ತುರುವೇಕೆರೆ: ತಾಲೂಕಿನ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಕೋವಿಡ್ ವೇಳೆ ತಮ್ಮಗಳ ಆರೋಗ್ಯವನ್ನೂ ಲೆಕ್ಕಿಸದೆ ನಮ್ಮೊಂದಿಗೆ ಕೈಜೋಡಿಸಿ ಶ್ರಮಿಸಿದ ತಾಲೂಕಿನ ಜನತೆಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಮಸಾಲ ಜಯರಾಂ ಹೇಳಿದರು.
ಪಟ್ಟಣದ ಖಜಾನ ಲೇಔಟ್‌ನಲ್ಲಿ ರೋಟರಿ ಟ್ರಸ್ಟ್‌ವತಿಯಿಂದ ರೋಟರಿ ಸೇವಾ ಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನಲ್ಲಿ ರೋಟರಿ ಸಂಸ್ಥೆ ಅನೇಕ ಉತ್ತಮ ಸೇವಾ ಕಾರ್ಯ ಮಾಡುವ ಮೂಲಕ ತಾಲೂಕಿನ ಜನತೆಗೆ ಅನುಕೂಲ ಕಲ್ಪಿಸಿದೆ ಎಂದರು.
ಆ ನಿಟ್ಟಿನಲ್ಲಿ ತಾಲೂಕಿನ ಯಾವುದೇ ಸೇವಾ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಸಹಕಾರ ನೀಡಲು ನಾನು ಸದಾ ಸಿದ್ಧ. ಸೇವಾ ಭವನಕ್ಕೆ 1 ಲಕ್ಷ ರೂ.ಗಳನ್ನು ದೇಣಿಗೆಯಾಗಿ ಸ್ಥಳದಲ್ಲಿಯೇ ನೀಡಿ, ಕೇವಲ ಅರ್ಧ ಅಡಿ ಜಾಗಕ್ಕಾಗಿ ಕಿತ್ತಾಡುವ ಇಂದಿನ ದಿನಗಳಲ್ಲಿ ಪ್ರದೀಪ್ ಗುಪ್ತಾ ಅವರು ಉಚಿತವಾಗಿ ನಿವೇಶನವನ್ನು ರೋಟರಿ ಸಂಸ್ಥೆಗೆ ನೀಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಅಧ್ಯಕ್ಷ ಅವಧಿಯಲ್ಲಿಯೇ ರೋಟರಿ ಸೇವಾ ಭವನ ನಿರ್ಮಾಣ ಮಾಡಿದ್ದು ಅವರಿಗೆ ದೇವರು ಆಯುರಾರೋಗ್ಯ ದಯಪಾಲಿಸಲಿ. ತಾಲೂಕಿನಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಜ್ವರ ಬಂದಲ್ಲಿ ಕೂಡಲೆ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷಿಸಿಕೊಳ್ಳುವ ಮೂಲಕ ನಾಗರಿಕರು ಇದರ ಪ್ರಯೋಜನ ಪಡೆದು ಕೊಳ್ಳುವಂತೆ ಸಲಹೆ ನೀಡಿದರು.
ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಅಖಂಡ ವಿಶ್ವ ಎಲ್ಲೋ ಒಂದು ಕಡೆ ನೋವಲ್ಲಿದೆ. ದುಡ್ಡಿದ್ದವನು ಶ್ರೀಮಂತನಲ್ಲ. ಆರೋಗ್ಯವಾಗಿರುವವನು ಶ್ರೀಮಂತ. ಮಾನವನ ಆಸೆಗೆ ಕೊನೆಯಿಲ್ಲ. ಎಲ್ಲವೂ ಬೇಕೆಂಬ ಆಸೆ. ಯೋಗ ಎಲ್ಲರಿಗೂ ದೊರಕಬಹುದು ಆದರೆ ಯೋಗ್ಯತೆ ಎಲ್ಲರಿಗೂ ಬರಲಾಗದು. ಆ.5 ರಂದು ಅಖಂಡ ಭಾರತಕ್ಕೆ ಒಳ್ಳೆ ದಿನವಾಗಲಿದ್ದು, ಮಣ್ಣಲ್ಲಿ ಮಣ್ಣಾಗುವ ಈ ದೇಹ ಇದ್ದಷ್ಟು ದಿನ ಸಂಘ ಸಂಸ್ಥೆಗಳಲ್ಲಿ ತೊಡಗಿ ಸಮಾಜಕ್ಕಿಷ್ಟು ಕೆಲಸ ಮಾಡೋಣ ಎಂದರು.
ಜಿಲ್ಲಾ ಗವರ್ನರ್ ರೋ.ನಾಗೇಂದ್ರ ಪ್ರಸಾದ್ ನೂತನ ಅಧ್ಯಕ್ಷ ಎಸ್.ಎಲ್. ರಾಜಣ್ಣನವರಿಗೆ ಅಧಿಕಾರ ಹಸ್ತಾಂತರಿಸಿದರು. ಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಂ, ಪ್ರಕಾಶ್ ಗುಪ್ತಾ, ಬೆಂಗಳೂರಿನ ರೋಟರಿ ಲೆಪ್ಟಿನೆಂಟ್ ಕೆ.ಪಿ. ನಾಗೇಶ್, ರೋ.ಬಿಳಿಗೆರೆ ಶಿವಕುಮಾರ್ ಇದ್ದರು.