Advertisement

ಎನ್‌ಡಿಎಗೆ ಬಹುಮತ ಕೊರತೆಯಾದ್ರೆ ರಾಷ್ಟ್ರಪತಿ ಮೊರೆಹೋಗಲು ವಿಪಕ್ಷ ತಂತ್ರ

06:49 AM May 23, 2019 | mahesh |

ಎನ್‌ಡಿಎಗೆ ಬಹುಮತ ಲಭ್ಯವಾಗದೇ ಇದ್ದರೆ, ಗುರುವಾರವೇ ಸರ್ಕಾರ ರಚನೆಗೆ ಆಹ್ವಾನ ಕೋರಿ ರಾಷ್ಟ್ರಪತಿ ಭವನದ ಬಾಗಿಲು ಬಡಿಯಲು ವಿಪಕ್ಷಗಳು ಸಿದ್ಧತೆ ನಡೆಸಿಕೊಳ್ಳುತ್ತಿವೆ. ಕಳೆದ ವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷದ ಇತರ ನಾಯಕರಾದ ಅಹಮದ್‌ ಪಟೇಲ್, ಅಭಿಷೇಕ್‌ ಸಿಂಘ್ವಿ ವಿವರವಾದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಇತರ ಪಕ್ಷಗಳು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿ ಸಲ್ಲಿಸುವ ಪತ್ರದ ಕರಡು ಪ್ರತಿಯನ್ನೂ ತಯಾರಿಸಲಾಗಿದ್ದು, ಅದನ್ನು ಮೊದಲೇ ಪಕ್ಷಗಳ ಮುಖಂಡರ ಮನೆಗೆ ತಲುಪಿಸಿ ಸಹಿ ಪಡೆಯುವ ಸಾಧ್ಯತೆಯಿದೆ.

Advertisement

ಕರ್ನಾಟಕದ ಮಾದರಿಯಲ್ಲೇ ತಕ್ಷಣವೇ ಸಾಧ್ಯವಾದಷ್ಟೂ ಇತರ ಪಕ್ಷಗಳ ಬೆಂಬಲವನ್ನು ಪಡೆದು ಸರ್ಕಾರ ರಚನೆಗೆ ಸಿದ್ಧವಿದ್ದೇವೆ ಎಂದು ರಾಷ್ಟ್ರಪತಿಯನ್ನು ಕೋರುವುದು ಕಾಂಗ್ರೆಸ್‌ನ ಸದ್ಯದ ಯೋಜನೆ. ಕರ್ನಾಟಕದಲ್ಲಿ ಜೆಡಿಎಸ್‌ ಜೊತೆಯೂ ಇದೇ ರೀತಿ ತಕ್ಷಣ ಮೈತ್ರಿ ಮಾಡಿಕೊಳ್ಳಲಾಗಿತ್ತು. ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತವಿರಲಿಲ್ಲ. ಬಿಜೆಪಿಯನ್ನೇ ರಾಜ್ಯಪಾಲರು ಸರ್ಕಾರ ರಚನೆಗೆ ಆಗ್ರಹಿಸಿದ್ದರು. ಆದರೆ ಜೆಡಿಎಸ್‌ಗೆ ಬೆಂಬಲ ನೀಡಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲಾಗಿತ್ತು. ಸಾಮಾನ್ಯವಾಗಿ ಚುನಾವಣಾ ಆಯೋಗವು ರಾಷ್ಟ್ರಪತಿಗೆ ಅಧಿಕೃತವಾಗಿ ಸೂಚನೆ ನೀಡಿ, ಸರ್ಕಾರ ರಚನೆಗೆ ದೊಡ್ಡ ಪಕ್ಷವನ್ನು ಆಹ್ವಾನಿಸುವ ವರೆಗೂ ಕಾಯುತ್ತವೆ. ಆದರೆ ಇದಕ್ಕೆ ಅವಕಾಶ ಕೊಡದೇ ಇರುವುದು ಸದ್ಯ ಕಾಂಗ್ರೆಸ್‌ನ ಕಾರ್ಯತಂತ್ರವಾಗಿದೆ. 2004 ರಲ್ಲೂ ಕಾಂಗ್ರೆಸ್‌ಗೆ ಬಹುಮತ ಬರದೇ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ಆಗಿನ ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದರು. ಆಗ ಕಾಂಗ್ರೆಸ್‌ ತಕ್ಷಣವೇ ಇತರ ಪಕ್ಷಗಳಿಂದ ಪೂರ್ವ ನಿಗದಿತ ನಮೂನೆಯ ಬೆಂಬಲ ಪತ್ರಕ್ಕೆ ಸಹಿ ಪಡೆದಿತ್ತು. ಈ ಬಾರಿಯೂ ಇದೇ ವಿಧಾನದ ಬಗ್ಗೆ ಚಿಂತನೆ ನಡೆಸಲಾಗಿದ್ದು, ಚಂದ್ರಬಾಬು ನಾಯ್ಡು, ಯೆಚೂರಿ, ಅಖೀಲೇಶ್‌ ಮತ್ತು ಮಾಯಾವತಿ ಚರ್ಚೆ ನಡೆಸಿದ್ದಾರೆ.

