Advertisement

ಕೇಂದ್ರ ಸಚಿವನಾಗುವ ಅವಕಾಶ ಕೈತಪ್ಪಿತು

01:11 AM May 15, 2019 | Lakshmi GovindaRaj |

ಬೆಂಗಳೂರು: ನಾನು ಈ ಬಾರಿ ಗೆದ್ದು, ಕೇಂದ್ರ ಸಚಿವನಾಗುವ ಅವಕಾಶ ಕೈ ತಪ್ಪಿ ಹೋಯಿತು ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ವೀರಯ್ಯ ಬೇಸರ ವ್ಯಕ್ತಪಡಿಸಿದರು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಹ.ಚ.ನಟೇಶ್‌ ಬಾಬು ಅವರ “ಲೈಫ್ ಸೂಪರ್‌ ಗುರು’ ಅನುವಾದಿತ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

Advertisement

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಜನರಿಗೆ ಬೇಕಾಗುವಂತಹ ವ್ಯಕ್ತಿಗಳು ಸ್ಪರ್ಧಿಸಲು ಟಿಕೆಟ್‌ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜಕಾರಣದಲ್ಲಿ ಕಾಲೆಳೆಯುವಿಕೆ ಸಾಮಾನ್ಯವಾಗಿದೆ. ವಿಧಾನ ಪರಿಷತ್‌ ಸದಸ್ಯನಾಗಿ ಜನಪರ ಕೆಲಸ ಮಾಡಿದ್ದೇನೆ. ಹಲವು ಚುನಾವಣೆ ಎದುರಿಸಿದ್ದೇನೆ. ದಲಿತ ಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೂ, ಟಿಕೆಟ್‌ ಕೈ ತಪ್ಪಿಸಲಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್‌ ನೀಡಿದ್ದರೆ, ಗೆದ್ದು ಕೇಂದ್ರ ಸಚಿವನಾಗುತ್ತಿದ್ದೆ ಎಂದು ಹೇಳಿದರು.

ಬದುಕು ಕಲಿಸುವ ಸಾಹಿತ್ಯ ಬೇಕಾಗಿದೆ: ಇಂದಿನ ದಿನಗಳಲ್ಲಿ ಪ್ರಕೃತಿ, ವ್ಯಕ್ತಿಗಳ ವರ್ಣನೆ ಕುರಿತ ಸಾಹಿತ್ಯಗಳೇ ಹೆಚ್ಚಾಗಿವೆ. ಅಂತಹ ಸಾಹಿತ್ಯಗಿಂತ ಬದುಕು ರೂಪಿಸಿಕೊಳ್ಳುವ, ಜೀವನ ನಿರ್ವಹಣೆ ಬಗ್ಗೆ ತಿಳಿವಳಿಕೆ, ಅರಿವು ಮೂಡಿಸುವ ಹೆಚ್ಚು ಕೃತಿಗಳು ಬರುವಂತಾಗಲಿ ಎಂದು ವೀರಯ್ಯ ಆಶಿಸಿದರು.

ಕನ್ನಡ ಸಾಹಿತ್ಯಲೋಕದಲ್ಲಿ ಮತ್ಸರ ಕಂಡು ಬರುತ್ತಿದ್ದು, ಇದು ಆರೋಗ್ಯಕರ ಬೆಳವಣಿಗೆಯಲ್ಲ. ಈ ಹಿಂದೆ ಸಾಹಿತ್ಯ ಲೋಕದಲ್ಲಿ ಹಿರಿಯರು ಕಿರಿಯರನ್ನು ಬೆನ್ನು ತಟ್ಟಿ ಬೆಳೆಸುತ್ತಿದ್ದರು. ಈಗ ಆ ಪ್ರವೃತ್ತಿ ಕಡಿಮೆಯಾಗುತ್ತಿದೆ. ನಾನು ಲೇಖನಗಳನ್ನು ಬರೆಯುತ್ತಿದ್ದ ದಿನಗಳಲ್ಲಿ ಹಿರಿಯ ಸಾಹಿತಿಗಳು ಪ್ರೋತ್ಸಾಹಿಸುತ್ತಿದ್ದರು ಎಂದು ಹೇಳಿದರು.

ಹಿರಿಯ ಲೇಖಕ ಎಲ್‌.ಎನ್‌.ಮುಕುಂದರಾಜ್‌ ಮಾತನಾಡಿ, ಕನ್ನಡ ಅದ್ಭುತ ಭಾಷೆಯಾಗಿದ್ದು, ಯಾವುದೇ ಭಾಷೆಯ ಪದ ಕೊಟ್ಟರೂ ಅದನ್ನು ತನ್ನೊಡಲಿಗೆ ಸೇರಿಸಿಕೊಂಡು ಹೆಮ್ಮರವಾಗಿ ಬೆಳೆದು ನಿಂತಿದೆ. ಪರ್ಷಿಯನ್‌ ಮತ್ತು ಸಂಸ್ಕೃತ ಭಾಷೆಯ ಹಲವು ಪದಗಳು ಕನ್ನಡದ ಪದಗಳೇ ಆಗಿ ಹೋಗಿವೆ. “ಲೈಫ್ ಸೂಪರ್‌ ಗುರು’ ಉತ್ತಮ ಕೃತಿಯಾಗಿದ್ದು, ಜೀವನದ ಮೌಲ್ಯಗಳನ್ನು ಹೇಳಲಾಗಿದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಈ ಕೃತಿ ಸಹಕಾರಿಯಾಗಲಿದೆ ಎಂದು ನುಡಿದರು.

Advertisement

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಾಯಣ್ಣ ಮಾತನಾಡಿ, ಸರ್ಕಾರಕ್ಕೆ ಎಲ್ಲರನ್ನು ಗುರುತಿಸಿ ಗೌರವಿಸಲು ಆಗುವುದಿಲ್ಲ. ಆ ಹಿನ್ನೆಲೆಯಲ್ಲಿ ಸಾಹಿತ್ಯ ಪರಿಷತ್ತು ಹಲವು ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿದೆ ಎಂದರು. ಇದೇ ವೇಳೆ ಕನ್ನಡ ಸೇವೆ ಮಾಡಿದ ಹಲವು ಸಾಧಕರನ್ನು ಗೌರವಿಸಲಾಯಿತು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ತಿಮ್ಮಯ್ಯ, ಲೇಖಕ ಹ.ಚ.ನಟೇಶ್‌ಬಾಬು, ಸುಬ್ರಹ್ಮಣ್ಯಂ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next