Advertisement

ಗುಣಮಟ್ಟದ ಹಾಲು ಪೂರೈಸುವುದೇ ಧ್ಯೇಯವಾಗಿರಿಸಿದ ಸಂಸ್ಥೆ

11:29 PM Feb 26, 2020 | Sriram |

ಗ್ರಾಮೀಣ ಹಾಲು ಉತ್ಪಾದಕರ ಅಭಿವೃದ್ಧಿ, ಗುಣಮಟ್ಟದ ಹಾಲು ನೀಡಬೇಕೆನ್ನುವ ಆಕಾಂಕ್ಷೆಯೊಂದಿಗೆ ಹುಟ್ಟಿಕೊಂಡ ಕೆದೂರು ಹಾಲು ಉತ್ಪಾದಕರ ಸಂಘ ಇತರ ಸಂಘಗಳಿಗೆ ಮಾದರಿಯಾಗಿ ನಿಂತಿದೆ.

Advertisement

ಕೆದೂರು: ಗ್ರಾಮೀಣ ಭಾಗದ ಹೈನುಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಿಂದ ಆರಂಭಗೊಂಡ ಕೆದೂರು ಹಾಲು ಉತ್ಪಾದಕರ ಸಹಕಾರ ಸಂಘ ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಈ ಸಂಘಕ್ಕೀಗ 32 ವರ್ಷ.

1988 ರಲ್ಲಿ ಆರಂಭ
ಸುತ್ತಮುತ್ತಲಿನ ಶಾನಾಡಿ,ಹೊಸಮಠ, ಚಾರುಕೊಟ್ಟಿಗೆ ಗ್ರಾಮೀಣ ಭಾಗದ ಹೈನುಗಾರರು ಹಾಲು ಮಾರಾಟಕ್ಕೆ ದೂರ ಕ್ರಮಿಸಬೇಕಾದ ಅನಿವಾರ್ಯ ಒಂದೆಡೆ ಯಾದರೆ ಮತ್ತೂಂದೆಡೆ ಗ್ರಾಮದಲ್ಲಿ ಹಾಲು ಉತ್ಪಾದಕರಿಂದ ಖಾಸಗಿ ಸಂಸ್ಥೆಯೊಂದು ಹಾಲು ಸಂಗ್ರಹಿಸುತ್ತಿತ್ತು. ಇದರಿಂದ ಗ್ರಾಮೀಣ ಹೈನುಗಾರರ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದ್ದರಿಂದ ಕೆದೂರು ಸೀತಾರಾಮ ಶೆಟ್ಟಿ, ಸ್ಥಾಪಕ ಅಧ್ಯಕ್ಷ ಕಾಳಪ್ಪ ಶೆಟ್ಟಿ ಅವರು ಸಮಾನ ಮನಸ್ಕರೊಂದಿಗೆ ಸೇರಿಕೊಂಡು 1988 ಎ.23ರಂದು ಸಂಘ ಸ್ಥಾಪನೆ ಮಾಡಿದರು. ಈ ವೇಳೆ ಸದಸ್ಯರ ಬಲ 32 ಆಗಿತ್ತು. ಅಂದು ಸುಮಾರು 60 ಲೀ. ಸಂಗ್ರಹವಾಗುತ್ತಿತ್ತು.

ಸರ್ವ ವ್ಯವಸ್ಥೆ
1998ರಲ್ಲಿ ಸ್ವಂತ ಕಟ್ಟಡವನ್ನು ಸಂಘ ನಿರ್ಮಾಣ ಮಾಡಿತ್ತು. 2013 ರಲ್ಲಿ ಸುಮಾರು 5 ಸಾವಿರ ಲೀ. ಸಾಮರ್ಥ್ಯದ ಶೀತಲೀಕರಣ ಸ್ಥಾಪಿಸಲಾಗಿದೆ.