ಫೋನ್‌ನಲ್ಲೇ ಶರದ್‌ ಪವಾರ್‌ ಮೈತ್ರಿ ಮಾತುಕತೆ
ಮತಗಟ್ಟೆ ಸಮೀಕ್ಷೆ ಪ್ರಕಟವಾಗುತ್ತಿದ್ದಂತೆಯೇ ಮುಂಬೈನಲ್ಲಿ ಕುಳಿತ ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಫೋನ್‌ ಕರೆಗಳಲ್ಲಿ ನಿರತರಾಗಿ ದ್ದರು. ಬಿಜೆಪಿ-ಕಾಂಗ್ರೆಸ್‌ ಜತೆ ಗುರುತಿಸಿ ಕೊಳ್ಳದೇ ಅಂತರ ಕಾಯ್ದುಕೊಂಡಿರುವ 3 ಪಕ್ಷಗಳ ಮುಖಂಡರ ಜೊತೆಗೆ ಸಂಪರ್ಕ ಸಾಧಿಸಲು ಪವಾರ್‌ ಯತ್ನಿಸುತ್ತಿದ್ದರು. ಬಿಜು ಜನತಾ ದಳ, ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖಂಡರನ್ನು ಅವರು ಮಾತನಾಡಿಸಿದ್ದಾರೆ. ಆದರೆ ವೈಎಸ್‌ಆರ್‌ಸಿಪಿ ಜಗನ್‌ ರೆಡ್ಡಿ ವಿದೇಶಕ್ಕೆ ತೆರಳಿದ್ದರಿಂದ ಮಾತುಕತೆ ಸಾಧ್ಯವಾಗಲಿಲ್ಲ. ಬಿಜೆಡಿಯ ಪಟ್ನಾಯಕ್‌ ಮತ್ತು ಟಿಆರ್‌ಎಸ್‌ನ ಕೆಸಿಆರ್‌ ಜೊತೆಗೆ ಸುದೀರ್ಘ‌ ಮಾತುಕತೆ ನಡೆಸಿದ್ದಾರೆ. ಪಟ್ನಾಯಕ್‌ ಹಾಗೂ ಕೆಸಿಆರ್‌ ಇಬ್ಬರೂ ಅಗತ್ಯ ಬಿದ್ದರೆ ಯುಪಿಎ ಗೆ ಬೆಂಬಲ ವ್ಯಕ್ತಪಡಿಸುವು ದಾಗಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ. ಆದರೆ ಬಿಜೆಡಿ,ಟಿಆರ್‌ಎಸ್‌ ಇದನ್ನು ಅಲ್ಲಗಳೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next