿ ಪ್ರಗತಿಪರ ಚಿಂತಕರ ಮೇಲೆ ಹಲ್ಲೆ, ದೌರ್ಜನ್ಯ, ದಬ್ಟಾಳಿಕೆಯ ಜೊತೆಗೆ ಹತ್ಯೆ ಸಹ ನಡೆಯುತ್ತಿವೆ. ಇದೆಲ್ಲಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ. ರಾಜ್ಯ ಸರ್ಕಾರ ಕೂಡಲೇ ಅಗತ್ಯ ರಕ್ಷಣೆ ಕೊಡಬೇಕು. ಪತ್ರಕರ್ತರು ಸಹ ಭಯ ಮತ್ತು ಆತಂಕದ ನಡುವೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಜನರ ಸಮಸ್ಯೆ, ನೋವು, ದೌರ್ಜನ್ಯ, ದಬ್ಟಾಳಿಕೆ ಸ್ಪಂದಿಸುವರಿಗೆ ರಕ್ಷಣೆಯೇ ಇಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು. ಗೌರಿ ಲಂಕೇಶ್‌ ಹತ್ಯೆ ಮಾಡಿದವರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಇಲ್ಲವೇ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತ್ಯೇಕವಾಗಿ ನಡೆದ ಪ್ರತಿಭಟನೆಗಳಲ್ಲಿ ಮೇಯರ್‌ ಅನಿತಾಬಾಯಿ, ಸದಸ್ಯರಾದ ಅಶ್ವಿ‌ನಿ, ದಿನೇಶ್‌ ಕೆ. ಶೆಟ್ಟಿ, ದಿಲ್‌ಶಾದ್‌, ಎಚ್‌. ತಿಪ್ಪಣ್ಣ, ಪದ್ಮಾ ವೆಂಕಟೇಶ್‌, ದಾಕ್ಷಾಯಣಮ್ಮ, ಸಾಗರ್‌, ಹಿರಿಯ ಕಾರ್ಮಿಕ ಮುಖಂಡರಾದ ಎಚ್‌. ಕೆ. ರಾಮಚಂದ್ರಪ್ಪ, ಕೆ.ಎಲ್‌. ಭಟ್‌, ಆವರಗೆರೆ
ಎಚ್‌.ಜಿ. ಉಮೇಶ್‌, ಅನೀಸ್‌ ಪಾಷಾ, ತಾಲೂಕು ಪಂಚಾಯತ್‌ ಸದಸ್ಯ ಆಲೂರು ನಿಂಗರಾಜ್‌, ಹೆಗ್ಗೆರೆ ರಂಗಪ್ಪ, ರಾಘು ದೊಡ್ಮನಿ, ಉಚ್ಚಂಗಿ ಪ್ರಸಾದ್‌, ಐರಣಿ ಚಂದ್ರು, ಆವರಗೆರೆ ವಾಸು, ಹಬೀಬ್‌, ಟಿ.ವಿ.ಎಸ್‌. ರಾಜು, ಮಂಜುನಾಥ ಕುಕ್ಕವಾಡ, ಮಂಜುನಾಥ ಕೈದಾಳೆ, ಮಧು ತೊಗಲೇರಿ, ಬನಶ್ರೀ, ಭಾರತಿ, ಸೌಮ್ಯ, ಪರಶುರಾಮ್‌, ಪತ್ರಕರ್ತರಾದ ಬಿ.ಎನ್‌. ಮಲ್ಲೇಶ್‌, ಬಸವರಾಜ್‌ ದೊಡ್ಮನಿ, ಬಿ.ಬಿ. ಮಲ್ಲೇಶ್‌, ಎಂ. ಶಶಿಕುಮಾರ್‌, ಬಕ್ಕೇಶ್‌ ನಾಗನೂರು, ಎನ್‌.ಆರ್‌. ನಟರಾಜ್‌, ಸುಭಾಷ್‌, ದೇವಿಕಾ ಸುನೀಲ್‌, ತೇಜಸ್ವಿನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next