ಲಕ್ನೋ: ಆಗಸ್ಟ್ 15ರ ಸ್ವಾತಂತ್ರೊತ್ಸವದಂದು ರಾಷ್ಟ್ರಧ್ವಜಾರೋಹಣ ನಡೆಸಿ, ರಾಷ್ಟ್ರಗೀತೆ ಹಾಡದ ಮದ್ರಸಾಗಳ ವಿರುದ್ಧ ಕಠಿನ ಕ್ರಮಕ್ಕೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರ ಮುಂದಾಗಿದೆ.
ಆದೇಶ ಉಲ್ಲಂ ಸಿದ ಮದ್ರಸಾಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಮತ್ತು ರಾಷ್ಟ್ರೀಯ ಗೌರವ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಬರೇಲಿ ವಿಭಾಗೀಯ ಕಮಿಷನರ್ ಡಾ| ಪಿ.ವಿ. ಜಗಮೋಹನ್ ಹೇಳಿದ್ದಾರೆ.
ಇತ್ತೀಚೆಗೆ ಸ್ವಾತಂತ್ರ್ಯ ದಿನದಂದು ಮದ್ರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದು, ಧ್ವಜಾರೋಹಣವನ್ನು ಸರಕಾರ ಕಡ್ಡಾಯ ಗೊಳಿಸಿತ್ತು. ಜತೆಗೆ ಇಡೀ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ನಡೆಸುವಂತೆ ಹೇಳ ಲಾಗಿತ್ತು. ಸರಕಾರದ ಮೂಲಗಳ ಪ್ರಕಾರ 150 ಮದ್ರಸಾಗಳಲ್ಲಿ ಆದೇಶ ಪಾಲಿಸಲಾಗಿಲ್ಲ. ಈ ಬಗ್ಗೆ ವಿವಿಧೆಡೆಗಳಿಂದ ದೂರುಗಳು ಬಂದಿದ್ದಾಗಿ ಸರಕಾರದ ಮೂಲಗಳು ಹೇಳಿವೆ.
“ಆದೇಶ ಧಿಕ್ಕರಿಸಿದ್ದರ ವಿರುದ್ಧ ದೂರುಗಳಿವೆ. ದೂರು ನೀಡಿದವರು ಖಚಿತ ಸಾಕ್ಷ್ಯಗಳನ್ನು ನೀಡುವಂತೆ ಹೇಳಲಾಗಿದೆ. ಆದೇಶ ಧಿಕ್ಕರಿಸಿದ್ದು ಖಚಿತಪಟ್ಟರೆ ಅಂತಹ ಮದ್ರಸಾಗಳ ವಿರುದ್ಧ ಕೇಸು ದಾಖಲಿಸಲಾಗುವುದು’ ಎಂದು ಜಗಮೋಹನ್ ತಿಳಿಸಿದ್ದಾರೆ.
ಇನ್ನು ಸರಕಾರದ ಆದೇಶದ ವಿರುದ್ಧ ಬರೇಲಿಯ ಮುಸ್ಲಿಂ ಧಾರ್ಮಿಕ ಮುಖಂಡ ಕಾಝಿ ಮೌಲಾನಾ ರಾಜಾ ಖಾನ್ ಹೇಳಿಕೆ ನೀಡಿದ್ದು, ರಾಷ್ಟ್ರಗೀತೆ ಹಾಡುವುದು ಮುಸ್ಲಿಂ ವಿರೋಧಿ ಎಂದಿದ್ದರು. ದರ್ಗಾ ಅಲಾಹಝಾರತ್ ಕೂಡ ಮದ್ರಸಾಗಳಲ್ಲಿ ರಾಷ್ಟ್ರಗೀತೆ ಹಾಡಬಾರದು ಎಂದು ಹೇಳಿತ್ತು.