Advertisement

ಪ್ರಾರ್ಥನೆ ಮಾಡಿದ ಮಾತ್ರಕ್ಕೆ ಸ್ಥಳ ಸ್ವಂತದ್ದಾಗದು

02:03 AM Aug 17, 2019 | Team Udayavani |

ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ಕುರಿತಂತೆ ನಡೆಯುತ್ತಿರುವ ನಿತ್ಯ ವಿಚಾರಣೆಯಲ್ಲಿ ಶುಕ್ರವಾರ ರಾಮ್‌ ಲಲ್ಲಾ ವಿರಾಜಮಾನ್‌ ಪರ ವಕೀಲರು ಮಹತ್ವದ ವಾದ ಮಂಡಿಸಿದ್ದಾರೆ. ಅಯೋಧ್ಯೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುತ್ತಿದ್ದರು ಎಂದ ಮಾತ್ರಕ್ಕೆ ಆ ಸ್ಥಳವೇ ಅವರದ್ದು ಎಂದು ಹೇಳಲಾಗದು. ಮುಸ್ಲಿಮರು ಬೀದಿ ಬದಿಗಳಲ್ಲೂ ಪ್ರಾರ್ಥನೆ ನಡೆಸುತ್ತಾರೆ ಎಂದ ಮಾತ್ರಕ್ಕೆ ಆ ಬೀದಿಗಳು ನಮ್ಮದೇ ಎಂದು ಹಕ್ಕು ಮಂಡಿಸಲು ಸಾಧ್ಯವೇ ಎಂದು ಹಿರಿಯ ವಕೀಲ ಸಿ.ಎಸ್‌.ವೈದ್ಯನಾಥನ್‌ ಪ್ರಶ್ನಿಸಿದ್ದಾರೆ. ಅಲ್ಲದೆ, ಅಯೋಧ್ಯೆಯಲ್ಲಿ ಕಟ್ಟಡ, ಸ್ತಂಭಗಳು, ದೇವರ ಮೂರ್ತಿಗಳು ಹಿಂದೂಗಳದ್ದಾಗಿದೆ ಎಂದೂ ಹೇಳಿದ್ದಾರೆ.

Advertisement

ಅಯೋಧ್ಯೆಯಲ್ಲಿರುವ ಕಟ್ಟಡ ಎಂದಿಗೂ ಮಸೀದಿಯ ರಚನೆಯಾಗಿರಲಿಲ್ಲ. ಮಸೀದಿಯ ರಚನೆಯ ಒಳಗಿರುವ ಮೂರ್ತಿಗಳು ಇಸ್ಲಾಂ ಧರ್ಮದ ನಂಬಿಕೆಗಳಿಗೆ ವಿರುದ್ಧವಾಗಿವೆ. ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಸ್ಥಳದಲ್ಲಿ ಯಾವುದೇ ವ್ಯಕ್ತಿಯ ಮೂರ್ತಿಯನ್ನು ಇಟ್ಟಿರುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ 1990ಕ್ಕೂ ಮುನ್ನ ತೆಗೆದ ಫೋಟೋಗಳು, ನಕ್ಷೆಗಳು ಹಾಗೂ ಇತರ ಮಾಹಿತಿಯಗಳನ್ನು ಅವರು ನ್ಯಾಯಮೂರ್ತಿಗಳಿಗೆ ಸಲ್ಲಿಸಿದ್ದಾರೆ. ಅಲ್ಲದೆ, ವಿವಾದಿತ ಕಟ್ಟಡದಲ್ಲಿ ಹಿಂದೂಗಳು ಆರಾಧಿಸುವ ಹಲವು ದೇವರುಗಳ ಕೆತ್ತನೆ ಇದೆ ಎಂದೂ ಅವರು ಹೇಳಿದ್ದಾರೆ.

ಅಷ್ಟೇ ಅಲ್ಲ, ವಿವಾದಿತ ಜಾಗಕ್ಕೆ 1950 ಏಪ್ರಿಲ್ 16 ರಂದು ಕಮಿಷನರ್‌ ಭೇಟಿ ನೀಡಿದ್ದಾಗ ಅವರು ಅಧ್ಯಯನ ನಡೆಸಿ ನೀಡಿದ ವರದಿಯನ್ನು ವೈದ್ಯನಾಥನ್‌ ಕೋರ್ಟ್‌ಗೆ ಸಲ್ಲಿಸಿದ್ದಾರೆ. ನ್ಯಾಯಾಲಯವೇ ಆಗ ಕಮಿಷನರ್‌ ಅನ್ನು ನೇಮಿಸಿತ್ತು. ಈ ಸಮಿತಿಯು ಶಿವ ದೇವರ ಕೆತ್ತನೆಗಳನ್ನು ಕಂಡಿರುವುದಾಗಿ ವರದಿ ಮಾಡಿದೆ. ಸಾಮಾನ್ಯವಾಗಿ ಇಂತಹ ಕೆತ್ತನೆಗಳು ಮಸೀದಿಯಲ್ಲಿ ಕಂಡುಬರುವುದಿಲ್ಲ. ಬದಲಿಗೆ ಇವು ದೇಗುಲಗಳಲ್ಲಿ ಮಾತ್ರ ಕಾಣಿಸುತ್ತವೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next