ಹುಣಸೂರು: ಪರಿಸರ ಸಮತೋಲನದಲ್ಲಿ ಹುಲಿಯ ಪಾತ್ರ ಅಪಾರವಾಗಿದ್ದು, ಅಳಿವಿನಂಚಿನಲ್ಲಿರುವ ಹುಲಿಗಳ ಸಂತತಿಯನ್ನು ಸಂರಕ್ಷಣೆ ಮಾಡದಿದ್ದಲ್ಲಿ ಉಳಿಗಾಲವಿಲ್ಲವೆಂದು ಹುಣಸೂರು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸುರೇಂದ್ರ ಎಚ್ಚರಿಸಿದರು.
ವಿಶ್ವ ಹುಲಿ ದಿನಾಚರಣೆ ಅಂಗವಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಣಸೂರು ವಲಯದ ವತಿಯಿಂದ ನಗರದ ಚಿಕ್ಕಹುಣಸೂರು ಪ್ರೌಢಶಾಲಾ ವಿದ್ಯಾರ್ಥಿಗಳ ಮೂಲಕ ಜನರಲ್ಲಿ ಹುಲಿ ಬಗ್ಗೆ ಜಾಗೃತಿ ಮೂಡಿಸುವ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅರಣ್ಯದಲ್ಲಿ ಹುಲಿ ಪಾತ್ರ ಅತೀ ಮುಖ್ಯ,
ಇದರಲ್ಲಿ ಆಹಾರ ಸರಪಳಿ ಮುಖ್ಯವಾಗಿದ್ದು, ಮಾಂಸಹಾರಿ-ಸಸ್ಯಹಾರಿ ಪ್ರಾಣಿಗಳ ಸಮತೋಲನವಿರಲಿದೆ. ಇದರಿಂದ ಅರಣ್ಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರಿಯಾಗಲಿದ್ದು, ಅರಣ್ಯ ಸಂಪತ್ತು ವೃದ್ಧಿಸಲಿದೆ ಎಂದರು.
ವಿಶ್ವದಲ್ಲಿ ಶೇ.95ರಷ್ಟು ಹುಲಿ ಸಂತತಿ ನಾಶವಾಗಿದ್ದು, ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದ ನಂತರ ವನ್ಯಜೀವಿಗಳ ಭೇಟೆಗೆ ಸಂಪೂರ್ಣ ಕಡಿವಾಣ ಬಿದ್ದಿದೆ. ಹುಲಿಯನ್ನು ನಮ್ಮ ಹಾಗೂ ಮುಂದಿನ ಪೀಳಿಗೆಗಾಗಿ ಉಳಿಸಬೇಕಾದ ಅತ್ಯವಶ್ಯವಿದೆ ಎಂದು ಹೇಳಿದರು.
ಜಾಥಾದಲ್ಲಿ ಬೆಂಕಿಬಿತ್ತು ಕಾಡಿಗೆ-ಹುಲಿಬಂತು ನಾಡಿಗೆ, ಹುಲಿ ಇದ್ದಲ್ಲಿ-ಕಾಡು ಸಮದ್ದಿ, ವನ್ಯಜೀವಿಗಳೇ-ಪ್ರಕೃತಿಯಅಭರಣಗಳು ಎಂಬಿತ್ಯಾದಿ ಘೊಷಣೆ ಕೂಗಿ ಸಾರ್ವಜನಿಕರ ಗಮನ ಸೆಳೆದರು. ಡಿ.ಆರ್.ಎಫ್.ಓ.ಗಳಾದ ರತ್ನಾಕರ್,ವೀರಭದ್ರಯ್ಯ, ಅರಣ್ಯರಕ್ಷಕ ಮಂಜುನಾಥ್, ಪ್ರೌಢಶಾಲಾ ಶಿಕ್ಷಕ ಹರೀಶ್, ಮತ್ತು 40 ವಿದ್ಯಾರ್ಥಿಗಳು ಭಾಗವಹಿಸಿದ್ದರು.