ಕಾರ್ಯಕ್ರಮಗಳು
ಸಂಘವು 2016-17ರಲ್ಲಿ ಜಾನುವಾರು ಪ್ರದರ್ಶನವನ್ನು ಆಯೋಜಿಸಿದ್ದು, ಮಿಶ್ರತಳಿ ಕರುಗಳ ಪ್ರದರ್ಶನ, 50ಕ್ಕೂ ಅಧಿಕ ಗೊಬ್ಬರ ಅನಿಲ ಸ್ಥಾವರ ಘಟಕ ನಿರ್ಮಾಣಕ್ಕೆ ಪ್ರೋತ್ಸಾಹ, ಅಜೋಲಾ ಹಾಗೂ ವಿದ್ಯಾರ್ಥಿ ವೇತನ, ಸದಸ್ಯರಿಗೆ ವಿವಿಧ ಸೌಲಭ್ಯಗಳ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Advertisement

ಚುನಾವಣೆಯೇ ಆಗಿಲ್ಲ!
ಸಂಘ ಆರಂಭಗೊಂಡು 32 ವರ್ಷಗಳೇ ಕಳೆದರೂ ಕೂಡಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಾಗಿ ಚುನಾವಣೆಗಳು ನಡೆಸದೆ ಪರಿಸರದ ಪ್ರಜ್ಞಾವಂತ ಹೈನುಗಾರರು ಬೆಂಬಲದಿಂದಾಗಿ ಸಂಘದ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಿರುವುದೇ ಇತಿಹಾಸ.

ಇಂದಿನ ಸ್ಥಿತಿಗತಿ
ಪ್ರಸ್ತುತ ಸುಮಾರು 288 ಸದಸ್ಯರನ್ನು ಒಳಗೊಂಡಿದ್ದು , ಹಾಲು ಉತ್ಪಾದಕ ಸದಸ್ಯರು 180 ಮಂದಿ ಇದ್ದಾರೆ. ನಿತ್ಯ 1600 ಲೀ. ಹಾಲು ಸಂಗ್ರಹವಾಗುತ್ತಿದೆ. ಬಿಸಿನೀರಿನಿಂದ ಹಾಲಿನ ಪಾತ್ರೆ ತೊಳೆಯುವ ವ್ಯವಸ್ಥೆ , ಡ್ರೈನೇಜ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪ್ರಶಸ್ತಿ
ಕೆದೂರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 1994ರಲ್ಲಿ ಉತ್ತಮ ಸಂಘ ಪ್ರಶಸ್ತಿ ದೊರಕಿದೆ.

200 ಕ್ಕೂ ಅಧಿಕ ಗ್ರಾಮೀಣ ಹೈನುಗಾರರು ಸಂಘದಿಂದಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡು ಯಶ ಕಂಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಂಘವನ್ನು ಮಾದರಿ ಸಂಘವನ್ನಾಗಿಸುವ ಗುರಿ ಹೊಂದಿದ್ದೇವೆ.
-ಸುರೇಂದ್ರ ಶೆಟ್ಟಿ, ಅಧ್ಯಕ್ಷರು

ಅಧ್ಯಕ್ಷರು:
ಕೆ. ಕಾಳಪ್ಪ ಶೆಟ್ಟಿ, ಎಸ್‌. ಮಹಾಬಲ ಶೆಟ್ಟಿ, ಶೇಷು ಯಾನೆ ಶೇಖರ್‌ ಶೆಟ್ಟಿ, ಜಿ.ಶೇಖರ್‌ ಶೆಟ್ಟಿ, ಕೆ.ಆನಂದ ಶೆಟ್ಟಿ, ಕೆ.ಕರುಣಾಕರ ಶೆಟ್ಟಿ, ಸುರೇಂದ್ರ ಶೆಟ್ಟಿ (ಹಾಲಿ)
ಕಾರ್ಯದರ್ಶಿಗಳು:
ಕುಶಲ ಶೆಟ್ಟಿ, ರೋಹಿಣಿ ಶೆಟ್ಟಿ, ಬೇಬಿ
ಕೆದೂರು (ಹಾಲಿ)

-  ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next