Advertisement

ಜನತಾ ನ್ಯಾಯಾಲಯದಲ್ಲಿ ಸೋತರಷ್ಟೇ ಅನರ್ಹ

10:32 PM Nov 26, 2019 | Lakshmi GovindaRaj |

15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಗವಾಡ ಕ್ಷೇತ್ರವೂ ಒಂದು. ಕಾಂಗ್ರೆಸ್‌ ಪಕ್ಷದಿಂದ ಪಕ್ಷಾಂತರಗೊಂಡು ಬಿಜೆಪಿ ಸೇರಿದ ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ ಮತ್ತೆ ಉಪಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದಾರೆ. “ಉದಯವಾಣಿ’ ಕೇಳಿದ ಪಂಚ ಪ್ರಶ್ನೆಗೆ ಅವರು ನೀಡಿದ ಉತ್ತರ ಇಲ್ಲಿದೆ.

Advertisement

1. ಚುನಾವಣೆ ಸ್ಪರ್ಧೆಯನ್ನು ಯಾವ ವಿಷಯ ಆಧರಿಸಿ ಎದುರಿಸುತ್ತೀರಿ?

2. ಮತದಾರರು ನಿಮ್ಮನ್ನು ಮರು ಆಯ್ಕೆ ಯಾಕೆ ಮಾಡಬೇಕು?

3. ಅನರ್ಹರು ಎಂದು ಕರೆಯಿಸಿಕೊಳ್ಳಲು ಮುಜುಗರ ಆಗುವುದಿಲ್ಲವೇ?

4. ಗೆದ್ದರೆ ಇಷ್ಟು ದಿನ ನೀವು ವಿರೋಧಿಸಿದ್ದ ಸಿದ್ಧಾಂತ ಈಗ ಅಪ್ಪಿಕೊಂಡಿರುವ ಬಿಜೆಪಿ ಸಿದ್ಧಾಂತ ಹೊಂದಾಣಿಕೆ ಆಗುತ್ತದೆಯೇ? ಸೋತರೆ ರಾಜಕೀಯ ವನವಾಸವೇ?

Advertisement

5. ಸರ್ಕಾರ ಉರುಳಿಸಲು ಮತ್ತು ಸೃಷ್ಟಿಸಲು ನಿಮ್ಮ ಹಿಂದೆ ಇದ್ದ ಶಕ್ತಿ ಯಾವುದು?

1. ಕಾಗವಾಡ ಕ್ಷೇತ್ರದ ಸಮಗ್ರ ಅಭಿವೃದ್ಧಿ ನಮ್ಮ ಚುನಾವಣಾ ವಿಷಯ. ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಇದು ಸದಾ ಮಳೆ ಕೊರತೆ ಇರುವ ಪ್ರದೇಶ. ಕುಡಿಯುವ ನೀರಿನ ಸಮಸ್ಯೆ ಬಹಳ. ಇದೆಲ್ಲಕ್ಕೂ ಪರಿಹಾರ ಕಂಡುಕೊಳ್ಳುವ ಸವಾಲು ನಮ್ಮ ಮುಂದಿದೆ. ಮಹಾರಾಷ್ಟ್ರದ ಜತೆ ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ನೀರು ತರುವ ಒಪ್ಪಂದ ಮಾಡಿಕೊಳ್ಳಬೇಕಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಮಂಜೂರಾತಿ ತರಬೇಕಿದೆ. ಪ್ರಮುಖ ನೀರಾವರಿ ಯೋಜನೆಯಿಂದ 50 ಹಳ್ಳಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆಯಿದೆ.

2. ಕ್ಷೇತ್ರದ ಪ್ರಗತಿಯ ಉದ್ದೇಶದಿಂದ ಜನರು ನನಗೆ ಬೆಂಬಲ ನೀಡಬೇಕು. ಶ್ರೀಮಂತ ಪಾಟೀಲ ಎಂಥ ವ್ಯಕ್ತಿ ಎಂಬುದು ಜನರಿಗೆ ಗೊತ್ತಿದೆ. ಭವಿಷ್ಯದಲ್ಲಿ ಕ್ಷೇತ್ರದ ಸುಧಾರಣೆ ಆಗಬೇಕೆಂದರೆ ನನಗೆ ಬೆಂಬಲ ನೀಡಬೇಕು ಎಂದು ಕೇಳುತ್ತಿದ್ದೇನೆ. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಾಕಷ್ಟು ಅನುದಾನ ಬರಲಿದೆ ಎಂದು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇನೆ. ಜನರೂ ಸಹ ಕ್ಷೇತ್ರದ ಸುಧಾರಣೆ ಬಗ್ಗೆ ವಿಚಾರ ಮಾಡುತ್ತಾರೆ ಎಂಬ ನಂಬಿಕೆ ಇದೆ.

3. ಎಲ್ಲರೂ ಈ ರೀತಿ ಹೇಳುವುದು ತಪ್ಪು. ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಸಾರ್ವಭೌಮರು. ಅವರು ತಮಗೆ ಅನಿಸಿದ್ದನ್ನು ಹೇಳಿದ್ದಾರೆ. ಆದರೆ ನಾವು ಈಗ ಜನತಾ ನ್ಯಾಯಾಲಯದ ಮುಂದೆ ನಿಂತಿದ್ದೇವೆ. ಒಂದು ವೇಳೆ ಚುನಾವಣೆಯಲ್ಲಿ ಜನತಾ ಜನಾರ್ದನರು ನಮ್ಮ ವಿರುದ್ಧ ತೀರ್ಪು ನೀಡಿದರೆ ಆಗ ನಾವು ನಿಜವಾದ ಅನರ್ಹರು.

