Advertisement

ಯುವಕರಿಗೆ ಪ್ರೇರಣೆಯಾದ ಮಾಜಿ ಸೈನಿಕನ ಸಾವಯವ ಕೃಷಿ

08:35 AM Jul 27, 2019 | Suhan S |

ಬಾಗಲಕೋಟೆ: ಸತತ 17 ವರ್ಷ ದೇಶದ ಗಡಿ ಸೇವೆಗೈದ ಮಾಜಿ ಸೈನಿಕರೊಬ್ಬರು, ಇದೀಗ ಭೂ ತಾಯಿಯ ಸೇವೆಯಲ್ಲಿ ತೊಡಗಿದ್ದು, ಸಾವಯವ ಕೃಷಿ ಅವರ ಕೈ ಹಿಡಿದಿದೆ.

Advertisement

ಹೌದು, ಬೀಳಗಿ ತಾಲೂಕಿನ ಅನಗವಾಡಿಯ ಶ್ರೀಶೈಲ ಮಲ್ಲಯ್ಯ ಕೂಗಲಿ ಎಂಬ ಮಾಜಿ ಸೈನಿಕ ಮತ್ತು ಮಾಜಿ ಪೊಲೀಸ್‌ ಇದೀಗ ಯಶಸ್ವಿ ಕೃಷಿಕರಾಗಿದ್ದಾರೆ. ಇವರ ಕೃಷಿ ಪದ್ಧತಿ, ಸಾವಯವ ಕೃಷಿಗೆ ಇಡೀ ಗ್ರಾಮದ ಯುವ ರೈತರೂ ಪ್ರೇರಣೆಗೊಂಡಿದ್ದಾರೆ. ಜತೆಗೆ ತೋಟಗಾರಿಕೆ ಕಾಲೇಜು, ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಇವರ ಹೊಲಕ್ಕೆ ಭೇಟಿ ನೀಡಿ, ಮಾಹಿತಿ ಪಡೆಯುತ್ತಾರೆ.

17 ವರ್ಷ ದೇಶ ಸೇವೆ: ಇದೀಗ ಯಶಸ್ವಿ ಕೃಷಿಕರಾಗಿರುವ ಶ್ರೀಶೈಲ ಕೂಗಲಿ, 17 ವರ್ಷ ಫಿರಂಗಿ ಪಡೆ (ಅಟ್ಲ್ರಿ)ಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕಳೆದ 1976ರ ಅಕ್ಟೋಬರ್‌ 9ರಂದು ಸೇನೆಗೆ ಸೇರಿದ್ದ ಇವರು, ಬ್ರಾಸ್‌ ಆಕ್ಟ್ ಎಕ್ಷೆನ್‌ ತರಬೇತಿ ವೇಳೆ ಪಾಕಿಸ್ತಾನದ ಗಡಿಯಲ್ಲಿ (ಜಮ್ಮು-ಕಾಶ್ಮೀರದ ಕಾಟರಾ ಮತ್ತು ರಿಜೋರಿ) ಯುದ್ಧಕ್ಕೆ ಸಿದ್ಧರಾಗಿದ್ದರು. ಆದರೆ, ಅಂದು ಯುದ್ಧ ನಡೆಯಲಿಲ್ಲ. ಎರಡೂ ದೇಶಗಳು, ಸೈನಿಕರನ್ನು ಮರಳಿ ಕರೆಸಿತ್ತು. ಒಂದು ವೇಳೆ ಯುದ್ಧ ನಡೆದು, ಸತ್ತರೇ ದೇಶಕ್ಕಾಗಿ ಸಾಯೋಣ ಎಂದೇ ದೇಶಾಭಿಮಾನದೊಂದಿಗೆ ಗಡಿಯಲ್ಲಿ 17 ವರ್ಷ ಸೇವೆ ಸಲ್ಲಿಸಿ, ಸಿನಿಯರ್‌ ಹವಾಲ್ದಾರ ಆಗಿ ನಿವೃತ್ತಿಯಾಗಿದ್ದರು.

ಭೀಮಾ ತೀರದ ಹಂತಕರ ಕಾರ್ಯಾಚರಣೆಯಲ್ಲಿ ಭಾಗಿ: ಸೇನೆಯಿಂದ ನಿವೃತ್ತಿಯಾದ ಬಳಿಕ ಇವರು, ಕರ್ನಾಟಕ ಪೊಲೀಸ್‌ ಇಲಾಖೆಗೆ ಸೇರ್ಪಡೆಯಾದರು. ಪೊಲೀಸ್‌ ಪೇದೆಯಾಗಿ ಮೊದಲು ಕಲಬುರಗಿಯಲ್ಲಿ ಸೇವೆ ಆರಂಭಿಸಿದ್ದರು. ಬಳಿಕ ಆಳಂದ, ಆಲಮೇಲ, ಮುಧೋಳ ಪೊಲೀಸ್‌ ಠಾಣೆಗಳಲ್ಲಿ ಕೆಲಸ ಮಾಡಿ, ಕೊನೆಗೆ ಬಾಗಲಕೋಟೆಗೆ ವರ್ಗವಾಗಿ ಬಂದಿದ್ದರು. ಇಲ್ಲಿ 8 ವರ್ಷಗಳ ಕಾಲ ರಾಜ್ಯ ಗುಪ್ತ ದಳದಲ್ಲಿ ಯಶಸ್ವಿ ಸೇವೆ ಸಲ್ಲಿಸಿದ್ದರು.

ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಆಲಮೇಲ ಪೊಲೀಸ್‌ ಠಾಣೆಯಲ್ಲಿದ್ದಾಗ ಭೀಮಾ ತೀರದ ಹಂತಕರ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚಂದಪ್ಪ ಹರಿಜನನ ಸಹಚರನಾಗಿದ್ದ ಕೇಶಪ್ಪ ತಾವರಖೇಡ ಬಂಧನದಲ್ಲಿ ಈ ಶ್ರೀಶೈಲ ಕೂಗಲಿ ಅವರ ಧೈರ್ಯದಿಂದ ಮುನ್ನುಗ್ಗಿದ್ದರು. ಇವರ ಸೇವೆ ಕಂಡಿದ್ದ ಅಂದಿನ ಆಲಮೇಲ ಪಿಎಸ್‌ಐ ಶಿವಲಿಂಗ ಆರಾದ್ಯ, ಶಹಬ್ಟಾಶ್‌ಗಿರಿ ನೀಡಿದ್ದರು.

Advertisement

ಕೃಷಿಯತ್ತ ಒಲವು: ದೇಶದ ಗಡಿ ಸೇವೆ, ಪೊಲೀಸ್‌ ಪೇದೆಯಾಗಿ ನಾಗರಿಕ ಸೇವೆ ಸಲ್ಲಿಸಿ, ಇದೀಗ ಭೂ ತಾಯಿಯ ಸೇವೆಯಲ್ಲಿ ಯಶಸ್ವಿಯಾಗಿದ್ದಾರೆ. ಸೈನಿಕ, ರೈತ ಎರಡೂ ಆಗಿರುವ ಇವರು, ತಮ್ಮ ಹೊಲಕ್ಕೆ ‘ಜೈ ಜವಾನ್‌ ಜೈ, ಕಿಸಾನ್‌ ತೋಟ’ ಎಂದು ಹೆಸರಿಟ್ಟಿದ್ದಾರೆ.

ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆ ವರೆಗೆ ತಾವೇ ಸ್ವತಃ ಕೃಷಿ ಕಾರ್ಮಿಕನಂತೆ ದುಡಿಯುತ್ತಿದ್ದಾರೆ. ಭೂ ತಾಯಿ ನಂಬಿ ದುಡಿದ ಇವರಿಗೆ ನಿರಾಶೆಯಾಗಿಲ್ಲ. 5 ಸಾವಿರ ಖರ್ಚು ಮಾಡಿ, 1.50 ಲಕ್ಷ ಪಡೆಯುವ ಸಾವಯವ ಯಶಸ್ವಿ ಕೃಷಿ ಮಾಡುತ್ತಿದ್ದು, ಯುವ ಪೀಳಿಗೆ ದುಡಿಯಲು ಬೇರೆ-ಬೇರೆ ನಗರ-ಪಟ್ಟಣಗಳಿಗೆ ವಲಸೆ ಹೋಗುವ ಬದಲು, ಕೃಷಿಯಲ್ಲಿ ತೊಡಗಬೇಕು ಎಂಬುದು ಇವರ ಕಿವಿ ಮಾತು.

ಬಾಳೆ-ದಾಳಿಂಬೆ: ಅನಗವಾಡಿಯಲ್ಲಿ 3.34 ಎಕರೆ ಪಿತ್ರಾಜಿತ ಆಸ್ತಿ ಮತ್ತು 3.34 ಎಕರೆ ಸಹೋದರರ ಭೂಮಿ (ಸೈನ್ಯದಿಂದ ನಿವೃತ್ತಿಯಾದ ಬಳಿಕ ಬಂದ ಹಣದಲ್ಲಿ ಸಹೋದರ ಭೂಮಿ ಖರೀದಿಸಿದ್ದರು) ಸೇರಿ ಒಟ್ಟು 7.28 ಎಕರೆ ಭೂಮಿಯಲ್ಲಿ ಸಮೃದ್ಧ ಕೃಷಿ ಮಾಡುತ್ತಿದ್ದಾರೆ. ಒಂದು ಎಕರೆಯಲ್ಲಿ 2 ಸಾವಿರ ಜಿ-9 ಬಾಳೆ ಹಚ್ಚಿದ್ದು, ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಆರು ಎಕರೆಯಲ್ಲಿ ದಾಳಿಂಬೆ ಬೆಳೆಯುತ್ತಿದ್ದು, ರಾಸಾಯನಿಕ ಬಳಸದೇ ಗೋಮೂತ್ರ, ತಿಪ್ಪೆಗೊಬ್ಬರ ಬಳಸುತ್ತಿದ್ದಾರೆ. ಒಂದು ಎಕರೆ ಬಾಳೆಗೆ ಬೆಳೆ ನಿರ್ವಹಣೆಗೆ ವಾರ್ಷಿಕ 5 ಸಾವಿರ ರೂ. ಖರ್ಚು ಮಾಡಿದ್ದು (ಸಸಿ ಖರ್ಚು ಬಿಟ್ಟು) 1.50 ಲಕ್ಷ ರೂ. ಲಾಭ ಪಡೆದಿದ್ದಾರೆ. ದಾಳಿಂಬೆ ಬೆಳೆಗೆ 5 ಲಕ್ಷ ರೂ. ಖರ್ಚು ಮಾಡಿದ್ದು, 1 ಲಕ್ಷ ಉಳಿತಾಯ ಮಾಡಿದ್ದಾರೆ.

 

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next