Advertisement

ಅಭಿವೃದ್ಧಿ ಕಾರ್ಯ ಸ್ಥಗಿತಕ್ಕೆ ಜನಾಕ್ರೋಶ

06:30 PM Mar 11, 2021 | Nagendra Trasi |

ಆಲಮಟ್ಟಿ: ವಂದಾಲ ಗ್ರಾಮವನ್ನು ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಮುಳುಗಡೆ ಮಾಡುವುದಾಗಿ ಹೇಳಿ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಬಂಧಿಸಿರುವದನ್ನು ಖಂಡಿಸಿ ನಾಗರಿಕ ಹೋರಾಟ ಸಮಿತಿ ವತಿಯಿಂದ ಧರಣಿ ಬುಧವಾರ ಆರಂಭಗೊಂಡಿತು.

Advertisement

ಧರಣಿ ನಿರತರನ್ನುದ್ದೇಶಿಸಿ ತಾಪಂ ಮಾಜಿ ಸದಸ್ಯ ಪ್ರಮೋದ ಕುಲಕರ್ಣಿ, ನಿವೃತ್ತ ಬಿಇಒ ಎಚ್‌.ಬಿ. ಗೂಗಿಹಾಳ, ನಿವೃತ್ತ ಕೃಷಿ ಅಧಿ ಕಾರಿ ಬಿ.ಸಿ. ಸಜ್ಜನ
ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಸ್ಪಷ್ಟ ನಿರ್ಧಾರವಿಲ್ಲದೇ ಗ್ರಾಮದ ಅಭಿವೃದ್ಧಿ ಸ್ಥಗಿತ, ಗ್ರಾಪಂನ ಆಸ್ತಿ ರಜಿಸ್ಟರ್‌ ನಮೂನೆ-9ನ್ನು ಕೃ.ಮೇ.ಯೋ. ಆಯುಕ್ತರ ಕಚೇರಿ ವಶಪಡಿಸಿಕೊಂಡಿದ್ದಾರೆ. ಇದರಿಂದ ನೂತನವಾಗಿ ಮನೆ ನಿರ್ಮಿಸಿಕೊಳ್ಳಲು ಗ್ರಾಪಂನವರು ಪರವಾನಗಿ ನೀಡುತ್ತಿಲ್ಲ ಎಂದರು.

ಕಳೆದ 10 ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ವ್ಯಾಪಕವಾಗಿ ಏರಿಕೆಯಾಗಿದೆ. ಇದರಿಂದ ಕುಡಿಯುವ ನೀರಿನ ಸಂಗ್ರಹ ಟ್ಯಾಂಕ್‌ಗಳು ಮೊದಲಿದ್ದಷ್ಟೇ ಇರುವುದರಿಂದ
ಸಮರ್ಪಕವಾಗಿ ನೀರು ಒರೆಯುತ್ತಿಲ್ಲ, ಮನೆ ನಿರ್ಮಾಣಕ್ಕೆ ಅವಕಾಶ ಸಿಗದೇ ಇರುವುದರಿಂದ ಒಂದೇ ಕೊಠಡಿಯಲ್ಲಿ ತಂದೆ, ತಾಯಿ, ಮಕ್ಕಳು, ಸೊಸೆಯಂದಿರು ವಾಸ್ತವ್ಯ ಮಾಡುವದಾದರೂ ಹೇಗೆ? ಇನ್ನು ಪುನರ್ವಸತಿ ಕೇಂದ್ರಕ್ಕಾಗಿ ಉಣ್ಣಿಬಾವಿ ರಸ್ತೆಯಲ್ಲಿ 600 ಎಕರೆ ಜಮೀನಿಗೆ 4(1) ನೋಟಿಸ್‌ ಮಾತ್ರ ನೀಡಿದ್ದಾರೆ. ಮುಂದೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.

