ಬಳ್ಳಾರಿ: ಭೋಜನ ಕೂಟದಲ್ಲಿ ಒಂದಷ್ಟು ರಾಜಕೀಯ ಚರ್ಚೆಗಳು ನಡೆದ ಮಾತ್ರಕ್ಕೆ ಅದನ್ನು ಭಿನ್ನಮತ ಎನ್ನಲಾಗದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಉಮೇಶ್ ಕತ್ತಿ ಅವರ ಬೆಂಗಳೂರಿನ ಮನೆಯಲ್ಲಿ ಈಚೆಗೆ ಶಾಸಕರೊಂದಿಗೆ ಭೋಜನಕೂಟ ನಡೆದಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ 2 ತಿಂಗಳಿಂದ ಬೆಂಗಳೂರಿನಲ್ಲಿ ಯಾವುದೇ ಹೋಟೆಲ್‌ಗಳು ತೆರೆದಿಲ್ಲ. ಹೀಗಾಗಿ ಕೆಲ ಶಾಸಕರು ಕತ್ತಿ ಮನೆಯಲ್ಲಿ ಸೇರಿ ಊಟ ಮಾಡಿರಬಹುದು. ಈ ವೇಳೆ ಒಂದಷ್ಟು ರಾಜಕೀಯ ಚರ್ಚೆಗಳೂ ನಡೆದಿರಬಹುದು. ಅಷ್ಟು ಮಾತ್ರಕ್ಕೆ ಅದನ್ನು ಭಿನ್ನಮತ ಎನ್ನಲಾಗದು ಎಂದು ಸ್ಪಷ್ಟಪಡಿಸಿದರು.
ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಆರ್ಥಿಕ ತೊಂದರೆ ಎದುರಾಗಿದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರವಿರುವ ಕಾರಣ ಒಂದಷ್ಟು ಕೆಲಸ ಕಾರ್ಯಗಳು ನಡೆಯಲಿ ಎಂಬ ಉದ್ದೇಶದಿಂದ ಸಚಿವನಾಗಬೇಕೆಂಬ ಅಪೇಕ್ಷೆ ಎಲ್ಲರಿಗೂ ಇರುತ್ತದೆ. ಹಾಗಂತ ಅದನ್ನು ಭಿನ್ನಮತ ಎನ್ನಲಾಗದು. ಸಿಎಂ ಯಡಿಯೂರಪ್ಪ ನಮ್ಮ ನಾಯಕ ಅಲ್ಲ ಎಂಬ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಅಲ್ಲಗಳೆಯುವುದೂ ಇಲ್ಲ. ಅದು ಅವರ ಅಭಿಪ್ರಾಯ. ಆದರೆ ಸಿಎಂ ಯಡಿಯೂರಪ್ಪ ಮಾತ್ರ ನಮ್ಮ ಪ್ರಶ್ನಾತೀತ ನಾಯಕ ಎಂದರು.
ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರನಿಗೆ ರಾಜ್ಯಸಭೆ ಸ್ಥಾನ ಕೋರುತ್ತಿದ್ದಾರೆಂಬ ಮಾಹಿತಿಯಿದೆ. ಈ ವಿಷಯ ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು, ನಾವೆಲ್ಲರೂ ಒಳ್ಳೆಯ ಸ್ನೇಹಿತರು. ನಮ್ಮಲ್ಲಿ ಯಾವುದೇ ಗೊಂದಲ-ಭಿನ್ನಮತವಿಲ್ಲ. ವಿರೋಧ ಪಕ್ಷದವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.