ಪೆನ್ಸಿಲ್ವೇನಿಯಾ: ಇಲ್ಲಿನ ಬಟ್ಲರ್ ನಗರದಲ್ಲಿ ರಿಪಬ್ಲಿಕನ್ ಪಕ್ಷದ ಪರವಾಗಿ ಚುನಾವಣಾ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮೇಲೆ ಗುಂಡಿನ ದಾಳಿಯಾಗಿದೆ. ಬಂಧೂಕುಧಾರಿ ಹಾರಿಸಿದ ಗುಂಡು ಟ್ರಂಪ್ ಅವರ ಬಲ ಕಿವಿಯನ್ನು ಛೇದಿಸಿಕೊಂಡು ಸಾಗಿದೆ. ಅದೃಷ್ಟವಶಾತ್ ಟ್ರಂಪ್ ಯಾವುದೇ ಗಂಭೀರ ಗಾಯವಿಲ್ಲದೆ ಪಾರಾಗಿದ್ದಾರೆ.
FBI ತನಿಖಾಧಿಕಾರಿಗಳು ದಾಳಿ ಮಾಡಿದ ವ್ಯಕ್ತಿಯನ್ನು ಥಾಮಸ್ ಮ್ಯಾಥ್ಯೂಸ್ ಕ್ರೂಕ್ಸ್ ಎಂದು ಗುರುತಿಸಿದ್ದಾರೆ. 20 ವರ್ಷದ ಯುವಕ ಇಂದು ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಯುಎಸ್ ಕಾನೂನು ಜಾರಿ ಅಧಿಕಾರಿಗಳ ಪ್ರಕಾರ ಅವರು ಪೆನ್ಸಿಲ್ವೇನಿಯಾ ನಿವಾಸಿ.
ಟ್ರಂಪ್ ಮೇಳೆ ದಾಳಿಯಾದ ತಕ್ಷಣ ಸೀಕ್ರೆಟ್ ಸರ್ವಿಸ್ ನ ಸ್ನೈಪರ್ ಗಳು ಈ ದಾಳಿಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಟ್ರಂಪ್ ಮಾತನಾಡುತ್ತಿದ್ದ ವೇದಿಕೆಯಿಂದ ಸುಮಾರು 148 ಗಜಗಳಷ್ಟು ದೂರದ ಕಟ್ಟಡವೊಂದರ ಮೇಲಿನಿಂದ ಥಾಮಸ್ ಮ್ಯಾಥ್ಯೂಸ್ ಕ್ರೂಕ್ಸ್ ಗುಂಡಿನ ದಾಳಿ ನಡೆಸಿದ್ದಾನೆ.
ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಅವರು ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್ ನ ನಿವಾಸಿ. ರಾಜ್ಯದ ಮತದಾರರ ದಾಖಲೆಗಳ ಪ್ರಕಾರ, ಅವರು ನೋಂದಾಯಿತ ರಿಪಬ್ಲಿಕನ್.
ಶನಿವಾರ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆ ಪ್ರಚಾರ ನಡೆಸುತ್ತಿದ್ದ ವೇಳೆ ಟ್ರಂಪ್ ಮೇಲೆ ದಾಳಿಯಾಗಿದೆ. ಯುಎಸ್ ಅಧ್ಯಕ್ಷ ಜೋ ಬಿಡೆನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರು ಈ ಘಟನೆಯನ್ನು ಖಂಡಿಸಿದ್ದಾರೆ.