ವಂದಾಲ ಗ್ರಾಮ ಮುಳುಗಡೆಯಾಗುತ್ತದೆ ಎಂದು ನಂಬಿ ಕೆಲವರು ಒಂದೇ ಮನೆಯನ್ನು ವಾಟ್ನಿ ಮಾಡಿಕೊಂಡು ಸರ್ಕಾರ ನಿಗದಿ ಮಾಡಿದ ಕರ ತುಂಬುತ್ತಿದ್ದಾರೆ. ಇದರಿಂದ ಇರುವ ಅಷ್ಟೇ ಜಾಗಕ್ಕೆ ನೀಡಬೇಕಾಗಿದ್ದ ಕರವನ್ನು ಐದು ಪಟ್ಟು ಹೆಚ್ಚಿಗೆ ತುಂಬುವಂತಾಗಿದ್ದು ಗ್ರಾಮಸ್ಥರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಇನ್ನು ಸರ್ಕಾರದ ವಿವಿಧ ವಸತಿ ಯೋಜನೆಯಲ್ಲಿ ಒಂದು ವರ್ಷಕ್ಕೆ ಕನಿಷ್ಠ 50 ಮನೆಗಳು ಬರುತ್ತಿದ್ದವು ಇದರಿಂದ 10 ವರ್ಷದಲ್ಲಿ ನಮ್ಮ ಗ್ರಾಮಕ್ಕೆ ಬರಬೇಕಾಗಿದ್ದ 500 ಮನೆಗಳೂ ಕೂಡ ಬೇರೆ ಗ್ರಾಮಗಳ ಪಾಲಾಗಿವೆ.

ಸರ್ಕಾರ ಕೃಷ್ಣಾಮೇಲ್ದಂಡೆ ಯೋಜನೆ ಅನುಷ್ಠಾನದ ಬಗ್ಗೆ ಸ್ಪಷ್ಟ ನಿರ್ಧಾರವಾದ ನಂತರ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಲಿ ಹಾಗೂ ಮುಳುಗಡೆ
ನಿಯಮಾವಳಿಯಂತೆ ನಿರ್ಧಾರ ಕೈಗೊಳ್ಳಲಿ. ಅಲ್ಲಿವರೆಗೂ ನಮಗೆ ಮೊದಲಿನಂತೆ ಅವಕಾಶ ನೀಡಬೇಕು. ಇಲ್ಲವೇ ಮುಳುಗಡೆಯನ್ನಾದರೂ ಮಾಡುವ ಸ್ಪಷ್ಟ ನಿರ್ಧಾರ ಕೈಗೊಳ್ಳುವವರೆಗೂ ಹಂತ ಹಂತವಾಗಿ ಹೋರಾಟ ಮಾಡಲಾಗುವದು ಎಂದು ಹೇಳಿದರು.

Advertisement

ಭೇಟಿ: ಗ್ರಾಪಂ ಆವರಣದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ತಹಶೀಲ್ದಾರ್‌ ಶಿವಲಿಂಗಪ್ರಭು ವಾಲಿ, ತಾಪಂ ಇಒ ವಿ.ಎಸ್‌. ಹಿರೇಮಠ ಹಾಗೂ ಯುಕೆಪಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಅಧಿಕಾರಿಗಳು ಭೇಟಿ ನೀಡಿ, ಸ್ವಲ್ಪ ದಿನಗಳಲ್ಲಿಯೇ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದು ಅಲ್ಲಿವರೆಗೂ ತಾವು ಧರಣಿಯನ್ನು ಕೈ ಬಿಡಬೇಕು ಎಂದು ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನಮ್ಮ ಬೇಡಿಕೆಗೆ ಸ್ಪಷ್ಟತೆ ಸಿಗುವವರೆಗೂ ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ಧರಣಿ ಮುಂದುವರಿಸಿದರು.

ಧರಣಿಯಲ್ಲಿ ಶೇಖರ ಗೂಗಿಹಾಳ, ಶ್ರೀಶೈಲ ಹಿರೇಮಠ, ಗಂಗಾಧರ ರಾಂಪುರ, ಮಲ್ಲನಗೌಡ ಪಾಟೀಲ, ಬಿ.ಎಚ್‌. ವಾಲೀಕಾರ, ಜಿ.ಜಿ. ಹುಲ್ಯಾಳ, ವಿ.ಎಸ್‌. ಬೀಳಗಿ, ವಿನೋದ ದೊಡಮನಿ, ತಿಪ್ಪಣ್ಣ ಮಾದರ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಉಣ್ಣಿಬಾವಿ, ಸಾವಿತ್ರಿ ಬಿರಾದಾರ, ರೇಖಾ ಜಾಲಿಮಿಂಚಿ, ರೇಣುಕಾ ಬೊಮ್ಮನಳ್ಳಿ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next