ಸುಳ್ಯ: ದಕ್ಷಿಣ ಕನ್ನಡ- ಕೊಡಗು ಗಡಿ ಭಾಗದ ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ಬುಧವಾರ ಕಾಣಿಸಿಕೊಂಡ ಮಹಿಳೆ ನಕ್ಸಲ್ ಅಲ್ಲ ಎಂಬುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.
ಕೂಜಿಮಲೆ ಎಸ್ಟೇಟ್‌ನ ರಬ್ಬರ್ ತೋಟದಲ್ಲಿ ಬುಧವಾರ ಮಧ್ಯಾಹ್ನ ವೇಳೆಗೆ ಅಪರಿಚಿತ ಮಹಿಳೆಯೊಬ್ಬರು ಕಾಣಿಸಿಕೊಂಡಿದ್ದು, ಎಸ್ಟೇಟ್‌ನವರು ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಎಎನ್‌ಎಫ್ ತಂಡ ಹಾಗೂ ಪೊಲೀಸರು ಶೋಧ ನಡೆಸಿದ್ದರು. ಕಾರ್ಯಚರಣೆ ವೇಳೆ ಅಪರಿಚಿತ ಮಹಿಳೆ ಪತ್ತೆಯಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಆಕೆ ನಕ್ಸಲ್ ತಂಡಕ್ಕೆ ಸೇರಿದವರಲ್ಲ ಎಂಬುದು ದೃಢಪಟ್ಟಿದೆ. ಮಹಿಳೆ ರಾಜಸ್ಥಾನ ಮೂಲದವರಾಗಿದ್ದು, ಆಕೆಯನ್ನು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆಗೊಳಪಡಿಸಿ, ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಆಶ್ರಮಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ಕೊಡಗು ಎಸ್.ಪಿ. ತಿಳಿಸಿದ್ದಾರೆ.
ಕೂಜಿಮಲೆ ಎಸ್ಟೇಟ್‌ನಲ್ಲಿ ಶಂಕಿತ ಮಹಿಳೆಯ ಓಡಾಟ ಪತ್ತೆಯಾಗಿರುವ ವಿಷಯ ತಿಳಿದ ಎಎನ್‌ಎಫ್ ಹಾಗೂ ಕೊಡಗು ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಸಿಬಂದಿ ಎಸ್ಟೇಟ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದು, ಆಕೆಯನ್ನು ಪತ್ತೆಹಚ್ಚಿ ಮಡಿಕೇರಿಗೆ ಕರೆತಲಾಗಿದೆ. ರಾತ್ರಿ 2 ಗಂಟೆ ತನಕ ನಡೆದ ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲಾ ಮೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು. ವಿಚಾರಣೆ ಬಳಿಕ ಆ ಮಹಿಳೆ ನಕ್ಸಲ್ ತಂಡಕ್ಕೆ ಸೇರಿದವರು ಅಲ್ಲ ಎಂದು ದೃಢಪಟ್ಟಿದೆ. ಕೊಡಗು ಜಿಲ್ಲಾ ಪೊಲೀಸ್ ಹಾಗೂ ಎಎನ್‌ಎಫ್ ತಂಡ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.
ಸಂಶಯಕ್ಕೆ ಕಾರಣ:
ಕೂಜಿಮಲೆ ಹಾಗೂ ಐನೆಕಿದು ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ಮಾಹಿತಿಯಂತೆ ನಕ್ಸಲ್ ನಿಗ್ರಹ ಪಡೆಯವರು ನಿರಂತರ ಶೋಧ ನಡೆಸುತ್ತಿದ್ದಾರೆ. ಈ ಮಧ್ಯೆ ಬುಧವಾರ ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ಅಪರಿಚಿತ ಮಹಿಳೆ ಕಾಣಿಸಿಕೊಂಡಿದ್ದು, ಸಂಶಯಗೊಂಡ ಸ್ಥಳೀಯರು ಪೊಲೀಸರು, ಎಎನ್‌ಎಫ್‌ಗೆ ಮಾಹಿತಿ ನೀಡಿದ್ದರು. ಇತ್ತೀಚೆಗೆ ಅಂಗಡಿಗೆ, ಮನೆಗೆ ಭೇಟಿ ನೀಡಿದ ಶಂಕಿತರ ತಂಡದಲ್ಲೂ ಮಹಿಳೆಯವರು ಇದ್ದರು ಎಂಬ ಮಾಹಿತಿಯಿಂದ ಸಹಜವಾಗಿ ಸ್ಥಳೀಯರಲ್ಲಿ ಸಂಶಯ ಮೂಡಿತ್ತು. ಈಗ ಪೊಲೀಸ್ ತನಿಖೆಯಿಂದ ಅಪರಿಚಿತ ಒಂಟಿ ಮಹಿಳೆಯ ಬಗೆಗಿನ ಸಂಶಯ ದೂರವಾಗಿದೆ.