Advertisement
ಸಿಬಿಐನಲ್ಲಿನ ಈ ಆಂತರಿಕ ಸಂಘರ್ಷದ ವಿಚಾರವನ್ನು ಕೇಂದ್ರ ಸರಕಾರ ನಿರ್ವಹಿಸಿದ ರೀತಿ ಒಂದಿಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದಂತೂ ಸುಳ್ಳಲ್ಲ. ಆದರೆ ಇದೀಗ ಅಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಸರಕಾರ ಸಿಬಿಐಗೆ ನೀಡಲಾಗಿದ್ದ “ಮುಕ್ತ ಸಮ್ಮತಿ’ಯನ್ನು ಹಿಂಪಡೆದುಕೊಂಡಿರುವುದು ಮತ್ತೆ ತನಿಖಾ ಸಂಸ್ಥೆಯ ಸ್ವಾಯತ್ತೆಯ ಬಗೆಗೇ ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ.
Related Articles
Advertisement
ಈ ಹಿಂದೆಯೂ ರಾಜ್ಯ ಸರಕಾರಗಳು ಸಿಬಿಐಗೆ ನೀಡಿದ್ದ “ಮುಕ್ತ ಸಮ್ಮತಿ’ಯನ್ನು ವಾಪಸ್ ಪಡೆದಿರುವ ಉದಾಹರಣೆಗಳು ಸಾಕಷ್ಟಿವೆ. 1990ರ ದಶಕದಲ್ಲಿ ಕರ್ನಾಟಕದ ಜೆ.ಎಚ್.ಪಟೇಲ್ ಸರಕಾರ ಇಂಥದ್ದೇ ನಿರ್ಧಾರವನ್ನು ಕೈಗೊಂಡಿತ್ತು.
ಸ್ವತಂತ್ರ ತನಿಖಾ ಸಂಸ್ಥೆ ಎಂದು ಗುರುತಿಸಲ್ಪಟ್ಟಿದ್ದರೂ ಇದು ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸುತ್ತಾ ಬಂದಿದೆ. ಆಡಳಿತಾರೂಢ ಸರಕಾರಗಳು ಸಿಬಿಐಯನ್ನು ತಮ್ಮ ರಾಜಕೀಯ ದಾಳವನ್ನಾಗಿ ಪರಿಗಣಿಸುತ್ತಲೇ ಬಂದಿವೆ. ಕಳೆದ ಹಲವಾರು ದಶಕಗಳಿಂದ ಬಹುತೇಕ ಎಲ್ಲ ಆಡಳಿತ ಪಕ್ಷಗಳು ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಸಿಬಿಐಯನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡಿವೆ. ಈ ಹಿಂದಿನ ಯುಪಿಎ ಆಡಳಿತದ ಅವಧಿಯಲ್ಲಿ ಸಿಬಿಐನ ಸ್ವಾಯತ್ತೆಯ ಬಗೆಗೆ ಸುಪ್ರೀಂ ಕೋರ್ಟ್ ಹಲವು ಬಾರಿ ಕೇಂದ್ರ ಸರಕಾರವನ್ನು ಪ್ರಶ್ನಿಸಿತ್ತಲ್ಲದೆ ಕೇಂದ್ರ ಸರಕಾರ ಸಿಬಿಐಯನ್ನು “ಪಂಜರದ ಗಿಣಿ’ಯನ್ನಾಗಿಸಿದೆ ಎಂದು ಚಾಟಿ ಬೀಸಿತ್ತು. ಇದರ ಹೊರತಾಗಿಯೂ ಸರಕಾರಗಳು ಮತ್ತು ರಾಜಕೀಯ ಪಕ್ಷಗಳ ಧೋರಣೆಯಲ್ಲಿ ಬದಲಾವಣೆ ಕಂಡು ಬಾರದೇ ಇರುವುದರಿಂದ ಸಿಬಿಐ ಇಂದಿಗೂ ಕೇಂದ್ರ ಸರಕಾರದ ಕಪಿಮುಷ್ಠಿಯಲ್ಲಿದೆ. ಇಡೀ ಗೊಂದಲದ ಕೇಂದ್ರಬಿಂದುವಾಗಿರುವ ದಿಲ್ಲಿ ವಿಶೇಷ ಪೊಲೀಸ್ ಕಾಯಿದೆ ವ್ಯಾಪ್ತಿಯಿಂದ ಸಿಬಿಐಯನ್ನು ಹೊರತರುವುದೇ ಅಲ್ಲದೆ ಕೇಂದ್ರ ಸರಕಾರದ ಅಧೀನದಿಂದಲೂ ಮುಕ್ತಗೊಳಿಸಬೇಕಿದೆ. ಒಕ್ಕೂಟ ವ್ಯವಸ್ಥೆಯ ನೆಪವೊಡ್ಡಿ ತನಿಖಾ ಸಂಸ್ಥೆಗಳನ್ನು ರಾಜಕೀಯ ದಾಳಗಳನ್ನಾಗಿ ಬಳಸಿಕೊಳ್ಳುವ ಆಡಳಿತ ಪಕ್ಷಗಳ ಚಾಳಿಗೆ ಪೂರ್ಣ ವಿರಾಮ ಹಾಕಲು ಸಿಬಿಐಯನ್ನು ಸ್ವತಂತ್ರ ಸಂಸ್ಥೆಯನ್ನಾಗಿಸಿ ಶಾಸನಾತ್ಮಕ ಅಧಿಕಾರವನ್ನು ನೀಡುವ ಅಗತ್ಯವಿದೆ. ಸ್ವಾಯತ್ತೆ ದುರುಪಯೋಗವಾಗದಂತೆ ತಡೆಯಲು ಸಿಬಿಐಯನ್ನು ನ್ಯಾಯಾಂಗದ ಅಧೀನ ಸಂಸ್ಥೆಯನ್ನಾಗಿಸಬೇಕಿದೆ. ಹೀಗಾದಲ್ಲಿ ಮಾತ್ರ ದೇಶದ ಜನತೆಯಲ್ಲಿ ಸಿಬಿಐನ ಮೇಲೆ ಮತ್ತೆ ವಿಶ್ವಾಸಾರ್ಹತೆ ಮೂಡಲು ಸಾಧ್ಯ.