4. ಬಿಜೆಪಿ ತತ್ವ ಮತ್ತು ಸಿದ್ಧಾಂತಗಳ ಮೇಲೆ ನಂಬಿಕೆ ಇದೆ. ಈ ಸರ್ಕಾರದಿಂದ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂಬ ವಿಶ್ವಾಸ ಇದೆ. ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಕಾರಣಕ್ಕೆ ಇದನ್ನು ಹೇಳುತ್ತಿಲ್ಲ. ರಾಜಕಾರಣದಲ್ಲಿ ಬದಲಾವಣೆ ಸಹಜ. ಹಿಂದಿನ ಚುನಾವಣೆಗೂ ಈಗಿನ ಚುನಾವಣೆಗೂ ವ್ಯತ್ಯಾಸ ಇದೆ. ಆಗಿನ ಪರಿಸ್ಥಿತಿ ಈಗ ಇಲ್ಲ. ನಮ್ಮದು ಅಭಿವೃದ್ಧಿ ಪರ ಆಲೋಚನೆ. ನಾನು ರಾಜಕೀಯ ಮಾಡಬೇಕು ಎಂಬ ಕಾರಣದಿಂದ ರಾಜಕಾರಣಕ್ಕೆ ಬಂದವನಲ್ಲ. ಜನರ ಸೇವೆ ನನ್ನ ಮುಖ್ಯ ಗುರಿ. ರಾಜಕಾರಣದ ಉಪಯೋಗ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ. ಇದೇ ಕಾರಣದಿಂದ ಜನರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ. ಪ್ರಚಾರಕ್ಕೆ ಹೋದ ಕಡೆಗೆಲ್ಲ ಜನರು ನಿಮ್ಮನ್ನು ಮತ್ತೆ ಬೆಂಗಳೂರಿಗೆ (ವಿಧಾನಸೌಧಕ್ಕೆ) ಕಳಿಸುತ್ತೇವೆ ಎಂದು ಹೇಳುತ್ತಿದ್ದಾರೆ.

5. ಯಾವ ಶಕ್ತಿಯೂ ಇಲ್ಲ. ಅದೆಲ್ಲ ಸುಳ್ಳು. ಮೈತ್ರಿ ಸರ್ಕಾರದಿಂದ ಕ್ಷೇತ್ರಕ್ಕೆ ಅನುದಾನ ಬರಲಿಲ್ಲ. ಕುಡಿಯುವ ನೀರಿನ ಯೋಜನೆಗಳಿಗೆ ಮಂಜೂರಾತಿ ಸಿಗಲಿಲ್ಲ. ಇದರಿಂದ ಬೇಸರವಾಯಿತು. ಇದೇ ರೀತಿ ಸುಮ್ಮನಿದ್ದರೆ ಐದು ವರ್ಷ ವ್ಯರ್ಥವಾಗಿ ಹಾಳಾಗುತ್ತದೆ ಎನಿಸಿತು. ಆದ್ದರಿಂದ ಹೊರಬಂದೆವು. ನಮಗೆ ಕ್ಷೇತ್ರದ ಮತದಾರರೇ ಶಕ್ತಿ. ಸರ್ಕಾರ ಉರುಳಿಸುವ ಅಥವಾ ಸೃಷ್ಟಿಸುವ ಕೆಲಸವನ್ನು ನಾವು ಮಾಡುವುದಿಲ್ಲ.

ಶಿವಾಜಿನಗರ ಅನರ್ಹತೆ ಪ್ರಶ್ನೆಯಿಲ್ಲ: ಅನರ್ಹ ಶಾಸಕರ 15 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅನರ್ಹಗೊಂಡಿರುವ ರೋಷನ್‌ ಬೇಗ್‌ ಅವರು ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಅನರ್ಹತೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದರಿಂದ ಅವರಿಗೆ ಪಂಚ ಪ್ರಶ್ನೆಗಳು ಅನ್ವಯ ಆಗುವುದಿಲ್ಲ ಎನ್ನುವ ಕಾರಣಕ್ಕೆ ಶಿವಾಜಿನಗರ ಕ್ಷೇತ್ರದಲ್ಲಿ ಆರ್‌. ರೋಷನ್‌ ಬೇಗ್‌ ಅವರಿಗೆ ಪಂಚ ಪ್ರಶ್ನೆಗಳನ್ನು ಕೇಳಲಾಗಿಲ್ಲ.

ಆರ್‌.ಶಂಕರ್‌, ರಾಣಿಬೆನ್ನೂರು: ಅದೇ ರೀತಿ ರಾಣೆಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್‌. ಶಂಕರ್‌ ಅವರೂ ಈ ಉಪ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದರಿಂದ ಅವರಿಗೂ ಈ ಪ್ರಶ್ನೆಗಳನ್ನು ಕೇಳಿಲ್ಲ. ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಆ ಪಕ್ಷಕ್ಕೆ
ಅನರ್ಹತೆಯ ಪ್ರಶ್ನೆ ಎದುರಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next