ಕನಕಪುರ: ರಾಜ್ಯದ ಕೃಷ್ಣರಾಜ ಅಣೆಕಟ್ಟೆಯಿಂದ ತಮಿಳುನಾಡಿಗೆ 9.19 ಟಿಎಂಸಿ. ನೀರನ್ನು ಹರಿಸುವಂತೆ ನೀಡಿರುವ ಆದೇಶ ಅಸಮಂಜಸ ಹಾಗೂ ಅವೈಜ್ಞಾನಿಕ. ಈ ಆದೇಶವನ್ನು ರಾಜ್ಯ ರೈತಸಂಘ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿದವು. ಅಲ್ಲದೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ತಾಲೂಕು ಕಚೇರಿಯ ಮುಂಭಾಗದಲ್ಲಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶದ ವಿರುದ್ಧ ಧಿಕ್ಕಾರ ಕೂಗುತ್ತ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಚೀಲೂರು ಮುನಿರಾಜು ರಾಜ್ಯ ಕಳೆದ ವರ್ಷವೂ ತೀವ್ರವಾದ ಬರಗಾಲ ಎದುರಿಸಿದೆ. ನಮ್ಮ ರಾಜ್ಯದ ಅಣೆಕಟ್ಟೆಗಳಲ್ಲಿ ಕುಡಿಯುವ ನೀರಿಗಷ್ಟೇ ಲಭ್ಯವಿರುವ ನೀರನ್ನು ತಮಿಳುನಾಡಿಗೆ ಬಿಡುವಂತೆ ಮಾಡುವ ಆದೇಶ ತಾರತಮ್ಯದ್ದಾಗಿದೆ ಎಂದರು.
ರಾಜಕೀಯ ಪ್ರೇರಿತ: ಪ್ರತಿ ವರ್ಷ ತಮಿಳುನಾಡು ಮೆಟ್ಟೂರು ಅಣೆಕಟ್ಟೆಯಲ್ಲಿ ಸುಮಾರು 18 ಟಿಎಂಸಿ ನೀರು ಸಂಗ್ರಹವಿದ್ದು, ಅಧಿಕಾರಿಗಳೇ ಅದನ್ನು ದೃಢಪಡಿಸಿದ್ದಾರೆ. ಸಂಗ್ರಹವಿರುವ ನೀರನ್ನು ಬಳಸುವ ಬದಲು ರಾಜ್ಯದಲ್ಲಿನ ಕುಡಿಯುವ ನೀರನ್ನು ಕಸಿದುಕೊಳ್ಳುವ ತಮಿಳುನಾಡಿನ ತಗಾದೆ ರಾಜಕೀಯ ಪ್ರೇರಿತವಾಗಿದೆ. ಇದನ್ನು ಪರಿಗಣಿಸದ ನಿರ್ವಹಣೆ ಪ್ರಾಧಿಕಾರ ರಾಜ್ಯದ ಕುಡಿಯುವ ನೀರನ್ನು ಕೇಳಿದರೆ, ನೀಡಲು ಸಾಧ್ಯವಿಲ್ಲ ಎಂದರು.
ಹೋರಾಟ ಅನಿವಾರ್ಯ: ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಗಿರಿಯಪ್ಪ ಮಾತನಾಡಿ, ಪ್ರತಿ ಬಾರಿಯೂ ಇಂತಹದ್ದೇ ಸನ್ನಿವೇಶವನ್ನು ಎದುರಿಸುತ್ತಿರುವ ರಾಜ್ಯ, ತಮಿಳುನಾಡಿನ ತಗಾದೆಯನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಅದಕ್ಕೆ ತಕ್ಕ ಪಾಠ ಕಲಿಸಲು ಸಾಧ್ಯವಾಗಿಲ್ಲ. ಇದಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಂಡಿಲ್ಲ. ರಾಜ್ಯದ ಜನತೆ ಕುಡಿಯುವ ನೀರಿನ್ನು ಕೇಳಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಆದೇಶ ಹಿಂಪಡೆಯಿರಿ: ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್ ಮಾತನಾಡಿ, ರಾಜ್ಯದಲ್ಲಿರುವ 28 ಮಂದಿ ಲೋಕಸಭೆ ಸದಸ್ಯರು ತಮ್ಮ ವೈಮನಸ್ಸನ್ನು ಮರೆತು ರಾಜ್ಯದ ಹಿತವನ್ನು ಕಾಪಾಡುವ ಪ್ರಯತ್ನ ಮಾಡಬೇಕು. ಈ ಸಂಬಂಧ ಪ್ರಧಾನಿ ಮೋದಿ ಬಳಿ ಚರ್ಚಿಸಿ, ರಾಜ್ಯದ ಜನತೆಗೆ ಕುಡಿಯುವುದಕ್ಕಾಗಿ ಇರುವ ನೀರನ್ನು ಹರಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟು ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಹಿತ ಕಾಯಲು ಆಗ್ರಹ: ಕನ್ನಡ ಸೇನೆ ತಾಲೂಕು ಅಧ್ಯಕ್ಷ ಜಯಸಿಂಹ ಮಾತನಾಡಿ, ಚುನಾವಣೆ ಮುಗಿದ ನಂತರ ಫಲಿತಾಂಶ ಬಂದಕೂಡಲೆ ಇಲ್ಲಿನ ಸಂಸದರು ನೋಡಿಕೊಳ್ಳುತ್ತಾರೆ ಎಂಬ ಮಾತನ್ನು ಆಡುವ ಮೂಲಕ ರಾಜ್ಯದ ಮಂತ್ರಿಗಳು ತಮ್ಮ ಜವಾಬ್ದಾರಿ ಮರೆತು ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಜನ ತಕ್ಕ ಪಾಠ ಕಲಿಸಿದ್ದಾರೆ ಇದನ್ನೇ ಮುಂದುವರಿಸಿದರೆ ಮತ್ತಷ್ಟು ಪಾಠ ಕಲಿಸುತ್ತಾರೆ. ಇವೆಲ್ಲ ಬಿಟ್ಟು ಜವಾಬ್ದಾರಿಯಿಂದ ರಾಜ್ಯ ಜನತೆಯ ಹಿತ ಕಾಯಲು ಬದ್ಧರಾಗಿಬೇಕು ಎಂದು ಆಗ್ರಹಿಸಿದರು. ಈ ಮನವಿಯನ್ನು ತಹಸೀಲ್ದಾರ್ ಮೂಲಕ ಸರಕಾರಕ್ಕೆ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ರೈತರ ಸಂಘದ ತಾಲೂಕು ಅಧ್ಯಕ್ಷ ರಾದ ಶಶಿಕುಮಾರ್, ಸ್ವತಂತ್ರ ರಕ್ಷಣಾ ವೇದಿಕೆ ಆಂಗಡಿ ಕುಮಾರ್ ಇತರರು ಇದ್ದರು.