Advertisement

ಈ ಕ್ಷಣದ ಅವಕಾಶ ಮತ್ತೆಂದೂ ಒದಗಲಾರದು

11:26 PM Dec 21, 2020 | mahesh |

ಜಗತ್ತನ್ನು ಗೆಲ್ಲಲು ಹೊರಟ ಚಕ್ರವರ್ತಿ ಅಲೆಕ್ಸಾಂಡರ್‌ ನಿಮಗೆ ಗೊತ್ತಿರಬಹುದು. ಭೂಲೋಕದ ಬಹುಭಾಗವನ್ನು ಗೆದ್ದನಾಗಿದ್ದರೂ ಅವನ ಶವಯಾತ್ರೆಯಲ್ಲಿ ಎರಡು ಖಾಲಿ ಕೈಗಳು ಹೊರಚಾಚಿದ್ದವಂತೆ. ನಾವು ಇಲ್ಲಿಗೆ ಬರುವಾಗ ಏನನ್ನೂ ತರುವುದಿಲ್ಲ, ಹೋಗುವಾಗ ಏನನ್ನೂ ಕೊಂಡುಹೋಗು ವುದಿಲ್ಲ ಎಂದು ಇದು ಸೂಚಿಸುವಂತಿದೆ. ಅದಕ್ಕೆ ಮುನ್ನ ನಡೆದ ಇನ್ನೊಂದು ಕಥೆ ಇದು.

Advertisement

ಅಲೆಕ್ಸಾಂಡರನ ಸಮಕಾಲೀನನಾಗಿದ್ದ ತಣ್ತೀಜ್ಞಾನಿ ಡಯೊಜನೀಸ್‌. ಆತನೊಬ್ಬ ನಗ್ನ ಫ‌ಕೀರ, ಅವಧೂತ. ತನ್ನೊಳಗನ್ನು ಹುಡುಕುತ್ತ ಆತ ಎಲ್ಲವನ್ನೂ ತ್ಯಾಗ ಮಾಡಿದ್ದ; ವಸ್ತ್ರವನ್ನೂ. ಭಿಕ್ಷೆಗಾಗಿ ಒಂದು ಬೋಗುಣಿ ಮಾತ್ರ ಅವನ ಬಳಿ ಇತ್ತು.

ಒಂದು ದಿನ ಡಯೋ ಜನೀಸ್‌ಗೆ ನಾಯಿ ಕೊಳ ದಿಂದ ನೀರು ಕುಡಿಯು ವುದು ಕಂಡಿತು. ಆ ಕ್ಷಣವೇ ಆತ ಭಿಕ್ಷೆ ಎತ್ತುವ ಬೋಗುಣಿ ಯನ್ನೂ ತ್ಯಜಿಸಿ ಬಿಟ್ಟಿದ್ದ. ಇಂಥ ಡಯೋಜನೀಸ್‌ಬಗ್ಗೆ ಅಲೆಕ್ಸಾಂಡರನ ಕಿವಿಗೆ ಆಗಾಗ ಸುದ್ದಿಗಳು ಬಂದು ಬೀಳುತ್ತಿದ್ದವು. ಆತನನ್ನು ನೋಡಬೇಕು ಎಂಬ ಹಂಬಲ ಹುಟ್ಟಿತು. ಅಲೆಗ್ಸಾಂಡರ್‌ ವಂಧಿಮಾಗಧರ ಬೆಂಗಾವಲಿನಲ್ಲಿ ಡಯೋಜ ನೀಸ್‌ನನ್ನು ಕಂಡಾಗ ಆತ ನಗ್ನನಾಗಿ ಸೂರ್ಯ ರಶ್ಮಿಗಳಿಗೆ ಮೈಯೊಡ್ಡಿ ನದಿ ದಂಡೆಯಲ್ಲಿ ಮಲಗಿದ್ದ. ಅದನ್ನು ಕಂಡು ಅಲೆಕ್ಸಾಂಡರ್‌ಗೆ ಪಿಚ್ಚೆನಿಸಿತು. “ನಿಮಗೇನು ಬೇಕು ಹೇಳಿ, ನಾನು ಚಕ್ರವರ್ತಿ ಅಲೆಕ್ಸಾಂಡರ್‌’ ಎಂದನಾತ.

ಡಯೋಜನೀಸ್‌ನ ಉತ್ತರ ಕಪಾಳಕ್ಕೆ ಬಾರಿಸಿದ ಹಾಗಿತ್ತು, “ನನಗೇನೂ ಬೇಡ. ನನ್ನ ಮತ್ತು ಸೂರ್ಯನ ನಡುವೆ ಅಡ್ಡವಾಗಿ ನಿಂತಿದ್ದೀ, ಸ್ವಲ್ಪ ಈಚೆಗೆ ಬಾ. ಅದೊಂದೇ ನನಗೆ ನೀನು ಮಾಡಬೇಕಿರುವ ಉಪಕಾರ’.

