ಹುಣಸೂರು: ನಗರದ ಬ್ರಾಹ್ಮಣರ ಬೀದಿಯ ಗುರುರಾಘವೇಂದ್ರ ಮಠದ ಸಭಾ ಭವನವನ್ನು ಉಡುಪಿ ಪೇಜಾವರ ಶ್ರೀ ಹಾಗೂ ವಿಶ್ವ ಪ್ರಸನ್ನ ತೀರ್ಥ ಸ್ವಾಮಿ ಸಮ್ಮುಖದಲ್ಲಿ ಶುಕ್ರವಾರ ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು. ಶುಕ್ರವಾರ ಬೆಳಗಿನ ಜಾವದಿಂದಲೇ ಸಭಾಭವನದಲ್ಲಿ ವಿವಿಧ ಹೋಮ, ಹವನ ನೆರವೇರಿಸಲಾಯಿತು. ಬಳಿಕ ಸ್ವಾಮಿಗಳು ದೇವರಿಗೆ ಸಂಸ್ಥಾನ ಪೂಜೆ ನೆರವೇರಿಸಿದರು.
ಬಳಿಕ ಧಾರ್ಮಿಕ ಸಭೆಯಲ್ಲಿ ಪ್ರವಚನ ನೀಡಿದ ಪೇಜಾವರ ಶ್ರೀ, ಹುಣಸೂರಲ್ಲಿ ರಾಯರ ಪ್ರೇರಣೆಯಿಂದ ಭಕ್ತರು ಹಾಗೂ ದಾನಿಗಳ ನೆರವಿನಿಂದ ಸುಂದರ ಮೃತಿಕಾ ಬೃಂದಾವನದ ಮಠ ನಿರ್ಮಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಭಾ ಭವನ ನಿರ್ಮಿಸಿರುವುದು ಹೆಮ್ಮೆಯ ವಿಷಯ.
ಮಠ ದೇವರ ಸೇವೆಗಿದ್ದರೆ, ಸಭಾ ಭವನ ಲೋಕಕಲ್ಯಾಣಕ್ಕಾಗಿ ಬಳಸಿಕೊಳ್ಳಬಹುದು. ಭವನದಲ್ಲಿ ಸಾಮಾಜಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಬಹುದು. ಒಂದು ದೇವರ ಭವನ ಮತ್ತೂಂದು ಭಕ್ತರ ಭವನ ಒಂದೆಡೆ ನಿರ್ಮಿಸಿರುವುದು ಎರಡೂ ಕಾರ್ಯಗಳಿಗೆ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೇಜಾವರ ಮಠದ ಕಿರಿಯ ಶ್ರೀ ವಿಶ್ವ ಪ್ರಸನ್ನ ತೀರ್ಥಸ್ವಾಮಿ ಮಾತನಾಡಿ, ಈ ಮಠ, ಸಭಾ ಭವನ ಭಗವಂತನ ಕೃಪೆಯಿಂದ ನಿರ್ಮಾಣವಾಗಿವೆ. ಭಕ್ತರು ಕೈಜೋಡಿಸಿದರೆ ಇಂತಹ ಭವನಗಳು ನಿರ್ಮಾಣಗೊಳ್ಳಲಿವೆ ಎಂದರು. ಬಳಿಕ ಡಾ.ಹ.ರ.ನಾಗರಾಜಾಚಾರ್ ಪ್ರವಚನ ನೀಡಿದರು. ಬೆಂಗಳೂರು ನಾಗರಬಾವಿಯ ಅಂಬಿಕಾ ಮತ್ತು ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ವೇಳೆ ನಗರಸಭಾ ಅಧ್ಯಕ್ಷ ಎಚ್.ವೈ.ಮಹದೇವ್, ಸಮಿತಿ ಕಾರ್ಯದರ್ಶಿ ಎ.ಎಸ್.ಸತೀಶ್, ಅಧ್ಯಕ್ಷ ವಾದಿರಾಜ ಭಟ್, ನಗರಸಭಾ ಸದಸ್ಯೆ ಸುನಿತಾ, ಬ್ಯಾಂಕ್ ಸತ್ಯನಾರಾಯಣರಾವ್, ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವಕೀಲ ಸಿ.ಎಸ್.ಶ್ರೀಧರ್, ವಿಪ್ರವನಿತಾ ಸಮಾಜದ ಅಧ್ಯಕ್ಷೆ ಸತ್ಯವತಿ, ಮಠದ ಟ್ರಸ್ಟಿ ನಾಗರಾಜ್, ದಾನಿ ವಿದ್ಯಾಪ್ರಕಾಶ್, ರಾಜಾರಾಂ, ಸುಬ್ರಹ್ಮಣ್ಯ ಇತರರಿದ್ದರು.