ಅಲೆಕ್ಸಾಂಡರ್‌ ಸಿಟ್ಟಿಗೇಳಬಹುದಿತ್ತು. ಆದರೆ ಡಯೋಜನೀಸ್‌ಸ ಮುಖ ಪ್ರಾಮಾಣಿಕವಾಗಿತ್ತು, ಅವನ ಸುತ್ತಲೂ ಅಲೌಕಿಕ ಪ್ರಭೆಯನ್ನು ಯಾರೂ ಕಾಣಬಹು ದಿತ್ತು, ಅವನ ಆತ್ಮ ಸೌಂದರ್ಯ ಅವನ ಮುಖದಲ್ಲಿ ಮಿನುಗುತ್ತಿತ್ತು. ಅಲೆಕ್ಸಾಂಡರ್‌ ತಲೆಬಾಗಿ, “ಮುಂದಿನ ಜನ್ಮದಲ್ಲಿ ನಾನು ಡಯೋಜನೀಸ್‌ ಆಗಿ ಹುಟ್ಟಲೆಂದು ದೇವರಲ್ಲಿ ಪ್ರಾರ್ಥಿಸುವೆ’ ಎಂದ.

Advertisement

“ಮುಂದಿನ ಜನ್ಮವೇಕೆ, ಈ ಜನ್ಮದಲ್ಲೇ ನೀನು ನನ್ನ ಹಾಗೆ ಆಗಬಹುದು. ನೀನೀಗ ದಿಗ್ವಿಜಯದಲ್ಲಿದ್ದೀಯಲ್ಲ. ಕಾಲಿಗೆ ಚಕ್ರ ಕಟ್ಟಿ ಕೊಂಡಂತೆ ತಿರುಗಾಡುತ್ತಿದ್ದೀಯಲ್ಲ, ಏಕೆ’ ಪ್ರಶ್ನೆ ತೂರಿಬಂತು. “ನನಗೆ ಮಧ್ಯಪ್ರಾಚ್ಯವನ್ನು ಗೆಲ್ಲಬೇಕಿದೆ, ಆ ಬಳಿಕ ಭಾರತ, ಆಮೇಲೆ ದೂರ ಪೂರ್ವದ ದೇಶಗಳು…’ ಅಲೆಕ್ಸಾಂಡರ್‌ ಉಸುರಿದ. ಆತ ಒಂದೊಂದೇ ಪ್ರದೇಶ ಗಳ ಹೆಸರು ಹೇಳುತ್ತಿದ್ದಂತೆ ಡಯೋಜನೀಸ್‌ ಆಮೇಲೆ, ಆಮೇಲೆ ಎಂದು ಕೇಳುತ್ತಲೇ ಇದ್ದ. ಕೊನೆಯಲ್ಲಿ ಎಲ್ಲ ಖಂಡಗಳ ಹೆಸರನ್ನೂ ಹೇಳಿದ ಬಳಿಕ ಅಲೆ ಕ್ಸಾಂಡರ್‌, “ಆಮೇಲೆ ನಾನು ವಿಶ್ರಾಂತಿ ಪಡೆಯಬೇಕು’ ಎಂದ.

“ಆ ವಿಶ್ರಾಂತಿಯನ್ನು ಈಗಲೇ ಪಡೆಯ ಬಹುದಲ್ಲವೆ! ಈ ನದಿ ದಂಡೆ ವಿಶಾಲವಾಗಿದೆ. ಬಾ ಇಲ್ಲಿ ವಿಶ್ರಮಿಸು’ ಎಂದು ಕರೆದ.
“ಇಲ್ಲ ನಾನು ದಿಗ್ವಿಜಯಕ್ಕೆ ಹೊರಟಾಗಿದೆ. ಈಗ ಹಿಂದಿರುಗಲಾಗದು. ಎಲ್ಲವನ್ನೂ ಗೆದ್ದ ಬಳಿಕ ಬರುತ್ತೇನೆ’ ಎಂದು ಹೇಳಿ ಅಲ್ಲಿಂದ ಹೊರಟ ಅಲೆಕ್ಸಾಂಡರ್‌. ಡಯೋಜನೀಸ್‌ ಕೂಗಿ ಕರೆದು ಹೇಳಿದ, “ನೆನಪಿಡು, ಈಗ ವಿಶ್ರಮಿಸಲಾಗದವನು, ಈ ಕ್ಷಣದಲ್ಲಿ ಅರಿವನ್ನು ಹೊಂದದವನು ಮತ್ತೆಂದೂ ಅದನ್ನು ಹೊಂದಲು ಸಾಧ್ಯವಿಲ್ಲ. ಈಗ ನಿನ್ನಲ್ಲಿ ಅರಿವು ಉದಯಿಸದಿದ್ದರೆ ಮತ್ತೆಂದೂ ಆ ಅವಕಾಶ ಸಿಗುವುದಿಲ್ಲ’.

ಅಲೆಕ್ಸಾಂಡರ್‌ ಏನೂ ಉತ್ತರಿಸದೆ ಅಲ್ಲಿಂದ ಹೊರಟ. ದಿಗ್ವಿಜಯದ ನಡುವೆ ಅಸುನೀಗಿದ. ಅವನ ಶವಯಾತ್ರೆಯಲ್ಲಿ ಎಲ್ಲರಿಗೂ ಕಾಣಿಸುವಂತಿದ್ದುದು ಎರಡು ಬರಿದಾದ ಕೈಗಳು.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next